Advertisement

ಮೂರು ಕಡೆ ಬಿರುಕು; ಕುಸಿತದ ಭೀತಿ

10:58 AM Jul 29, 2018 | |

ಉಳ್ಳಾಲ : ಮಂಗಳೂರಿನಿಂದ ನಾಟೆಕಲ್‌ ಮಾರ್ಗವಾಗಿ ಮಂಜನಾಡಿ- ಮುಡಿಪು ಸಂಪರ್ಕಿಸುವ ಕಲ್ಕಟ್ಟ ಸೇತುವೆಯಲ್ಲಿ ಶನಿವಾರ ಬಿರುಕು ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ನಾಟೆಕಲ್‌ ಮಾರ್ಗವಾಗಿ ಮಂಜನಾಡಿ, ನರಿಂಗಾನ, ಕೈರಂಗಳ ಬಾಳೆಪುಣಿ, ಗ್ರಾಮಗಳಲ್ಲದೆ ಕೇರಳವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.

Advertisement

ಸುಮಾರು 70- 75 ವರ್ಷಗಳಷ್ಟು ಹಳೆಯದಾದ ಮಂಜನಾಡಿ ಗ್ರಾಮದ ಮಂಜನಾಡಿ ದೇವಸ್ಥಾನದ ಬಳಿ ಸೇತುವೆಯ ಮೇಲ್ಭಾಗದ ಮೂರು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆಯ ಕೆಳ ಭಾಗದಲ್ಲಿ ಸಿಮೆಂಟ್‌ ಉದುರಿದ್ದು, ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಬೆಳಗ್ಗೆ ಬೈಕ್‌ ಸವಾರರಾದ ಹ್ಯಾರೀಸ್‌ ಮತ್ತು ಇಕ್ಬಾಲ್‌ ಸೇತುವೆ ಮೇಲ್ಭಾಗದಲ್ಲಿ ಬಿದ್ದಿರುವ ಬಿರುಕನ್ನು ಕಂಡು ಸ್ಥಳೀಯ ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಅಸೈ ಮತ್ತು ಮಾಜಿ ಅಧ್ಯಕ್ಷ ಇಸ್ಮಾಯಿಲ್‌ ದೊಡ್ಡಮನೆ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಂಚಾಯತ್‌ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸುವ ಭರವಸೆಯನ್ನು ನೀಡಿದ್ದಾರೆ. ಘನವಾಹನಗಳು ಸೇತುವೆಯಲ್ಲಿ ಒಂದೊಂದಾಗಿ ಚಲಿಸುವಂತೆ ಸ್ಥಳೀಯರು ಕೋರಿಕೊಂಡ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಒಂದೊಂದೇ ವಾಹನಗಳು ಸೇತುವೆಯಲ್ಲಿ ತೆರಳುತ್ತಿವೆ.

ಪ್ರಸ್ತಾವನೆ ಸಲ್ಲಿಕೆ
ನಾಟೆಕಲ್‌ ಮಾರ್ಗವಾಗಿ ಗ್ರಾಮಗಳಾದ ಕುರ್ನಾಡಿನ ಮುಡಿಪು, ವಿಟ್ಲ, ಸಾಲೆತ್ತೂರು, ಬಿ.ಸಿ.ರೋಡು, ಕೇರಳದ ಮಂಜೇಶ್ವರವನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಪಂಚಾಯತ್‌ ಮತ್ತು ಸ್ಥಳೀಯರ ನಿರ್ಣಯದಂತೆ ಸಚಿವ ಯು.ಟಿ. ಖಾದರ್‌ ಅವರಿಗೆ ಸೇತುವೆ ಅಭಿವೃದ್ಧಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಒಂದು ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ ಎಂದು ಮಾಜಿ ಅಧ್ಯಕ್ಷ ಇಸ್ಮಾಯಿಲ್‌ ದೊಡ್ಡಮನೆ ಮಾಹಿತಿ ನೀಡಿದರು.

ಮಳೆ ನೀರು ಉಕ್ಕಿ ಹರಿದರೆ ಸೇತುವೆ ಕುಸಿತ 
ಜೋರಾಗಿ ಮಳೆ ಬಂದು ಸೇತುವೆಯಡಿ ನೀರು ಉಕ್ಕಿ ಹರಿದಲ್ಲಿ ಸೇತುವೆ ಸಂಪೂರ್ಣ ಕುಸಿಯುವ ಭೀತಿಯಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಶಿಕ್ಷಣ ಸಂಸ್ಥೆಗಳು, ಪ್ರಾರ್ಥನಾಲಯಗಳು ಇರುವ ಪ್ರದೇಶದಲ್ಲಿ ದಿನನಿತ್ಯ 500ಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next