ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳ ಮೇಲೆ ತಹಶೀ ಲ್ದಾರ್ ಪ್ರಮೋದ್ ಎಲ್. ಪಾಟೀಲ್ ಅವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಬೀಗ ಮುದ್ರೆ ಜಡಿದಿದೆ.
35ಕ್ಕೂ ಹೆಚ್ಚು ಕ್ರಷರ್‌ಗೆ ಬೀಗ: ಶಾಸಕ ಸಿ.ಎಸ್.ಪುಟ್ಟರಾಜು ಅವರ ಕುಟುಂಬಕ್ಕೆ ಸೇರಿದ ಎಸ್‌ಟಿಜಿ ಸ್ಟೋನ್ ಕ್ರಷರ್, ಬಾಲಾಜಿ ಸ್ಟೋನ್ ಕ್ರಷರ್, ರಾಮಾಂಜನೇಯ ಜಲ್ಲಿ ಕ್ರಷರ್, ಕೃಷ್ಣ ಸ್ಟೋನ್ ಕ್ರಷರ್, ಎಸ್‌ವಿಟಿ, ಜ್ಯೋತಿ ಸ್ಟೋನ್ ಕ್ರಷರ್ ಸೇರಿದಂತೆ 35ಕ್ಕೂ ಹೆಚ್ಚು ಸ್ಟೋನ್ ಕ್ರಷರ್‌ಗಳಿಗೆ ಬೀಗ ಮುದ್ರೆ ಜಡಿದಿದ್ದಾರೆ.
ಜಿಲ್ಲಾಧಿಕಾರಿ ಆದೇಶ:ಬೇಬಿಬೆಟ್ಟದ ಕಾವಲ್ನಲ್ಲಿ ನಡೆಸಲಾಗುತ್ತಿದ್ದ ಸ್ಟೋನ್ ಕ್ರಷರ್‌ಗಳನ್ನು ಟಾಸ್ಕ್ ಪೋರ್ಸ್ ಸಮಿತಿ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ವೆಂಕೆಟೇಶ್ ಆದೇಶಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಸ್ಟೋನ್ ಕ್ರಷರ್‌ಗಳಿಗೆ ಬೀಗ ಮುದ್ರೆ ಜಡಿದು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ್ ಪ್ರಮೋದ್ ಎಲ್. ಪಾಟೀಲ್ ತಿಳಿಸಿದರು.
ಬೇಬಿಬೆಟ್ಟದಲ್ಲಿ 10ಕ್ಕೂ ಹೆಚ್ಚು ಕಲ್ಲುಕ್ವಾರಿಗಳು ನಡೆಯುತ್ತಿವೆ. ಸಿ ಮಾನ್ಯತೆ ಪಡೆದಿರುವ 18 ಸ್ಟೋನ್ ಕ್ರಷರ್ ಹಾಗೂ ಬಿ-1 ಮಾನ್ಯತೆ ಪಡೆದಿರುವ 17 ಸ್ಟೋನ್ ಕ್ರಷರ್‌ಗಳು ನಡೆಯುತ್ತಿವೆ. ಇವೆಲ್ಲವನ್ನೂ ಸ್ಥಗಿತಗೊಳಿಸಲಾಗುತ್ತಿದೆ. ಇದಲ್ಲದೆ ಅಕ್ರಮ ಗಣಿಗಾರಿಕೆ, ಸ್ಟೋನ್ ಕ್ರಷರ್‌ಗಳ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿ ಮುತ್ತಪ್ಪ ತಿಳಿಸಿದರು.
Advertisement
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮುತ್ತಪ್ಪ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ನಿರ್ದೇಶಕಿ ಸವಿತಾ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಕ್ರಷರ್‌ಗಳಿಗೆ ಬೀಗ ಜಡಿದು ಸ್ಥಗಿತಗೊಳಿಸಿದರು.
Related Articles
Advertisement
ಈ ವೇಳೆ ಉಪ ತಹಶೀಲ್ದಾರ್ ಸುಧಾಕರ್, ಕಂದಾಯ ಪರಿವೀಕ್ಷಕ ಗಣೇಶ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಡಾ.ನಟಶೇಖರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪಲ್ಲವಿ, ಎಎಸ್‌ಐ ಬಿ.ಜೆ. ರವಿ ಇದ್ದರು.
ಭಾರೀ ಶಬ್ದದ ಬಗ್ಗೆ ಅಧಿಕಾರಿಗಳೇ ಉತ್ತರಿಸಲಿ
ಕೆಆರ್‌ಎಸ್ ಮೈಸೂರು-ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. ಇಂತಹ ಸ್ಥಳದಲ್ಲಿ ಕಾನೂನು ಬಾಹಿರ ಗಣಿಗಾರಿಕೆ ನ್ಪೋಟದಿಂದ ಈ ಶಬ್ಧ ಕೇಳಿಬಂದಿದೆಯೋ ಅಥವಾ ಅದರ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ ಸತ್ಯ ಹೊರತರಬೇಕಾದ ಜವಾಬ್ದಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೇರಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಮದ್ದೂರಿನಲ್ಲಿ ಮಾತನಾಡಿ, ಬೇಬಿ ಬೆಟ್ಟ ಮತ್ತು ಆಸುಪಾಸಿನ ಸ್ಥಳಗಳಲ್ಲಿ ಮೈಸೂರು ಮಹಾಸಂಸ್ಥಾನಕ್ಕೆ ಸೇರಿದ ಭೂಮಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ದಾಖಲೆ ನೀಡಿಲ್ಲ. ಈ ದಾಖಲೆ ಪಡೆಯುವ ಹಕ್ಕಿರುವುದು ತಮ್ಮ ತಾಯಿ ಪ್ರಮೋದಾ ದೇವಿಗೆ ಮಾತ್ರ. ಆನಂತರ ಅದು ನಮಗೆ ಸೇರುತ್ತದೆ. ಈ ಬಗ್ಗೆ ತಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ಬಿಟ್ಟದ್ದು ದಸರಾ ಹಬ್ಬದ ಆಚರಣೆಯನ್ನು ಅದ್ದೂರಿ ಅಥವಾ ಸರಳವಾಗಿ ಆಚರಿಸಬೇಕು ಎನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದಷ್ಟೇ ಸೂಕ್ಷ್ಮವಾಗಿ ತಿಳಿಸಿದರು.