Advertisement

ಗೋಡೆಗಳಲ್ಲಿ ಬಿರುಕು, ಸೋರುತ್ತಿದೆ ಛಾವಣಿ

10:25 AM Aug 09, 2018 | |

ಕಬಕ : ಮುಂದಿನ ವರ್ಷ ಶತಮಾನ ಆಚರಿಸಲಿರುವ ಕಬಕ ಸರಕಾರಿ ಹಿ.ಪ್ರಾ. ಶಾಲೆ ಕಟ್ಟಡ ಮಾತ್ರ ಕುಸಿತದ ಭೀತಿಯಲ್ಲಿದೆ. ಇಲ್ಲಿ ಕಲಿಯುತ್ತಿರುವ 176 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೀವಭಯದಲ್ಲಿ ಇದ್ದಾರೆ. ಇಲ್ಲಿರುವ 15 ಕೊಠಡಿಗಳ ಪೈಕಿ ಹೆಚ್ಚಿನ ಗೋಡೆಗಳು ಬಿರುಕು ಬಿಟ್ಟಿವೆ. ಪಕ್ಕಾಸು, ರೀಪುಗಳು ಈಗಲೋ ಆಗಲೋ ಎನ್ನುವ ಸ್ಥಿತಿಯಲ್ಲಿವೆ. ಮಳೆ, ಗಾಳಿ ಬಂದಾಗೆಲ್ಲ ಹೆದರಿಕೆ ಹುಟ್ಟಿಸುತ್ತವೆ. ಒಂದೆರಡು ತರಗತಿ ಕೋಣೆ ಹೊರತುಪಡಿಸಿ ಉಳಿದ ಕೋಣೆಗಳ ಗೋಡೆ ಬಿರುಕು ಬಿಟ್ಟಿದ್ದು, ಮಳೆ ನೀರು ತರಗತಿಗಳ ಒಳಗೆ ಬರುತ್ತಿದೆ.

Advertisement

ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷವೂ ಗಣನೀಯವಾಗಿ ಇಳಿಕೆಯಾಗುತ್ತಿದೆ. ಶಿಕ್ಷಕರ ಕೊರತೆಯೂ ಎದುರಾಗಿದೆ. ಶಿಕ್ಷಕರ ಮುತುವರ್ಜಿಯಿಂದಾಗಿ ಪ್ರಸ್ತುತ ವರ್ಷಕ್ಕೆ 176 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಸ್ಥಿತಿ ಹೀಗೆಯೇ ಮುಂದುವರಿದರೆ ಹೆತ್ತವರು ಮಕ್ಕಳನ್ನು ಕಳುಹಿಸಲು ಧೈರ್ಯ ಮಾಡಲಾರರು. ಶಾಲೆಯ ದುಸ್ಥಿತಿಯೇ ಅದನ್ನು ಮುಚ್ಚುವ ಸ್ಥಿತಿಗೆ ತರುತ್ತಿದೆ ಎಂಬುದು ಶಿಕ್ಷಣ ಪ್ರೇಮಿಗಳ ನೋವು.

ಶೌಚಾಲಯವೂ ಸರಿಯಾಗಿಲ್ಲ
ಶಾಲೆಗೆ ಆವರಣ ಗೋಡೆ ಇಲ್ಲ. ಸರಿಯಾದ ಶೌಚಾಲಯಗಳಿಲ್ಲ. ಬಿಸಿಯೂಟದ ಆಹಾರ ವಸ್ತು ಸಂಗ್ರಹಣ ಕೊಠಡಿಯೂ ಸೋರುತ್ತಿದೆ. ಆಹಾರ ವಸ್ತುಗಳನ್ನು ಸಂಗ್ರಹಿಸಿಡಲೂ ಜಾಗ ಹುಡುಕಬೇಕಾದ ಸ್ಥಿತಿ ಉದ್ಭವಿಸಿದೆ. ಈ ಶಾಲೆಗೆ ರಸ್ತೆ ಸೌಕರ್ಯವಿದೆ. ಕಬಕ, ಕುಳ, ಇಡ್ಕಿದು, ಕೊಡಿಪ್ಪಾಡಿ, ಕೆದಿಲ ಗ್ರಾಮಗಳಲ್ಲದೆ, ದೂರದ ಊರಿನ ವಿದ್ಯಾರ್ಥಿಗಳೂ ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ.

ಇಚ್ಛಾಶಕ್ತಿ ಕೊರತೆ
ದುರ್ಬಲಗೊಂಡ ಹಂಚಿನ ಛಾವಣಿಗಳಗಳ ಮೂಲಕ ಪಾರಿವಾಳ ಮತ್ತು ಇತರ ಪಕ್ಷಿಗಳು ಶಾಲೆಯ ಒಳಗೆ ಪ್ರವೇಶಿಸಿಸುತ್ತಿದ್ದು, ಹಿಕ್ಕೆ ಹಾಕಿ ಗಲೀಜು ಮಾಡುತ್ತಿವೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಶಾಲೆಗೆ ಇಂತಹ ದುಸ್ಥಿತಿ ಬಂದಿದೆ ಎನ್ನುವುದು ಇಲ್ಲಿನ ಗ್ರಾಮಸ್ಥರ ಅನಿಸಿಕೆ. ಶಾಶ್ವತ ಅನುದಾನವೊಂದೇ ಪರಿಹಾರ.

ಅನೈತಿಕ ಚಟುವಟಿಕೆ?
ಈ ಶಾಲೆಗೆ ಆವರಣ ಗೋಡೆ ಇಲ್ಲದ ಕಾರಣ ರಾತ್ರಿ ವೇಳೆ ಇಲ್ಲಿ ಜುಗಾರಿ ಆಡುವುದು, ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಶಾಲಾ ಅವರಣದಲ್ಲಿ ಬೀಡಿ ಸಿಗರೇಟು, ಇಸ್ಪೀಟು ಎಲೆಗಳು, ಮದ್ಯದ ಬಾಟಲಿಗಳು ಪತ್ತೆಯಾಗಿವೆ.

Advertisement

ಪ್ರಯೋಜನವಾಗಿಲ್ಲ
ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಶಿಕ್ಷಣ ಇಲಾಖೆ, ಗ್ರಾ.ಪಂ., ತಾ.ಪಂ.ಗೆ ಕಳುಹಿಸಿಕೊಡಲಾಗಿದೆ. ಮನವಿ ಇತ್ತರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ವತಿಯಿಂದ ಸಾಮಾಜಿಕ ಕಾರ್ಯದಡಿ ಅಕೇಶಿಯಾ, ಮಾಂಜಿಯಂ ಗಿಡಗಳನ್ನು ಶಾಲೆಯ ಸುತ್ತ ನೆಡಲಾಗಿದೆ. ಮರಗಳು ಶಾಲೆಯ ಮೇಲೆ ಮತ್ತು ಆಟವಾಡುವ ಸ್ಥಳದಲ್ಲಿ ಮಕ್ಕಳ ಮೇಲೆ ಬೀಳುವ ಸ್ಥಿತಿಯಲ್ಲಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮನವಿ ಕೊಟ್ಟು ವರ್ಷಗಳು ಉರುಳಿದರೂ ಏನೂ ಪ್ರಯೋಜನವಾಗಿಲ್ಲ.
– ಸುಲೋಚನಾ,
ಮುಖ್ಯ ಶಿಕ್ಷಕಿ

ವರದಿ ಕಳುಹಿಸಲಾಗಿದೆ
ಕಬಕ ಹಿ.ಪ್ರಾ. ಶಾಲೆಯ ಶಿಥಿಲಗೊಂಡಿರುವ ಬಗ್ಗೆ ವರದಿಯನ್ನು ಡಿಡಿಪಿಐ ಕಚೇರಿಗೆ ಕಳುಹಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಮೊದಲು ಸಮಸ್ಯೆಗೆ ಪರಿಹಾರ ದೊರೆಯಬಹುದು.   
– ಡಿ.ಎನ್‌. ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ

ಸಮಸ್ಯೆ ಪರಿಹಾರಕ್ಕೆ ಯತ್ನ
ಕಬಕ ಸರಕಾರಿ ಹಿ.ಪ್ರಾ. ಶಾಲೆಗೆ ತಾನು ಖುದ್ದಾಗಿ ಭೇಟಿ ಇತ್ತು ಪರಿಶೀಲಿಸುತ್ತೇನೆ. ಆನಂತರ ಸಮಸ್ಯೆ ಪರಿಹಾರಕ್ಕೆ ವ್ಯವಸ್ಥೆ ಮಾಡುತ್ತೇನೆ.
– ಸಂಜೀವ ಮಠಂದೂರು,
    ಶಾಸಕರು.

ಉಮ್ಮರ್‌ ಜಿ. ಕಬಕ

Advertisement

Udayavani is now on Telegram. Click here to join our channel and stay updated with the latest news.

Next