ಹುನಗುಂದ: ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು. ಈಚೆಗೆ ಕೆಲವರು ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವ ಪಾಪದ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಸ್ವಾಮೀಜಿ ಹೇಳಿದರು.
ಹಾವರಗಿಯಲ್ಲಿ ಎಸ್.ಆರ್. ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನದಿಂದ ಮಾಜಿ ಸಚಿವಲಿಂ| ಎಸ್.ಆರ್. ಕಾಶಪ್ಪನವರ 16ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಕೀಯಕ್ಕಾಗಿ ಧರ್ಮ ಬಳಸಿಕೊಂಡವರ ಸ್ಥಿತಿ ಏನಾಯಿತು ಎಂಬುದು ರಾಜ್ಯಕ್ಕೆ ಗೊತ್ತಿದೆ. ಈ ಸಂದರ್ಭದಲ್ಲಿ ಲಿಂ| ಎಸ್.ಆರ್ ಕಾಶಪ್ಪನವರ ಇದ್ದಿದ್ದರೇ ರಾಜಕೀಯ ಲಾಭಕ್ಕಾಗಿ ಧರ್ಮ ಬಳಸಿಕೊಳ್ಳುವುದಕ್ಕೆ ಬಿಡುತ್ತಿರಲಿಲ್ಲ ಎನ್ನುವುದು ನಮ್ಮ ಮನಸ್ಸಿನಲ್ಲಿದೆ. ಅವರು ಲಿಂಗೈಕ್ಯರಾಗಿ 16 ವರ್ಷ ಗತಿಸಿದರೂ ಅವರನ್ನು ಇನ್ನು ಮರೆಯುವುದಕ್ಕೆ ಆಗಿಲ್ಲ. ಅಂದರೆ ಅವರ ಜೀವಿತದ ಕಾಲದಲ್ಲಿ ಎಷ್ಟು ಜನರಿಗೆ ಉಪಕಾರ ಮಾಡಿದ್ದರೂ ಎನ್ನುವುದನ್ನು ತಿಳಿಸುತ್ತದೆ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಮ್ಮ ತಂದೆಯವರ ಆಚಾರ ವಿಚಾರ ಈ ತಾಲೂಕಿನ ಜನಸಾಮಾನ್ಯರ ಮತ್ತು ರೈತರ ಬಗ್ಗೆ ಇದ್ದ ಕಾಳಜಿ ಕಳಕಳಿ ಸದಾ ನಮಗೆ ಆದರ್ಶವಾಗಿವೆ ಎಂದು ಹೇಳಿದರು.
ನಂದವಾಡಗಿ ಆಳಂದದ ಮಹಾಂತಲಿಂಗ ಸ್ವಾಮೀಜಿ, ಬಿಲ್ಕೆರೂರದ ಸಿದ್ದಲಿಂಗ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಕಲ್ಮಠದ ಕೊಟ್ಟೂರ ಸ್ವಾಮೀಜಿ, ಸಿ.ವಿ ಕೋಟಿ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ದಿಂಡವಾರದ ಕುಮಾರಲಿಂಗ ಸ್ವಾಮೀಜಿ, ಹಡಗಲಿ ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಮುತ್ತತಿಯ ಗುರುಲಿಂಗ ಸ್ವಾಮೀಜಿ, ಸಿದ್ದಕೊಳ್ಳದ ಡಾ| ಶಿವಕುಮಾರ ಸ್ವಾಮೀಜಿ, ರಾಮದುರ್ಗದ ಡಾ|ರಾಜೇಂದ್ರ ಮುತ್ಯಾ, ಶಿವಾನಂದ ಕಾಶಪ್ಪನವರ, ಎಸ್.ಆರ್.ಕೆ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಬಸವರಾಜ ಶಿರೂರ, ಖಜಾಚಿ ದೇವಾನಂದ ಕಾಶಪ್ಪನವರ, ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ, ಜಿಪಂ ಸದಸ್ಯೆ ಚಂದಮ್ಮ ಓಲೇಕಾರ, ತಾಪಂ ಸದಸ್ಯರಾದ ಮಂಜುನಾಥ ಗೌಡರ, ಅನಿಲ ನಾಡಗೌಡ್ರ, ಬಸವರಾಜ ಗೋತಗಿ, ಚಂದಪ್ಪ ಮಾದರ ಉಪಸ್ಥಿತರಿದ್ದರು.
ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ವಾಗತಿಸಿದರು.