Advertisement

ಪಾಲಿಕೆ ಚುನಾವಣೆಗೆ ಮೀಸಲಾತಿ ಬ್ರೇಕ್‌!

11:18 AM Jan 05, 2019 | Team Udayavani |

ಬಳ್ಳಾರಿ: ಮಹಾನಗರಪಾಲಿಕೆಯ 23ನೇ ವಾರ್ಡ್‌ ಮೀಸಲಾತಿ ಬದಲಾದ ಹಿನ್ನೆಲೆಯಲ್ಲಿ ಸದ್ಯವೇ ನಡೆ ಯಬೇಕಿದ್ದ ಚುನಾವಣೆಗೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ. ಕಳೆದ 2018ರ ಜೂನ್‌ನಲ್ಲಿ ಪಾಲಿಕೆಯ 39 ವಾರ್ಡಗಳಿಗೆ ಮೀಸಲಾತಿ ಪ್ರಕಟಿಸಲಾಗಿತ್ತು. ಮೀಸಲಾತಿ ಪ್ರಕಟಗೊಂಡ 42 ದಿನಗಳಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ 23ನೇ ವಾರ್ಡ್‌ ಮೀಸಲಾತಿ ಒಬಿಸಿಗೆ ಬದಲಾಯಿಸಿ ಇನ್ನೊಂದು ಆದೇಶ ಹೊರಬಿತ್ತು.

Advertisement

ಇದನ್ನು ಪ್ರಶ್ನಿಸಿ ಸ್ಥಳೀಯರೊಬ್ಬರು ಹೈಕೋರ್ಟ್‌ ಮೊರೆ ಹೋಗಿರುವುದರಿಂದ ಈಗ ಸಮಸ್ಯೆ ಉದ್ಭವಿಸಿದೆ. ಜ.7ರಂದು ಈ ಕುರಿತು ವಿಚಾರಣೆ ನಡೆಯಲಿದೆ. ಮೀಸಲಾತಿ ಬದಲಾವಣೆಯ ಪ್ರಕರಣ ಇತ್ಯರ್ಥವಾಗೋವರೆಗೂ ಚುನಾವಣೆ ನಡೆಯುವುದು ಅನುಮಾನವಾಗಿದೆ.
 
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಈ ವರೆಗೆ ಒಟ್ಟು 35 ವಾರ್ಡ್‌ಗಳಿದ್ದವು. ಆದರೆ, ಕಳೆದ ವರ್ಷ ವಾರ್ಡ್‌ಗಳ ಮರುವಿಂಗಡಣೆಯಿಂದ ಹೊಸದಾಗಿ ನಾಲ್ಕು ವಾರ್ಡ್‌ ರಚಿಸಿದ್ದು, ಇದರಿಂದ ವಾರ್ಡ್‌ಗಳ ಸಂಖ್ಯೆ 35 ರಿಂದ 39ಕ್ಕೆ ಹೆಚ್ಚಳವಾಗಿದೆ. ರಾಜ್ಯದ 6 ಪಾಲಿಕೆ ಸೇರಿ 101 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ 39 ವಾರ್ಡ್‌ಗಳಿಗೆ ಕಳೆದ ಜೂನ್‌ನಲ್ಲಿ ಮೀಸಲಾತಿ ಪ್ರಕಟಿಸಲಾಗಿತ್ತು. ಆದರೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ 23ನೇ ವಾರ್ಡ್‌ನ ಮೀಸಲಾತಿ ಕೇವಲ 42 ದಿನಗಳಲ್ಲಿ ಬದಲಾವಣೆಯಾಗಿ ಒಬಿಸಿ (ಹಿಂದುಳಿದ) ವರ್ಗಕ್ಕೆ ಮೀಸಲಾಯಿತು.

ಪರಿಶಿಷ್ಟ ಜಾತಿ ಸಮುದಾಯದವರೇ ಹೆಚ್ಚಿನ ಪ್ರಮಾಣದಲ್ಲಿರುವ 23ನೇ ವಾರ್ಡ್‌ ಪರಿಶಿಷ್ಟ ಜಾತಿಗೇ ಮೀಸಲಿಡಬೆಂಕೆಂದು ಸ್ಥಳೀಯ ದಲಿತ ಮುಖಂಡ ಶಾಂತಪ್ಪ ಎನ್ನುವವರು ಧಾರವಾಡ ಹೈಕೋರ್ಟ್‌ ಮೆಟ್ಟಿಲು ಏರಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಘೋಷಣೆಯಾಗಬೇಕಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗೆ ತಾತ್ಕಾಲಿಕ ಬ್ರೇಕ್‌ ಬಿದ್ದಂತಾಗಿದೆ. 

ಏನಿದು ಮೀಸಲಾತಿ ಸಮಸ್ಯೆ?: ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ 22ನೇ ವಾರ್ಡ್‌ ಇದೀಗ 23ನೇ ವಾರ್ಡ್‌ ಆಗಿದೆ. ಶೇ.60ರಷ್ಟು ಪರಿಶಿಷ್ಟ ಜಾತಿ, ಪಂಗಡ, ಶೇ.40ರಷ್ಟು ಇತರೆ ಸಮುದಾಯ ವಾಸಿಸುವ 23ನೇ ವಾರ್ಡ್‌ ಈ ಮೊದಲು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪ ಸಲ್ಲಿಸಿದ್ದ ಸ್ಥಳೀಯ ರಾಜಕೀಯ ಮುಖಂಡರು, ತಮ್ಮ ಅಭ್ಯರ್ಥಿಗಳಿಗೆ ಅನುಕೂಲವಾಗುಂತೆ ಕೇವಲ 42 ದಿನದಲ್ಲಿ ಮೀಸಲಾತಿಯನ್ನು ಒಬಿಸಿ (ಹಿಂದುಳಿದ) ವರ್ಗಕ್ಕೆ ಬದಲಾಯಿಸಿಕೊಂಡು ಬಂದಿದ್ದಾರೆ ಎಂಬ ಆರೋಗಳು ಕೇಳಿಬರುತ್ತಿವೆ.

23ನೇ ವಾರ್ಡ್‌ ವ್ಯಾಪ್ತಿಯಲ್ಲಿ 11 ಬೂತ್‌ಗಳು ಇದ್ದು, ಭಗತ್‌ಸಿಂಗ್‌ನಗರ, ಅಂಬೇಡ್ಕರ್‌ ನಗರ, ಕನ್ನಡ ನಗರ, ಬೀಚಿನಗರದಲ್ಲಿ ಬಹುತೇಕ ಪರಿಶಿಷ್ಟ ಜಾತಿ ಸಮುದಾಯದವರು ಇದ್ದಾರೆ. ಮಹಾನಂದಿಕೊಟ್ಟಂನಲ್ಲಿ ಪರಿಶಿಷ್ಟ ಜಾತಿ ಸೇರಿ ಇತರೆ ಸಮುದಾಯದವರು ಇದ್ದಾರೆ. ಆದರೆ, ವಾರ್ಡ್‌ ಮರು ವಿಂಗಡಣೆ ವೇಳೆ 23ನೇ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ. ಅಲ್ಲದೇ 30 ವರ್ಷಗಳ ಹಿಂದೆ ನಗರಸಭೆ ಅವಧಿಯಲ್ಲಿ 23ನೇ ವಾರ್ಡ್‌ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಅದಾದ ಬಳಿಕ ಈ ವರೆಗೂ ಒಮ್ಮೆಯೂ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಿಲ್ಲ. ಹಾಗಾಗಿ ಈ ಬಾರಿ 23ನೇ ವಾರ್ಡ್‌ನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Advertisement

ಚುನಾವಣಾಧಿಕಾರಿಗಳ ನೇಮಕ: ಬಳ್ಳಾರಿ ಮಹಾನಗರ ಪಾಲಿಕೆ ಸೇರಿ, ನಗರಸಭೆ, ಪುರಸಭೆ ಚುನಾವಣೆ ಎದುರಿಸಲು ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಕೈಗೊಂಡಿದೆ. ಕಳೆದ ಡಿಸೆಂಬರ್‌ ತಿಂಗಳಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಐದು ವಾರ್ಡ್‌ಗಳಿಗೆ ಒಬ್ಬ ಚುನಾವಣಾ ಅಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಿ ಆಯೋಗಕ್ಕೆ ವರದಿ ಸಲ್ಲಿಸಿದೆ. ಮತದಾರರ ಪಟ್ಟಿಯೂ ಸಿದ್ಧಗೊಂಡಿದ್ದು, ಚುನಾವಣಾ ಆಯೋಗದಿಂದ ಚುನಾವಣೆ ದಿನಾಂಕ ಘೋಷಣೆಯಾಗಿ ಅಧಿಸೂಚನೆ ಹೊರಬೀಳುವುದೇ ಬಾಕಿ ಉಳಿದಿದೆ. ಆದರೆ, ಮೀಸಲಾತಿ ಗೊಂದಲದಿಂದ ಇದಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಂತಾಗಿದೆ.

ನ್ಯಾಯಾಲಯದಲ್ಲಿ ಜ.7ರಂದು ನಡೆಯಲಿರುವ ವಿಚಾರಣೆಯಲ್ಲಿ ಇತ್ಯರ್ಥವಾದರೆ ಸರಿ. ಇಲ್ಲದಿದ್ದರೆ, ಬಳ್ಳಾರಿ ಮಹಾನಗರ ಪಾಲಿಕೆ ಹೊರತುಪಡಿಸಿ, ಉಳಿದ ರಾಜ್ಯದ ಎಲ್ಲ ಪಾಲಿಕೆ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಪರಿಶಿಷ್ಟ ಜಾತಿ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ 23ನೇ ವಾರ್ಡ್‌ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಆದರೆ, ಕೆಲ ಪ್ರಭಾವಿಗಳ ಕೈವಾಡದಿಂದ ಕೇವಲ 42 ದಿನಗಳಲ್ಲಿ ಮೀಸಲಾತಿ ಬದಲಾಗಿದೆ. ಅಷ್ಟು ಕಡಿಮೆ ಅವಧಿಯಲ್ಲಿ ಮೀಸಲಾತಿ ಹೇಗೆ ಬದಲಾವಣೆಯಾಗುತ್ತದೆ. ಅಧಿಕಾರಿಗಳು ಯಾವಾಗ ವಾರ್ಡ್‌ನಲ್ಲಿ ಸಮೀಕ್ಷೆ ನಡೆಸಿದ್ದರು. ಮೇಲಾಗಿ 30 ವರ್ಷಗಳ ಹಿಂದೆ ನಗರಸಭೆ ಅವಧಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ವಾರ್ಡಗೆ ಈವರೆಗೂ ಪುನಃ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಿಲ್ಲ. ಇದರಿಂದ ವಾರ್ಡ್‌ನಲ್ಲಿನ ದಲಿತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದೇನೆ. 
ಶಾಂತಪ್ಪ, 23ನೇ ವಾರ್ಡ್‌ನ ದಲಿತ ಮುಖಂಡ

ಬಳ್ಳಾರಿ ಪಾಲಿಕೆ ವ್ಯಾಪ್ತಿಯ 23ನೇ ವಾರ್ಡ್‌ನ ಮೀಸಲಾತಿಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ಶಾಂತಪ್ಪ ಎನ್ನುವವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಪಾಲಿಕೆ ವಕೀಲರಿಂದ ವಕಾಲತ್ತು ಸಲ್ಲಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಶನಿವಾರ ಸಲ್ಲಿಸಲಾಗುವುದು. ಜ.7ರಂದು ನಡೆಯಲಿರುವ ವಿಚಾರಣೆಯಲ್ಲಿ ಈ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆಯಿದೆ.
ಭೀಮಪ್ಪ, ಉಪ ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next