Advertisement

ಜೂನ್‌ನಿಂದ ಪೌರ ಕಾರ್ಮಿಕರಿಗೆ ಉಪಹಾರ

12:57 PM May 09, 2017 | Team Udayavani |

ದಾವಣಗೆರೆ: ರಾಜ್ಯದ ಸ್ಥಳೀಯ ಸಂಸ್ಥೆಯಲ್ಲಿ ಖಾಲಿ ಇರುವ 32 ಸಾವಿರ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ ಹಂತ ಹಂತವಾಗಿ 12 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್‌. ವೆಂಕಟೇಶ್‌ ತಿಳಿಸಿದ್ದಾರೆ.

Advertisement

ಸೋಮವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳೊಂದಿಗೆ ಸಂವಾದ ನಡೆಸಿದ ಅವರು, ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಖಾಯಮಾತಿಗೆ ತಾಂತ್ರಿಕ ತೊಂದರೆ ಇವೆ. ಹಾಗಾಗಿ ಹರಿಯಾಣ, ಪಂಜಾಬ್‌ ಮಾದರಿಯಲ್ಲಿ ನೇರ ವೇತನ ನೀಡುವ ಹಾಗೂ ಮೊದಲ ಹಂತದಲ್ಲಿ 45 ರಿಂದ 55 ವರ್ಷ ವಯೋಮಾನದವರನ್ನು ನೇಮಕ ಮಾಡುವ ಚಿಂತನೆ ಇದೆ.

ಆಯೋಗದ ಪ್ರಸ್ತಾವನೆ ಕುರಿತಂತೆ ಮೇ. 15ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು. ದಾವಣಗೆರೆಯ ಮಹಾನಗರಪಾಲಿಕೆ ಮತ್ತು ಹರಿಹರ ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಕೊಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಮುಂದಿನ ತಿಂಗಳ 1ನೇ ತಾರೀಖೀನಿಂದ ಬೆಳಗಿನ ಉಪಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಅವರು ಸೂಚಿಸಿದರು. 

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 2 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಅನೇಕರು ಕೆಲಸಕ್ಕೆ ಹಾಜರಾದರೂ ಗುತ್ತಿಗೆದಾರರು ಅಟೆಂಡನ್ಸ್‌ ಪುಸ್ತಕದಲ್ಲಿ ಆಬೆÕಂಟ್‌ (ಗೈರು) ತೋರಿಸುತ್ತಾರೆ ಎಂದು ಹನುಮಕ್ಕ, ನೀಲಪ್ಪ ಇತರರು ದೂರಿದರು. ಕಾರ್ಮಿಕ ಅಧಿಕಾರಿ ಮಂಗಳವಾರ ನಗರಪಾಲಿಕೆಗೆ ಭೇಟಿ ನೀಡಿ, 2 ವರ್ಷದಿಂದ ಆಬೆÕಂಟ್‌ ಹಾಕಿದ ದಿನಕ್ಕೆ ಲೆಕ್ಕ ಹಾಕಿ, ಎಲ್ಲಾ ಹಣವನ್ನು ಒಂದು ವಾರದಲ್ಲಿ ಸಂಬಂಧಿತ ಗುತ್ತಿಗೆದಾರರಿಂದ ಕೊಡಿಸಬೇಕು. 

ಇಲ್ಲದೇ ಹೋದಲ್ಲಿ ಸಂಬಂಧಿತ ಗುತ್ತಿಗೆದಾರರ ವಿರುದ್ಧ ಪರಿಶಿಷ್ಟ ಜಾತಿಯವರಿಗೆ ಮೋಸ, ವಂಚನೆ ಮಾಡಿದ ದೂರು ದಾಖಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಖಾಯಂ, ಗುತ್ತಿಗೆ ಪೌರ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿಯೇ ಇಲ್ಲ ಎಂಬ ದೂರಿನಿಂದ ಆಕ್ರೋಶಗೊಂಡ ಅಧ್ಯಕ್ಷ ವೆಂಕಟೇಶ್‌, ಒಂದು ವಾರದಲ್ಲಿ ಗುರುತಿನ ಚೀಟಿ ನೀಡಬೇಕು.

Advertisement

ಇಲ್ಲದೇ ಹೋದಲ್ಲಿ ಸಂಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಯೋಗಕ್ಕೆ ವಿಚಾರಣೆಗೆ ಕರೆಯಲಾಗುತ್ತದೆ. ನಗರಾಭಿವೃದ್ಧಿ ಕೋಶದ ಅಧಿಕಾರಿಯ ಅಮಾನತಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಗುರುತಿನ ಚೀಟಿ ನೀಡದೇ ಇರುವುದಕ್ಕೆ ಜಾರಿ ಮಾಡಿರುವ ನೋಟಿಸ್‌ ಪ್ರತಿ ತರದ ಕಾರ್ಮಿಕ ಇಲಾಖೆ ಅಧಿಕಾರಿ ಮಮ್ತಾಜ್‌ ಬೇಗಂರನ್ನು ತರಾಟೆಗೆ ತೆಗೆದು ಕೊಂಡರು. 

ಖಾಯಂ ಪೌರ ಕಾರ್ಮಿಕರಂತೆ ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಶವಸಂಸ್ಕಾರದ ವೆಚ್ಚ ಭರಿಸುವ ಕೆಲಸವನ್ನು ದಾವಣಗೆರೆಯಿಂದಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದ ಆಯೋಗದ ಅಧ್ಯಕ್ಷರು, ಎಲ್ಲಾ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳನ್ನು ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಗೆ ತರಲಾಗುವುದು. 

ದಾವಣಗೆರೆ ಮಾದರಿಯಲ್ಲಿ ಗೃಹ ಭಾಗ್ಯ ಯೋಜನೆ ಪ್ರಾರಂಭಿಸಲಾಗುವದು. ಬಾಕಿ ಇರುವ 2 ತಿಂಗಳ ವೇತನದಲ್ಲಿ ಒಂದು ತಿಂಗಳ ವೇತನ ಪಾವತಿಗೆ ವ್ಯವಸ್ಥೆ ಮಾಡುವ ಹಾಗೂ ಪರಿಕರ ವಿತರಣೆ, ಬಳಕೆಯ ಬಗ್ಗೆ ತರಬೇತಿ ಆಯೋಜಿಸುವುದು ಒಳಗೊಂಡಂತೆ ಅನೇಕ ವಿಚಾರಗಳ ಬಗ್ಗೆ ಸವಿವರವಾಗಿ ತಿಳಿಸಿದರು. 

ಆಯೋಗದ ಸದಸ್ಯ ವಾಸುದೇವ್‌, ನಗರಪಾಲಿಕೆ ಸದಸ್ಯ ಎಂ. ಹಾಲೇಶ್‌, ಮುಖಂಡರಾದ ಎನ್‌. ನೀಲಗಿರಿಯಪ್ಪ, ಮಂಜಮ್ಮ, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕುಮಾರ್‌ ಹನುಮಂತಪ್ಪ, ಮಹಾನಗರ ಪಾಲಿಕೆ ಉಪ ಆಯುಕ್ತ(ಆಡಳಿತ) ಜಿ.ಎಂ. ರವೀಂದ್ರ, ನಗರಾಭಿವೃದ್ಧಿ ಕೋಶದ ವೀರೇಂದ್ರಕುಮಾರ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next