Advertisement

ಶಿಕ್ಷಕ ಅಭ್ಯರ್ಥಿಗಳ ಕಟ್‌ಆಫ್ ಅಂಕಕ್ಕೆ ಬ್ರೇಕ್‌

07:00 AM Jul 21, 2018 | Team Udayavani |

ಬೆಂಗಳೂರು: ಸರ್ಕಾರಿ ಶಾಲೆಗೆ ಪದವೀಧರ ಶಿಕ್ಷಕರ ನೇಮಕ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳುಗಳಿಸಿದ ಅಂಕ ಯಥಾವತ್ತಾಗಿ ಪ್ರಕಟಿಸಿ, ಕನಿಷ್ಠ ಅಂಕ (ಕಟ್‌ ಆಫ್ ಮಾರ್ಕ್ಸ್) ನಿಗದಿ ಮಾಡಬಾರದು ಎಂದು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಖಡಕ್‌ ಸೂಚನೆ ನೀಡಿದೆ.

Advertisement

ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ರಿಂದ 8ನೇ ತರಗತಿಯಲ್ಲಿ ಖಾಲಿ ಇರುವ ಗಣಿತ ಮತ್ತು ವಿಜ್ಞಾನದ 4,233, ಆಂಗ್ಲ ಭಾಷೆಯ 4,531 ಹಾಗೂ ಸಮಾಜ ವಿಜ್ಞಾನದ 1,236 ಹುದ್ದೆ ಸೇರಿ 10 ಸಾವಿರ ಪದವೀಧರ ಶಿಕ್ಷಕ ಹುದ್ದೆಯ ಭರ್ತಿಗೆ 2017ರ ಸೆಪ್ಟೆಂಬರ್‌ ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಜಿಲ್ಲಾ ಹಂತದಲ್ಲಿ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಉಪನಿರ್ದೇಶಕರ ನೇತೃತ್ವದಲ್ಲಿ ಮೌಲ್ಯಮಾಪನ ಮಾಡಲಾಗಿತ್ತು.

ಜೂ.20ರಂದು ಸಚಿವ ಎನ್‌.ಮಹೇಶ್‌ ಪರೀಕ್ಷಾ ಫ‌ಲಿತಾಂಶ ಪ್ರಕಟಿಸಿದ್ದರು. ಫ‌ಲಿತಾಂಶ ಹೊರಬಿದ್ದು ತಿಂಗಳಾದರೂ ಅಭ್ಯರ್ಥಿಗಳ ಅಂಕ ಗೊಂದಲ ಬಗೆಹರಿದಿಲ್ಲ. ನೊಂದ ಅಭ್ಯರ್ಥಿಗಳು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸರ್ಕಾರ, ಯಾವುದೇ ಕನಿಷ್ಠ ಅಂಕ ನಿಗದಿ ಮಾಡದೇ ಅಭ್ಯರ್ಥಿಗಳು ಪಡೆದ ಅಂಕ ಶೇಕಡವಾರು ಲೆಕ್ಕಾಚಾರದಲ್ಲಿ ಪೂರ್ಣವಾಗಿ ಪ್ರಕಟಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದೆ.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಯಲ್ಲಿ ಖಾಲಿ ಇರುವ ಪದವೀಧರ ಶಿಕ್ಷಕರ ಹುದ್ದೆಗೆ 50,633 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 1:2ರ ಅನುಪಾತದಲ್ಲಿ ಸಂದರ್ಶಕ್ಕೆ ಕೇವಲ 2264 ಅಭ್ಯರ್ಥಿಗಳು ಅರ್ಹರಾಗಿದ್ದರು. ಆ ವೇಳೆಗೆ ಕಟ್‌ಆಫ್ ಅಂಕ ಎಷ್ಟೆಂಬುದನ್ನು ಕೇಂದ್ರೀಕೃತ ದಾಖಲಾತಿ ಘಟಕ(ಸಿಎಸಿ) ಸ್ಪಷ್ಟಪಡಿಸಿರಲಿಲ್ಲ ಮತ್ತು ಅಭ್ಯರ್ಥಿಗಳು ಪಡೆದ ಅಂಕವನ್ನು ಪ್ರಕಟಿಸಿರಲಿಲ್ಲ.

Advertisement

ಅಧಿಕಾರಿಗಳ ಎಡವಟ್ಟಿನಿಂದ ಆಕ್ರೋಶಗೊಂಡ ಅಭ್ಯರ್ಥಿಗಳು, ಸರ್ಕಾರದ ಮೇಲೆ ಒತ್ತಡ ಹೇರಿ, ಅಂಕಪಟ್ಟಿ ಪಡೆದುಕೊಂಡರು. ಇಷ್ಟಾದರೂ ಗೊಂದಲ ಸರಿಪಡಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ನೇಮಕಾತಿ ಮಾನದಂಡವನ್ನೇ ಸಡಿಲಿಸುವಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶಿಸಿ ಆದೇಶ ಹೊಡಿಸಿದೆ.

ಮಾನದಂಡ ಬದಲಾವಣೆ: ಸ್ಪರ್ಧಾತ್ಮಕ ಪರೀಕ್ಷೆಯ ಪೇಪರ್‌-2ರಲ್ಲಿ ಶೇ.50 ಅಂಕ ಮತ್ತು ಬೋಧನಾ ಭಾಷಾ ಸಾಮರ್ಥ್ಯ ಪರೀಕ್ಷೆ(ಪೇಪರ್‌-3)ಯಲ್ಲಿ ಶೇ.60 ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ಆಯ್ಕೆಗೆ ಅರ್ಹರು ಎಂಬುದನ್ನು ಸಡಿಲಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದ ಎಲ್ಲರಿಗೂ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ,ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಹೊಸಪಟ್ಟಿ ಸಾಧ್ಯತೆ ?: ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ, ಪಟ್ಟಿ ಪರಿಷ್ಕರಣೆ ಮಾಡಿಲ್ಲ. ಕಟ್‌ಆಫ್ ಅಂಕ ನಿಗದಿ ಮಾಡಬೇಡಿ ಎಂದು ಸರ್ಕಾರ ಸೂಚಿಸಿರುವುದರಿಂದ ಜಿಲ್ಲಾವಾರು ಅರ್ಹ ಅಭ್ಯರ್ಥಿಗಳ
ಹೊಸ ಆಯ್ಕೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಅಥವಾ ಹಳೇ ಪಟ್ಟಿಗೆ ಹೊಸಬರು ಸೇರಿಕೊಳ್ಳಲಿದ್ದಾರೆ.

ಸ್ಪಂದಿಸದ ಹೆಲ್ಪ್ಲೈನ್‌
ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿ, ಉಪನಿರ್ದೇಶಕರು ಸೇರಿದಂತೆ ಯಾವ ಅಧಿಕಾರಿಗಳು ಕೂಡ ಅಭ್ಯರ್ಥಿಗಳ ಗೊಂದಲಕ್ಕೆ ಸ್ಪಂದಿಸುತ್ತಿಲ್ಲ. ಘಟಕದ ಸಹಾಯವಾಣಿ ಸಂಖ್ಯೆ 22228805, 22271866, 22483145ಗೆ ಕರೆ ಮಾಡಿದರೂ ಪ್ರತಿಕ್ರಿಯಿಸುವವರಿಲ್ಲ. ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕರೆ ಸ್ವೀಕರಿಸುತ್ತಿಲ್ಲ. ಎಲ್ಲದಕ್ಕೂ ಆಯುಕ್ತರೇ ಉತ್ತರ ನೀಡಬೇಕು ಎನ್ನುತ್ತಿದ್ದಾರೆ ಎಂದು ನೊಂದ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಹೊಸ ಆದೇಶದಿಂದ ಇನ್ನಷ್ಟು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಜಿಲ್ಲಾ ಮಟ್ಟದಲ್ಲಿ ಕಡಿಮೆ ಇರುವ ಅರ್ಹರ ಸಂಖ್ಯೆ ಹೆಚ್ಚಾಗಲಿದೆ. ಹೊಸ ಆದೇಶದಂತೆ ಕನಿಷ್ಠ ಅಂಕ ನಿಗದಿಪಡಿಸದೆ ಅಭ್ಯರ್ಥಿಗಳ ಅಂಕ ಪ್ರಕಟಿಸಲಾಗುತ್ತದೆ.
– ಬಿ.ಕೆ.ಬಸವರಾಜ,
ನಿರ್ದೇಶಕ, ಪ್ರಾಥಮಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next