Advertisement

ಜನರ ಉದ್ಧರಿಸುವ ಧರ್ಮ ಒಡೆಯುವುದು ಸಲ್ಲ

04:02 PM Jul 14, 2019 | Team Udayavani |

ಗದಗ: ಎಲ್ಲ ಧರ್ಮಗಳು ಮಾನವನ ಉದ್ದಾರ, ಮಾನವೀಯತೆಯ ಉಳಿವಿಗೆ ಅತ್ಯುನ್ನತ ಸಂದೇಶ ನೀಡಿವೆ. ಇಂತಹ ಧರ್ಮವನ್ನು ಒಡೆಯುವ ಪ್ರಯತ್ನಗಳು ಸಲ್ಲದು ಎಂದು ಗಜೇಂದ್ರಗಡದ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.

Advertisement

ಆಷಾಢ ಮಾಸದ ನಿಮಿತ್ತ ಜ| ಪಂಚಾಚಾರ್ಯ ಸೇವಾ ಸಂಘದಿಂದ ಗದುಗಿನ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಆಯೋಜಿಸಿರುವ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಹಾಸ್ವಾಮಿಗಳಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಅಧ್ಯಾತ್ಮ ಪ್ರವಚನ ಮಾಲಿಕೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕಾಶೀ ಶ್ರೀಗಳಿಂದ ಗುರುರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.

ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಬಹು ದೊಡ್ಡ ಸಂದೇಶ ನಮ್ಮ ಮುಂದಿದೆ. ಧರ್ಮವನ್ನು ಗೌರವಿಸುವ, ಧರ್ಮದ ಹಾದಿಯಲ್ಲಿ ಮುನ್ನಡೆಯುವ ಕೆಲಸ ಆಗಬೇಕು. ಆದರೆ, ಧರ್ಮವನ್ನು ಒಡೆಯುವ ಪ್ರಯತ್ನಗಳಿಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಒಂದು ಧರ್ಮವನ್ನು ಒಡೆದು ಇನ್ನೊಂದು ಧರ್ಮವನ್ನು ಸೃಷ್ಟಿಸಲಾಗದು. ಸೂರ್ಯ ಮತ್ತು ಚಂದ್ರನನ್ನು ಪ್ರತ್ಯೇಕಿಸಿ ಇನ್ನೊಂದು ಸೂರ್ಯ ಚಂದ್ರನನ್ನು ಹುಟ್ಟಿಸಲಾದೀತೆ ಹಾಗೆಯೇ ಧರ್ಮವೂ ಕೂಡ ಒಂದೇ ಆಗಿದೆ ಎಂದು ವಿಶ್ಲೇಷಿಸಿದರು.

ನಿಮ್ಮ ಆಚಾರ ವಿಚಾರಗಳು ವಿಭಿನ್ನವಾಗಿದ್ದರೂ, ಮಾನವರೆಲ್ಲರೂ ಒಂದೇ ಧರ್ಮದ ಹಾದಿಯಲ್ಲಿ ಗುರುವಿನ ಸನ್ಮಾರ್ಗದಲ್ಲಿ ಮುನ್ನಡೆದರೆ ಎಲ್ಲರಿಗೂ ಒಳಿತಾಗುವುದು. ಕಾಶೀ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಅಧ್ಯಾತ್ಮ ಪ್ರವಚನವು ಜನತೆಯಲ್ಲಿ ಭಕ್ತಿಯನ್ನು ಧರ್ಮ ಜಾಗೃತಿಯನ್ನುಂಟು ಮಾಡುತ್ತಿದೆ. ಇಂತಹ ಕಾರ್ಯಕ್ರಮಗಳು ಆಗಾಗ ನಡೆಯಲಿ. ಮಹಿಳೆಯರಿಗೆ ಉಡಿ ತುಂಬು ಕಾರ್ಯ ಕೈಗೊಳ್ಳುವ ಮೂಲಕ ಮಹಿಳೆಯರನ್ನು ಗೌರವಿಸುವ ಕಾರ್ಯ ನಡೆದಿದೆ. ಧರ್ಮ ಮಹಿಳೆಯರಿಂದ ಉಳಿದು ಬೆಳೆದು ಬಂದಿದೆ. ತಾಯಿಯ ಮೂಲಕ ಮಕ್ಕಳಿಗೆ ಧರ್ಮಸಂಸ್ಕಾರ ತನ್ಮೂಲಕ ಸಮಾಜದಲ್ಲಿ ಸಂಸ್ಕೃತಿ ಬೆಳೆಯುವಂತಾಗಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next