Advertisement

ಮೈತ್ರಿ ಭಂಗಕ್ಕೆ ಮುನ್ನುಡಿ ಬರೆದ ಸಮೀಕ್ಷೆ

12:39 AM May 20, 2019 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ರೀತಿಯಲ್ಲಿ ಲೋಕಸಭಾ ಚುನಾವಣೋತ್ತರ ಸಮೀಕ್ಷಾ ಫ‌ಲಿತಾಂಶ ಹೊರಬಿದ್ದಿದ್ದು, ಮೈತ್ರಿ ಪಕ್ಷಗಳಿಗೆ ದೊಡ್ಡ ಆಘಾತ ನೀಡಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಪಕ್ಷಗಳು ಡಬಲ್‌ ಡಿಜಿಟ್‌ ಮುಟ್ಟುವುದು ಅನುಮಾನ ಎನ್ನುವುದನ್ನು ಬಹುತೇಕ ಸಮೀಕ್ಷಾ ಫ‌ಲಿತಾಂಶಗಳು ಹೇಳುತ್ತಿವೆ.

Advertisement

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಪೈಕಿ ಕಾಂಗ್ರೆಸ್‌ 21, ಜೆಡಿಎಸ್‌ 7 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. ಜೆಡಿಎಸ್‌ ಸ್ಪರ್ಧೆ ಮಾಡಿರುವ ಏಳು ಕ್ಷೇತ್ರಗಳಲ್ಲಿ ಮಂಡ್ಯ, ಹಾಸನ ಹಾಗೂ ತುಮಕೂರು ಮೂರು ಕ್ಷೇತ್ರಗಳಲ್ಲಿ ದೇವೇಗೌಡರು ಹಾಗೂ ಅವರ ಮೊಮ್ಮಕ್ಕಳು ಸ್ಪರ್ಧೆ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅದೇ ವಿಷಯ ಮೈತ್ರಿ ಪಕ್ಷ ಕಾಂಗ್ರೆಸ್‌ನವರ ಆಕ್ಷೇಪಕ್ಕೂ ಕಾರಣವಾಗಿತ್ತು.

ಜಂಟಿ ಹೋರಾಟಕ್ಕೆ ಹಿನ್ನಡೆ: ಈಗ ಹೊರ ಬಂದಿರುವ ಹತ್ತಕ್ಕೂ ಹೆಚ್ಚು ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಏಕಾಂಗಿಯಾಗಿ 20 ರಿಂದ 25ರವರೆಗೂ ಗೆಲ್ಲುವ ಸಾಧ್ಯತೆ ಇದೆ. ಇದು ಮೈತ್ರಿ ಪಕ್ಷಗಳ ಜಂಟಿ ಹೋರಾಟಕ್ಕೆ ಸಂಪೂರ್ಣ ಹಿನ್ನಡೆಯಾಗಲಿದೆ ಎಂಬ ಸಂದೇಶ ಈ ಸಮೀಕ್ಷಾ ಫ‌ಲಿತಾಂಶದಿಂದ ಹೊರಬಂದತಾಗಿದೆ.

ಯಾವ ಸಂಸ್ಥೆಯ ಸಮೀಕ್ಷೆಯಲ್ಲಿಯೂ ಜೆಡಿಎಸ್‌ ಮೂರಂಕಿ ದಾಟುವುದಿಲ್ಲ ಎಂದು ತಿಳಿಸಿರುವುದು ಮೈತ್ರಿ ನಾಯಕರ ನಿದ್ದೆಗೆಡಿಸಿದೆ. ಇಂಗ್ಲೀಷ್‌ ಚಾನೆಲ್‌ಗ‌ಳಾದ ಎನ್‌ಡಿಟಿವಿ, ಟೈಮ್ಸ್‌ ನೌ, ಜೆಡಿಎಸ್‌ಗೆ ರಾಜ್ಯದಲ್ಲಿ ಶೂನ್ಯ ಸಾಧನೆಯ ಫ‌ಲಿತಾಂಶ ನೀಡಿದ್ದು, ಚಾಣಕ್ಯ ಹಾಗೂ ಸಿ.ವೋಟರ್ಸ್‌ ಸಮೀಕ್ಷಾ ಸಂಸ್ಥೆಗಳು ಎರಡು ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆಲ್ಲುತ್ತದೆ ಎಂದು ತಿಳಿಸಿವೆ.

ಕಾಂಗ್ರೆಸ್‌ ಕೂಡ 3 ರಿಂದ 9 ರವರೆಗೆ ಗೆಲ್ಲುವ ಬಗ್ಗೆ ಸಮೀಕ್ಷಾ ವರದಿಗಳು ಬಹಿರಂಗಗೊಂಡಿದ್ದು, ಎರಡೂ ಪಕ್ಷಗಳ ನಾಯಕರ ನಿದ್ದೆಗೆಡಿಸುವಂತೆ ಮಾಡಿದೆ. ಈ ಸಮೀಕ್ಷಾ ಫ‌ಲಿತಾಂಶ ಗಮನಿಸಿದರೆ, ಮೇ 23ರ ನಂತರ ಮೈತ್ರಿ ಪಕ್ಷಗಳ ಮುಂದಿನ ನಡೆ ಸಾಕಷ್ಟು ಕುತೂಹಲ ಮೂಡಿಸುವಂತಿದೆ.

Advertisement

ಚುನಾವಣೆ ಸಂದರ್ಭದಲ್ಲಿಯೇ ಮೈತ್ರಿ ಪಕ್ಷಗಳ ನಾಯಕರು ಮೈತ್ರಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿಲ್ಲವೆಂದು ಮಂಡ್ಯ ಹಾಗೂ ಮೈಸೂರು ಕ್ಷೇತ್ರಗಳಲ್ಲಿ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿರುವುದು ಈ ಸಮೀಕ್ಷೆಗಳಿಗೆ ಪೂರಕ ಎನ್ನುವಂತಿದೆ. ಅದೇ ರೀತಿಯ ಫ‌ಲಿತಾಂಶ ಹೊರ ಬಂದರೆ, ಮೇ 23 ರ ನಂತರ ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ಡೋಲಾಯಮಾನವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತವೆ.

ಮಂಡ್ಯದಲ್ಲಿ ನಿಖಿಲ್‌ ಗೆಲ್ತಾರಾ?: ವಿಶೇಷವಾಗಿ ಜೆಡಿಎಸ್‌ ಗೆಲ್ಲುವ ಮೂರು ಸ್ಥಾನಗಳಲ್ಲಿ ಹಾಸನ, ತುಮಕೂರು ಹೊರತುಪಡಿಸಿದರೆ, ಇಂಡಿಯಾ ಟಿವಿ, ಇಂಡಿಯಾ ಟುಡೆ ಜೆಡಿಎಸ್‌ ಮೂರು ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಆದರೆ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಗೆಲ್ಲುತ್ತಾರಾ ಅಥವಾ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರ ಮಧು ಬಂಗಾರಪ್ಪ ಗೆಲ್ಲುತ್ತಾರಾ ಎನ್ನುವುದು ಸ್ಪಷ್ಟವಾಗಿಲ್ಲ.

ಆದರೆ, ನ್ಯೂಸ್‌ ಎಕ್ಸ್‌ ಮತ್ತು ಎಬಿಪಿ ನ್ಯೂಸ್‌ ಪ್ರಕಾರ ಸುಮಲತಾ ಸೋಲು ಎಂದು ವರದಿ ಬಂದಿರುವುದರಿಂದ ಸದ್ಯಕ್ಕೆ ತುಸು ನಿರಾಳವಾದಂತಾಗಿದೆ. ಆದರೆ, ಇಂಡಿಯಾ ಟುಡೆ ಪಕ್ಷೇತರ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ಹೇಳಿರುವುದು, ಮಂಡ್ಯದಲ್ಲಿ ನಿಖಿಲ್‌ ಗೆಲುವಿನ ಬಗ್ಗೆ ಅನುಮಾನ ಮೂಡುವಂತಿದೆ.

ಏಕೆಂದರೆ, ರಾಜ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವವರಲ್ಲಿ ಸುಮಲತಾ ಮೈತ್ರಿ ಅಭ್ಯರ್ಥಿಗೆ ತೀವ್ರ ಸ್ಪರ್ಧೆ ನೀಡಿದ್ದಾರೆ. ಹೀಗಾಗಿ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯ ಸೋಲು ಕೂಡ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವುದರಿಂದ ಚುನಾವಣೋತ್ತರ ಸಮೀಕ್ಷೆಗಳ ಫ‌ಲಿತಾಂಶದಿಂದ ಎರಡೂ ಪಕ್ಷಗಳ ನಾಯಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕೂರುವಂತೆ ಮಾಡಿದೆ.

ದೇವೇಗೌಡರಿಗೆ ತುಮಕೂರು ಕೈ ಕೊಡುತ್ತಾ?: ಕೆಲವು ಸಮೀಕ್ಷೆಗಳಲ್ಲಿ ಜೆಡಿಎಸ್‌ ಒಂದೇ ಸ್ಥಾನದಲ್ಲಿ ಗೆಲ್ಲುತ್ತದೆ ಎಂದು ಹೇಳಿರುವುದು ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿರುವ ತುಮಕೂರು ಕೂಡ ಕೈ ಕೊಡುತ್ತದೆ ಎಂಬ ಸಂದೇಶ ಸಾರಿದಂತಿದೆ. ಸಮೀಕ್ಷಾ ಫ‌ಲಿತಾಂಶಗಳನ್ನು ಗಮನಿಸಿದರೆ, ಕಾಂಗ್ರೆಸ್‌ನಲ್ಲಿಯೂ ಘಟಾನುಘಟಿ ನಾಯಕರು ಸೋತು ಮನೆ ಸೇರುವ ಸಾಧ್ಯತೆ ಇದೆ.

ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ಗೆ ಐದರಿಂದ ಒಂಭತ್ತು ಸ್ಥಾನ ನೀಡಿರುವುದರಿಂದ ಏಕಾಂಗಿಯಾಗಿ 2014ರಲ್ಲಿ ಪಡೆದ ಸ್ಥಾನಕ್ಕಿಂತ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಕಡಿಮೆ ಪಡೆಯುವುದರಿಂದ ಕಾಂಗ್ರೆಸ್‌ಗೆ ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಸಿದ್ದರಾಮಯ್ಯ ಬಣದ ನಾಯಕರ ವಾದಕ್ಕೆ ಹೆಚ್ಚು ಪುಷ್ಠಿ ದೊರೆಯುವಂತಾಗಲಿದೆ. ಇದು ಮೈತ್ರಿ ಭಂಗಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.

“ಆಪರೇಷನ್‌ ಕಮಲ’ಕ್ಕೆ ಪುಷ್ಠಿ: ಚುನಾವಣೋತ್ತರ ಸಮೀಕ್ಷಾ ಫ‌ಲಿತಾಂಶ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ತೆರೆ ಮರೆಯಲ್ಲಿ ಬಿಜೆಪಿ ನಡೆಸಲು ಮುಂದಾಗಿರುವ “ಆಪರೇಷನ್‌ ಕಮಲ’ಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ. ಚುನಾವಣಾ ಫ‌ಲಿತಾಂಶ ನೋಡಿಕೊಂಡು ತಮ್ಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿರುವ ಅನೇಕ ಶಾಸಕರು ಈ ಸಮೀಕ್ಷಾ ಫ‌ಲಿತಾಂಶದಂತೆ ಮೇ 23 ರ ಫ‌ಲಿತಾಂಶವೂ ಹೊರ ಬಂದರೆ, ರಾಜ್ಯದಲ್ಲಿ ಬಿಜೆಪಿ ಕಡೆಗೆ ಮುಖ ಮಾಡಿರುವ ಮೈತ್ರಿ ಪಕ್ಷಗಳ ಶಾಸಕರು ಯಾವುದೇ ಆತಂಕವಿಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಮಲ ಪಾಳಯ ಸೇರುವ ಸಾಧ್ಯತೆ ಹೆಚ್ಚಿದೆ.

ಎಕ್ಸಿಟ್‌ ಪೋಲ್‌ ಅನ್ನುವುದು ಕ್ಷಣಿಕ ಸುಖ. ಮೇ 23ರಂದು ಬರಲಿರುವುದು ಶಾಶ್ವತ ಸುಖ. ಹೀಗಾಗಿ, ಎಕ್ಸಿಟ್‌ ಪೋಲ್‌ ಒಂದು ಭ್ರಮಾಲೋಕ. ಮತದಾರರ ಸಮಗ್ರ ನಾಡಿಮಿಡಿತವನ್ನು ಎಕ್ಸಿಟ್‌ ಪೋಲ್‌ ಪ್ರತಿಬಿಂಬಿಸುತ್ತದೆ ಎನ್ನುವುದು ಸುಳ್ಳು.
-ಎಚ್‌. ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

ನಾನು ಜನಮತದ ಮೇಲೆ ವಿಶ್ವಾಸ ಇಟ್ಟವನು. ಸಮೀಕ್ಷೆಗಿಂತ ಜನರ ತೀರ್ಮಾನಗಳ ಮೇಲೆ ಹೆಚ್ಚು ವಿಶ್ವಾಸ ಉಳ್ಳವನು. ಗ್ರಾಮೀಣ ಭಾಗದ ಮುಗ್ಧ ಮತದಾರರನ್ನು ಅಳೆಯುವುದು ಸಮೀಕ್ಷೆಯವರಿಗೆ ಪೂರ್ಣ ಸಾಧ್ಯವಾಗುತ್ತದೆ ಎಂದು ನನಗೆ ಅನಿಸಿಲ್ಲ. ಹೀಗಾಗಿ, ನಾನು ಜನಮತದ ಮೇಲೆ ನಂಬಿಕೆ ಇಟ್ಟಿದ್ದೇನೆ. 12ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದೆ.
-ಎಚ್‌.ಕೆ.ಪಾಟೀಲ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next