ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಅಬ್ಬರ ಜೋರಾಗಿದ್ದು, ಜಿಲ್ಲಾದ್ಯಂತ ಮೇ 10 ರಂದು ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮೇ 8 ರಿಂದ 10ರ ವರೆಗೂ 3 ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದೆ.
440 ಮತಗಟ್ಟೆಗಳಲ್ಲಿ ಕ್ಲಿಷ್ಟಕರ: ಜಿಲ್ಲೆಯಲ್ಲಿ ಬರೋಬ್ಬರಿ 1,281 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. 440 ಮತಗಟ್ಟೆಗಳಲ್ಲಿ ಈ ಬಾರಿ ಮತದಾನ ನಡೆಸುವುದು ಅತ್ಯಂತ ಕ್ಲಿಷ್ಟಕರ ಅಂತ ಜಿಲ್ಲಾಡಳಿತ ಗುರುತಿ ಸಿದೆ. ಈ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಯನ್ನು ಶಾಂತ ರೀತಿಯಲ್ಲಿ ನಡೆಸಲು ಉದ್ದೇಶಿಸಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆ ನಿಷೇಧ ಹೇರಿದೆ.
ಈಗಾಗಲೇ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮದ್ಯ ಮಾರಾಟ ನಡೆದಿದೆ. ಅದರಲ್ಲೂ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯವನ್ನು ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಇದರ ನಡು ವೆಯೂ ಜಿಲ್ಲೆಯಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ. ಆದರೂ ಮತದಾನ ನಡೆಯುವ ಎರಡು ದಿನ ಮೊದಲೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತ ಮದ್ಯದಂಗಡಿಗಳು ತೆರೆಯದಂತೆ ಅಬಕಾರಿ ಇಲಾಖೆ ಮೂಲಕ ಮದ್ಯ ಮಾರಾಟಗಾರರಿಗೆ ಖಡಕ್ ಸೂಚನೆ ಕೊಟ್ಟಿದೆ.
ಜಿಲ್ಲಾಧಿಕಾರಿಗಳ ಆದೇಶದಲ್ಲಿ ಏನಿದೆ?: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಚುನಾವಣೆಯ ಮತದಾನದ ಸಂಬಂಧ ಮತದಾನದ ಪೂರ್ವದಲ್ಲಿ ಮೇ 08 ರಂದು ಸಂಜೆ 5 ಗಂಟೆಯಿಂದ ಮತದಾನದ ದಿನ ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ ಮತ್ತು ಮತ ಎಣಿಕೆಯು ಮೇ 13 ರಂದು ಮತ ಎಣಿಕೆ ನಡೆಯಲಿದ್ದು, ಮೇ 12ರ ಮಧ್ಯರಾತ್ರಿ 12ರಿಂದ 13ರ ಮಧ್ಯರಾತ್ರಿ 12 ಗಂಟೆ ವರೆಗೆ ಜಿಲ್ಲೆಯಲ್ಲಿ ಡಿಸ್ಟಿಲರಿಗಳು, ಕೆ.ಎಸ್.ಬಿ.ಸಿ.ಎಲ್. (ಕರ್ನಾಟಕ ರಾಜ್ಯ ಪಾನೀಯ ನಿಗಮ ಮಂಡಳಿ) ವೈನರಿ ಹಾಗೂ ಎಲ್ಲಾ ಬಗೆಯ ಮದ್ಯದಂಗಡಿಗಳಲ್ಲಿ ಸಂಪೂರ್ಣವಾಗಿ ಮದ್ಯ ಶೇಖರಣೆ, ಸಾಗಾಣಿಕೆ ಹಾಗೂ ಮಾರಾಟವನ್ನು ನಿರ್ಬಂಧಿಸಿ ಒಣ ದಿನಗಳೆಂದು ಘೋಷಿಸಿದೆ. ಎಲ್ಲಾ ಬಗೆಯ ಅಬಕಾರಿ ಸನ್ನದುಗಳನ್ನು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) 1967 ರ ನಿಯಮ 10 (ಬಿ) ರ ಅನ್ವಯ ಮುಚ್ಚಲು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದ್ದಾರೆ.