Advertisement

ಕಳ್ಳಭಟ್ಟಿಗೆ ಕಡಿವಾಣ ಹಾಕಿ: ಜೆ.ಟಿ.ಪಾಟೀಲ

01:02 PM Apr 24, 2020 | Suhan S |

ಬಾಗಲಕೋಟೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಬಂದ್‌ ಆಗಿವೆ. ಹೀಗಾಗಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಮಾರಾಟ-ಸೇವನೆ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕು ಎಂದು ಬೀಳಗಿಯ ಮಾಜಿ ಶಾಸಕ, ಕಾಂಗ್ರೆಸ್‌ನ ಕೋವಿಡ್‌-19 ಟಾಸ್ಕ್ಫೋರ್ಸ್‌ ಸಮಿತಿ ಜಿಲ್ಲಾ ಅಧ್ಯಕ್ಷ ಜೆ.ಟಿ. ಪಾಟೀಲ ಒತ್ತಾಯಿಸಿದರು.

Advertisement

ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಳ್ಳಭಟ್ಟಿ ಸಾರಾಯಿ ಜಮಖಂಡಿ, ಅಥಣಿಗೂ ಹೋಗುತ್ತಿದೆ. ಕೆಲವು ಸರ್ಕಾರಿ ಅಧಿಕಾರಿಗಳೇ ಇದಕ್ಕೆ ಸೊಪ್ಪು ಹಾಕುತ್ತಿದ್ದಾರೆ. ಕಡಿವಾಣ ಹಾಕದಿದ್ದರೆ ಕಳ್ಳಭಟ್ಟಿ ಸೇವನೆಯಿಂದ ಮತ್ತಷ್ಟು ಆರೋಗ್ಯ ಸಮಸ್ಯೆ ಜನರಲ್ಲಿ ಉಂಟಾಗುತ್ತದೆ ಎಂದರು.

ಸಂಕಷ್ಟದಲ್ಲಿ ಕಾಂಗ್ರೆಸ್‌ ನೆರವು: ಲಾಕ್‌ಡೌನ್‌ ದಿಂದ ಜನರು ತೀವ್ರ ಸಂಕಷ್ಟದಲ್ಲಿದ್ದು, ಕಾಂಗ್ರೆಸ್‌ ನಿಂದ ಸಾಧ್ಯವಾದಷ್ಟು ಎಲ್ಲ ವರ್ಗದ ಜನರಿಗೆ ಸ್ಪಂದಿಸುವ ಕಾರ್ಯ ಮಾಡಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ 2.40 (ಎನ್‌-95 ಮಾಸ್ಕ್ 800) ಲಕ್ಷ ಮಾಸ್ಕ್, 300 ಕ್ವಿಂಟಲ್‌ ಫಲಾವ್‌, 21 ಸಾವಿರ ಆಹಾರಧಾನ್ಯ ಕಿಟನ್‌, 10 ಲಕ್ಷ ಮೊತ್ತದ ತರಕಾರಿ ನೀಡಿದ್ದು, ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಗೋವಾದಲ್ಲಿರುವ ಕನ್ನಡಿಗರಿಗೆ 1 ಸಾವಿರ ಆಹಾರಧಾನ್ಯ ಕಿಟ್‌ ಕಳುಹಿಸಲಾಗಿದೆ ಎಂದರು.

ಮುಧೋಳ ಕ್ಷೇತ್ರದಲ್ಲಿ 1.66 ಲಕ್ಷ ಮಾಸ್ಕ್, 1 ಲಕ್ಷ ಲೀಟರ್‌ ಸ್ಯಾನಿಟೈಜರ್‌, 242 ಟನ್‌ ತರಕಾರಿಯನ್ನು ಜನರಿಗೆ ನೀಡಲಾಗಿದೆ. ಜಮಖಂಡಿ ಕ್ಷೇತ್ರದಲ್ಲಿ 10 ಸಾವಿರ ಲೀಟರ್‌ ಸ್ಯಾನಿಟೈಜರ್‌, ಪ್ರತಿದಿನ 3ರಿಂದ 4 ಕ್ವಿಂಟಲ್‌ ತರಕಾರಿ, ಪ್ರತಿದಿನ 500 ಆಹಾರ ಕಿಟ್‌ ಹಾಗೂ 2 ಸ್ಯಾನಿಟೈಜರ್‌ ಟನಲ್‌ ನಿರ್ಮಾಣ ಮಾಡಲಾಗಿದೆ. ಬೀಳಗಿ ಕ್ಷೇತ್ರದಲ್ಲಿ 25ಸಾವಿರ ಮಾಸ್ಕ್ ನೀಡಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿದಂತೆ ಕೋವಿಡ್‌-19  ವಾರಿಯರ್ಸ್‌ಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ 8 ಸಾವಿರ ಮಾಸ್ಕ, 400 ಸ್ಯಾನಿಟೈಜರ್‌, 1200 ಆಹಾರ ಕಿಟ್‌, 600 ತರಕಾರಿ ಕಿಟ್‌, 20 ಜನರಿಗೆ ವಿವಿಧ ರೀತಿಯ ಔಷಧ ಪೂರೈಕೆ ಮಾಡಲಾಗಿದೆ. ಹುನಗುಂದ ಕ್ಷೇತ್ರದಲ್ಲಿ 10 ಸಾವಿರ ಮಾಸ್ಕ್, 2 ಸಾವಿರ ಸ್ಯಾನಿಟೈಜರ್‌, 2 ಸಾವಿರ ಫಲಾವ್‌ ಕಿಟ್‌, 2 ಸಾವಿರ ದಿನಸಿ ಕಿಟ್‌ ವಿತರಿಸಿದ್ದು, ತೇರದಾಳ ಕ್ಷೇತ್ರದಲ್ಲಿ 12 ಸಾವಿರ ಮಾಸ್ಕ್, 15 ಸಾವಿರ ಊಟದ ಕಿಟ್‌, 25 ಸಾವಿರ ಕುಟುಂಬಕ್ಕೆ ತರಕಾರಿ, 20 ಜನರಿಗೆ ಔಷಧ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.

Advertisement

ಜಿಲ್ಲಾಡಳಿತ ತನ್ನ ಇತಿಮಿತಿಯಲ್ಲಿ ಕೆಲಸ ಮಾಡಿದೆ. ಆದರೆ, ಬಡಜನರಿಗೆ ಪಡಿತರ ಆಹಾರಧಾನ್ಯ ಹೊರತು ಪಡಿಸಿ, ಯಾವುದೇ ರೀತಿಯ ನೆರವು ಸರ್ಕಾರದಿಂದ ಬಂದಿಲ್ಲ. ಕೂಡಲೇ ದುಡಿಯುವ ವರ್ಗಕ್ಕೆ ನೆರವು ನೀಡಬೇಕು. ಕೋವಿಡ್‌-19 ವಿರುದ್ಧದಹೋರಾಟದಲ್ಲಿ ಕೆಲಸ ಮಾಡಿದ ವೈದ್ಯರು, ದಾದಿಯರು, ಆಶಾ, ಅಂಗನವಾಡಿ, ದಾನಿಗಳು ಕೆಲಸ ಮಾಡಿದ್ದಾರೆ. ಅವರಿಗೆಲ್ಲ ಕಾಂಗ್ರೆಸ್‌ನ  ಟಾಸ್ಕ್ಫೋರ್ಸ್‌ ಸ್ಪಂದಿಸುತ್ತದೆ ಎಂದರು.

ಸೆಪ್ಟೆಂಬರ್‌ವರೆಗೂ ಜಾಗೃತಿ ಅಗತ್ಯ : ಸದ್ಯ ಮೇ 3ರವರೆಗೆ ಲಾಕ್‌ಡೌನ್‌ ಮುಂದುವರಿಯಲಿದೆ. ಆದರೆ, ಕೋವಿಡ್‌-19 ಸಂಪೂರ್ಣ ನಿಯಂತ್ರಣಕ್ಕೆ ಜನರು ಬರುವ ಆಗಸ್ಟ್‌-ಸೆಪ್ಟೆಂಬರ್‌ವರೆಗೂ ಸಾಮಾಜಿಕ ಅಂತರ ಸಹಿತ ಎಲ್ಲ ರೀತಿಯ ಮುಂಜಾಗ್ರತೆ ವಹಿಸಬೇಕು. – ಜೆ.ಟಿ. ಪಾಟೀಲ, ಕಾಂಗ್ರೆಸ್‌ ಟಾಸ್ಕ್ಪೋರ್ಸ್‌ ಸಮಿತಿ ಜಿಲ್ಲಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next