ಮಳವಳ್ಳಿ: ಭಾಷಾ ಚಳವಳಿ, ರೈತ ಚಳವಳಿ, ದಲಿತ ಚಳವಳಿಗಳು ಪ್ರಸ್ತುತ ದಿನಗಳಲ್ಲಿ ಸೊರಗಿವೆ. ಈ ಚಳವಳಿಗಳಿಗೆ ಹೊಸ ಚೈತನ್ಯ ಶಕ್ತಿ ನೀಡುವ ಅಗತ್ಯವಿದೆ ಎಂದು ಕವಿಕಾವ್ಯ ಮೇಳ ಸಮ್ಮೇಳನಾಧ್ಯಕ್ಷ ಡಾ.ನೆಲ ಮಾಕನಹಳ್ಳಿ ಬಸಪ್ಪ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಡಾ.ಜೀ ಶಂಪ ಸಾಹಿತ್ಯ ವೇದಿಕೆ, ರಾಜ್ಯ ಕವಿಮಿತ್ರ ಕೂಟ, ಮಂಡ್ಯ, ತಾಲೂಕು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್, ಮಳವಳ್ಳಿ ಇವರ ಆಶ್ರಯದಲ್ಲಿ 27ನೇ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.
ಚಳವಳಿಗಳು, ಹೋರಾಟಗಳು ಎಂದಿಗೂ ದುರ್ಬಲ ವಾಗಬಾರದು. ಅಧಿಕಾರದಲ್ಲಿರುವವರನ್ನು ಸದಾ ಜಾಗೃತ ಸ್ಥಿತಿಯಲ್ಲಿಡಲು ಹೋರಾಟಗಳು ಬಹಳ ಮುಖ್ಯ. ಜಟಿಲ ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನ ದನಿ ಮೂಡಿದಾಗ ಶಕ್ತಿ ಹೆಚ್ಚುತ್ತದೆ. ಕನ್ನಡದ ಉಳಿವಿಗೆ ನಡೆಸಿದ ಗೋಕಾಕ್ ಚಳವಳಿ ನಮಗೆ ಸ್ಫೂರ್ತಿಯಾಗಿದ್ದು, ಅದೇ ಮಾದರಿಯ ಮತ್ತೂಂದು ಹೋರಾಟಕ್ಕೆ ನಾವೆಲ್ಲರೂ ಸಜ್ಜಾಗ ಬೇಕಿದೆ ಎಂದು ಹೇಳಿದರು.
ಬ್ಯಾಂಕಿಂಗ್, ರೈಲ್ವೆ, ಕೆಎಎಸ್, ಐಪಿಎಸ್ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ಹೋರಾಟ ರೂಪಿಸುವುದು, ಕನ್ನಡದಲ್ಲಿ ವ್ಯಾಸಂಗ ಮಾಡಿದವರಿಗೆ ಹುದ್ದೆಗಳಲ್ಲಿ ಮೀಸಲು ದೊರಕಿಸುವುದಲ್ಲದೆ, ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡ ಬೇಕು. ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಕನ್ನಡ ಸರ್ಕಾರಿ ಶಾಲೆ ಮುಚ್ಚದಂತೆ ನೋಡಿಕೊಳ್ಳುವುದು. ಬರಗೂರು ರಾಮಚಂದ್ರಪ್ಪನ ವರ ವರದಿ ಜಾರಿಗೆ ಒತ್ತಡ ಹೇರುವುದರೊಂದಿಗೆ ಕನ್ನಡ ಪರ ವಾತಾವರಣ ಸೃಷ್ಟಿಯಾದಾಗ ಭಾಷೆಯ ಉಳಿವು ಸಾಧ್ಯವಾಗಲಿದೆ ಎಂದರು.
ಮಹಾರಾಷ್ಟ್ರದ ಧಾಬೋಲ್ಕರ್, ಕರ್ನಾಟಕದ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ, ಚಿಂತಕರನ್ನು ಚಿಂತೆಗೀಡು ಮಾಡಿದೆ. ಸಾವಿಗೆ ಹೆದರಿ ಸತ್ಯ ಮಾರೆಮಾಚದೆ ಹೊರಗೆಳೆದ ಚಿಂತಕರಿಗೆ ಸಾವಿನ ಭಯ ಹುಟ್ಟಿಸುವುದು, ಹತ್ಯೆ ಮಾಡುವುದು ಖಂಡನಿಯ. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಸಾವಿಗೀಡಾದಾಗ ಸಂಭ್ರಮಿಸಿದವರ ಮನಸ್ಸು ಪರಿವರ್ತನೆಯಾಗಬೇಕು. ಪ್ರತಿಯೊಬ್ಬರಿಗೂ ಮಾತ ನಾಡುವ ಹಕ್ಕಿದೆ. ಆದರೆ, ಅದು ಸತ್ಯ ಮತ್ತು ಒಳ್ಳೆಯ ದಾರಿಯಲ್ಲಿ ಸಾಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ನೀಡಿದ ಹಕ್ಕು ಎಂಬುದು ಸತ್ಯದ ಸಂಗತಿ ಎಂದರು.
ನಾವೆಲ್ಲರೂ ಭಾರತಿಯರು ಎಂಬ ಭಾವನೆ ಮೂಡಿದ ನಂತರ ಕನ್ನಡಿಗರು ಎಂಬ ಪ್ರಜ್ಞೆ ಜಾಗೃತವಾಗಬೇಕು. ಹಲವು ಬಗೆಯ ಧರ್ಮ, ಮತ, ಪಂಥಗಳು, ಆಚಾರ-ವಿಚಾರಗಳು, ಭಾಷೆ ಹಾಗೂ ಭಾವದ ಸಾಮರಸ್ಯ ನಮ್ಮಲ್ಲಿ ಬೆಳೆಯಬೇಕು. ಜನ ವಿರೋಧಿ ದುಷ್ಟ ಶಕ್ತಿಗಳಿಗೆ ಸೊಪ್ಪು ಹಾಕದೆ ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಸಹೋದರತೆ ಬೆಳೆಸ ಬೇಕು ಎಂದು ಹೇಳಿದರು.