ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ-ಭತ್ತೆ) ಕಾಯ್ದೆ – 1963 ಅಸಿಂಧು
ಬೆಂಗಳೂರು: ಸರಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದ್ದ ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ- ಭತ್ತೆ) ಕಾಯ್ದೆ-1963 ಮತ್ತು ತತ್ಸಂಬಂಧಿ 1999ರ ತಿದ್ದುಪಡಿ ಕಾಯ್ದೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಇದರಿಂದಾಗಿ ಅತೃಪ್ತರು, ಅವ ಕಾಶ ವಂಚಿತರಿಗೆ ರಾಜಕೀಯ ಪುನ ರ್ವಸತಿ ಕಲ್ಪಿಸುವ ಸರಕಾರಗಳ ಪ್ರವೃತ್ತಿಗೆ ಕಡಿವಾಣ ಬಿದ್ದಂತಾಗಿದೆ. ಬೆಂಗಳೂರು ನಿವಾಸಿ ಎಂ.ಬಿ. ಆದಿ ನಾರಾಯಣ ಮತ್ತು ವಕೀಲ ಕೆ.ಬಿ. ವಿಜಯಕುಮಾರ್ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಎ.ಎಸ್. ಓಕಾ ಮತ್ತು ನ್ಯಾ| ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು 2019ರ ನ.14ರಂದು ತೀರ್ಪನ್ನು ಕಾಯ್ದಿರಿಸಿತ್ತು. ಶನಿವಾರ (ಜ. 4) ಅದು ಅರ್ಜಿಗಳನ್ನು ಮಾನ್ಯ ಮಾಡಿ ಆದೇಶ ಪ್ರಕಟಿಸಿದೆ.
ಕರ್ನಾಟಕ ರಾಜ್ಯ ಸಂಸದೀಯ ಕಾರ್ಯದರ್ಶಿಗಳ (ವೇತನಗಳು ಮತ್ತು ಉಪದಾನ ಅವಕಾಶಗಳು) ಕಾಯ್ದೆ-1963 ಮತ್ತು 1999ರ 7ನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಶಾಸನಾತ್ಮಕ ಅರ್ಹತೆ ಕರ್ನಾಟಕ ಶಾಸನ ಸಭೆಗೆ ಇಲ್ಲ. ಅಲ್ಲದೆ ಇದು ಸಂವಿಧಾನಕ್ಕೆ ವ್ಯತಿರಿಕ್ತವಾಗಿದೆ. ಹಾಗಾಗಿ ಕಾಯ್ದೆ ಯನ್ನು ರದ್ದುಗೊಳಿಸಲಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಸಂವಿಧಾನದ ಪರಿಚ್ಛೇದ 164 (1-ಎ) ಪ್ರಕಾರ ಶಾಸನಭೆಯ ಒಟ್ಟು ಶಾಸಕರ ಸಂಖ್ಯೆಯಲ್ಲಿ ಸಚಿವರ ಸ್ಥಾನಗಳು ಶೇ.15 ಮೀರಬಾರದು. ಆದರೆ ಸಚಿವ ದರ್ಜೆ ಸ್ಥಾನಮಾನ ನೀಡಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದು ಇದಕ್ಕೆ ವಿರುದ್ಧವಾಗಿದೆ. ಹೀಗಾಗಿ 1963ರ ಈ ಕಾಯ್ದೆ ಮತ್ತು 1999ರ ತಿದ್ದುಪಡಿಗಳನ್ನು ಸಂವಿಧಾನಬಾಹಿರ ಎಂದು ಘೋಷಿಸಿ ಸರಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ದಿಲ್ಲಿಯಲ್ಲೂ ವಿವಾದ
ಸಂಸದೀಯ ಕಾರ್ಯದರ್ಶಿಗಳ ಹುದ್ದೆ ವಿವಾದ ಕೇವಲ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. 2015ರಲ್ಲಿ ದಿಲ್ಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು 21 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ಕೇಂದ್ರ ಚುನಾವಣ ಆಯೋಗಕ್ಕೆ ದೂರನ್ನೂ ನೀಡಲಾಗಿತ್ತು. ಆಯೋಗ ಈ ಎಲ್ಲ ಶಾಸಕರನ್ನು ಅನರ್ಹಗೊಳಿಸಿತ್ತು. ಆದರೆ ದಿಲ್ಲಿ ಹೈಕೋರ್ಟ್ ಈ ನಿರ್ಧಾರವನ್ನು ರದ್ದು ಮಾಡಿತ್ತು. ಈ ಪ್ರಕರಣ ಎದುರಿಗಿದ್ದರೂ ಆಗಿನ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಂಟು ಮಂದಿಯನ್ನು ಸಂಸದೀಯ ಕಾರ್ಯದರ್ಶಿ ಗಳಾಗಿ ನೇಮಕ ಮಾಡಿದ್ದರು.