Advertisement

ಸಮಾನ ಮನಸ್ಕರ ಸಭೆಗೆ ಬ್ರೇಕ್‌

03:11 AM Apr 30, 2019 | Team Udayavani |

ಬೆಂಗಳೂರು/ಹುಬ್ಬಳ್ಳಿ: ಜಾರಕಿಹೊಳಿ ಬಂಡಾಯ ವಿಚಾರ ಇತ್ಯರ್ಥವಾಗದ ಬೆನ್ನಲ್ಲೇ ತಲೆದೋರಲಿದ್ದ ಮತ್ತೂಂದು ಸಮಸ್ಯೆಯನ್ನು ಕಾಂಗ್ರೆಸ್‌ ವರಿಷ್ಠರು ತಣ್ಣಗಾಗಿಸಿದ್ದಾರೆ. ಬೆಂಗಳೂರಿನಲ್ಲಿ ಸಮಾನ ಮನಸ್ಕ ಶಾಸಕರ ಸಭೆ ನಡೆಸಲು ಹೊರಟಿದ್ದ ಯಶವಂತಪುರದ ಕಾಂಗ್ರೆಸ್‌ ಶಾಸಕ ಎಸ್‌.ಟಿ. ಸೋಮಶೇಖರ್‌ ಪ್ರಯತ್ನಕ್ಕೆ ಪಕ್ಷದ ವರಿಷ್ಠರು ಬ್ರೇಕ್‌ ಹಾಕಿದ್ದಾರೆ.

Advertisement

ಎಚ್‌.ಡಿ. ದೇವೇಗೌಡ ಮತ್ತು ಸಿಎಂ ಕುಮಾರ ಸ್ವಾಮಿ ಅತೃಪ್ತಿ ವ್ಯಕ್ತಪಡಿಸಿದ್ದಲ್ಲದೆ, ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡಿದ್ದರು. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಎಸ್‌.ಟಿ. ಸೋಮಶೇಖರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಅನಂತರ ಸಭೆ ರದ್ದಾಗಿದೆ.

ಫ‌ಲಿತಾಂಶ ಹೊರಬೀಳುತ್ತಿದ್ದಂತೆ ಆಪರೇಷನ್‌ ಕಮಲ ಪ್ರಾರಂಭವಾಗಲಿದೆ ಎಂಬ ವದಂತಿ ಮತ್ತು ಸರಕಾರ ಪತನಗೊಳ್ಳಲಿದೆ ಎಂಬ ಬಿಜೆಪಿ ನಾಯಕರ ಮಾತುಗಳ ಬೆನ್ನಲ್ಲೇ ಶಾಸಕ ಸೋಮಶೇಖರ್‌ ಸೋಮವಾರ ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದರು. ಅದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೈಕಮಾಂಡ್‌ಗೆ ದೂರು ನೀಡಿದ್ದರು. ಇದ್ದಕ್ಕಿದ್ದಂತೆ ಇಂತಹ ಸಭೆಯ ಆವಶ್ಯಕತೆ ಏನು, ಇದು ಮೈತ್ರಿ ಧರ್ಮ ಪಾಲನೆಯೇ ಎಂದು ವರಿಷ್ಠರಿಬ್ಬರೂ ಪ್ರಶ್ನಿಸಿದ್ದು, ಸಭೆ ರದ್ದಾಗದಿದ್ದರೆ ನಾವೂ ಬೇರೆ ರೀತಿ ಯೋಚನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು ಎನ್ನಲಾಗಿದೆ.

ಲೋಕಸಭೆ ಚುನಾವಣೆ ಫ‌ಲಿತಾಂಶ ಬರುವುದಕ್ಕೆ ಮುನ್ನ ಇಂತಹ ಬೆಳವಣಿಗೆ ನಡೆದರೆ ರಾಜ್ಯದ ಜನತೆಗೆ ಏನು ಸಂದೇಶ ರವಾನೆಯಾಗಲಿದೆ ಎಂದು ಖಾರವಾಗಿಯೇ ಹೇಳಿದ್ದಾರೆ. ಈ ಬಗ್ಗೆ ಅಗತ್ಯವಾದರೆ ಸೋನಿಯಾ ಮತ್ತು ರಾಹುಲ್‌ ಗಾಂಧಿ ಜತೆಯೇ ಮಾತನಾಡುತ್ತೇವೆ ಎಂದಿದ್ದರು. ಇದಕ್ಕೆ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಸ್ಪಂದಿಸಿ ಸಮಾ ಧಾನ ಪಡಿಸಿದ್ದಲ್ಲದೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಕರೆ ಮಾಡಿ ಸಭೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಸರಕಾರದ ವಿರುದ್ಧ ಅಲ್ಲ
ಸಭೆ ರದ್ದಾಗಿಲ್ಲ, ಮುಂದೂಡಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿರುವ ಶಾಸಕ ಸೋಮಶೇಖರ್‌, ನಿಗಮ-ಮಂಡಳಿ ಅಧ್ಯಕ್ಷರ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಕರೆದಿದ್ದೆ ವಿನಾ ಸರಕಾರದ ವಿರುದ್ಧ ಅಲ್ಲ. ನಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಸಭೆ ಕರೆಯಲಾಗಿತ್ತು ಎಂದಿದ್ದಾರೆ.

Advertisement

ಸೋಮಶೇಖರ್‌ಗೆ ತರಾಟೆ
ಸಭೆ ನಡೆಸಲು ಮುಂದಾಗಿದ್ದ ಶಾಸಕ ಸೋಮಶೇಖರ್‌ ಅವರನ್ನು ವೇಣುಗೋಪಾಲ್‌ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕರ ಸಭೆ ಕರೆಯಲು ಅನುಮತಿ ನೀಡಿದ್ದು ಯಾರು ಎಂದು ಪ್ರಶ್ನಿಸಿ, ಏನೇ ಸಮಸ್ಯೆ ಇದ್ದರೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಗಳಿಗೆ ತೊಂದರೆ ಕೊಡಲು ನಾವು ಸಭೆ ನಡೆಸುತ್ತಿಲ್ಲ. ಅವರು ಸಮುದ್ರದಲ್ಲಿ ಈಜಾಡುತ್ತ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೈ ಮೇಲೆ ಮರಳು ಹಾಕಿಕೊಂಡು ಅರಾಮವಾಗಿ ಇರುವವರಿಗೆ ನಾವು ತೊಂದರೆ ಕೊಡುವುದಿಲ್ಲ. ಹಳ್ಳಿ ಕಡೆ ಜನರಿಗೆ ಕುಡಿಯಲು ನೀರಿನ ಸಮಸ್ಯೆ ಇದೆ. ಈ ಬಗ್ಗೆ ಚರ್ಚೆ ಮಾಡಬಾರದೇ?
– ಎಸ್‌.ಟಿ. ಸೋಮಶೇಖರ್‌ ಯಶವಂತಪುರ ಶಾಸಕ

ಒಂದಿಷ್ಟು ಶಾಸಕರು ಒಂದೆಡೆ ಸೇರಿ ಭೋಜನಕೂಟ ಮಾಡಲು ಮತ್ತು ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸುವ ಸಲುವಾಗಿ ಸಭೆ ನಡೆಸಲು ನಿರ್ಧರಿಸಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಇದೆಲ್ಲ ಬೇಡವೆಂದು ತಿಳಿಸಿದ್ದರಿಂದ ಸಭೆ ಮುಂದೂಡಿದ್ದಾರೆ. ಇದೇನು ಬಂಡಾಯವಲ್ಲ.
-ಸಿದ್ಧರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ
**
ಉಸ್ತುವಾರಿ ತಿಕ್ಕಾಟ : ತಣ್ಣಗಾಗಿಸಲು ದಿನೇಶ್‌ ತೇಪೆ
ಬೆಂಗಳೂರು/ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆಗೆ “ಉಸ್ತುವಾರಿ’ ವಿಚಾರದಲ್ಲಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಮತ್ತು ಸತೀಶ್‌ ಜಾರಕಿಹೊಳಿ ನಡು ವಣ ಮುಸುಕಿನ ಗುದ್ದಾಟ ವಿವಾದದ ಸ್ವರೂಪ ಪಡೆಯುವ ಲಕ್ಷಣಗಳು ಕಂಡು ಬರು ತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಂಗಪ್ರವೇಶ ಮಾಡಿ ತಣ್ಣಗಾಗಿಸಲು ತೇಪೆ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಾಯ ಕರ ಸಭೆ ನಡೆಸಿದ್ದ ರಾಜ್ಯ ಉಸ್ತು ವಾರಿ ಕೆ.ಸಿ. ವೇಣುಗೋಪಾಲ್‌, ಕುಂದ ಗೋಳ ಕ್ಷೇತ್ರದ ಉಸ್ತುವಾರಿ ಡಿ.ಕೆ. ಶಿವಕುಮಾರ್‌ ಅವರಿಗೆ ವಹಿ ಸಲು ಸೂಚಿಸಿದ್ದರು. ಈ ಮಾಹಿತಿ ಹೊರ ಬೀಳು ತ್ತಿದ್ದಂತೆ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಸಿಟ್ಟಿಗೆದ್ದು, ಉತ್ತರ ಕರ್ನಾಟಕದ ನಾಯಕರು ಸಮರ್ಥ ವಾಗಿ ದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಈ ಭಾಗದ ನಾಯಕರೇ ಚುನಾವಣೆ ನಿರ್ವಹಿಸಿ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇತ್ತ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ಕುಂದಗೋಳ ಉಸ್ತುವಾರಿ ವಹಿಸಿರುವುದಕ್ಕೆ ವಿರೋಧ ವ್ಯಕ್ತ ವಾಗಿರುವ ಬಗ್ಗೆ, ಸತೀಶ್‌ ಅವರು ಸಾಹುಕಾರರು, ನಾವು ಪ್ರಜೆಗಳು. ಪಕ್ಷ ಏನು ಕೆಲಸ ವಹಿಸುತ್ತದೆಯೋ ಅದನ್ನು ಮಾಡುತ್ತೇನೆ.

ಬಳ್ಳಾರಿಯಲ್ಲಿಯೂ ದೊಡ್ಡ ದೊಡ್ಡ ನಾಯಕರಿದ್ದರು. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿಯೂ ಕೆಲಸ ಮಾಡುವಂತೆ ಸೂಚಿಸಿದ್ದರು. ಪಕ್ಷದ ನಾಯಕರು ಕುಂದಗೋಳಕ್ಕೆ ಹೋಗಿ ಎಂದರೆ ಹೋಗುತ್ತೇನೆ. ಪಕ್ಷ ಹೇಳಿದ ಮೇಲೆ ಕೇಳಲೇ ಬೇಕಾಗುತ್ತದೆ ತಿಳಿಸಿದ್ದಾರೆ.
ಆದರೆ ಇಬ್ಬರು ನಾಯಕರ “ಉಸ್ತುವಾರಿ’ ಅಸಮಾಧಾನ ಬಹಿರಂಗವಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಕುಂದಗೋಳ ಕ್ಷೇತ್ರದ ಉಸ್ತುವಾರಿ ಯಾರಿಗೂ ಕೊಟ್ಟಿಲ್ಲ. “ಸಾಮೂಹಿಕ ನಾಯಕತ್ವ’ದಡಿ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.

ಕುಂದಗೋಳ ಉಪ ಚುನಾವಣೆ ಉಸ್ತುವಾರಿ ಕುರಿತು ನಿರ್ಧಾರ ಕೈಗೊಂಡಿಲ್ಲ. ಸಚಿವ ಡಿಕೆಶಿ ಅವರಿಗೆ ಉಸ್ತುವಾರಿ ನೀಡಲಾಗಿದೆ ಎಂಬುದು ಸುಳ್ಳು. ಅವರಿಗೆ ಉಸ್ತುವಾರಿ ನೀಡುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಮುಖಂಡರಾದ ಎಚ್‌.ಕೆ. ಪಾಟೀಲ ಸೇರಿದಂತೆ ಹಿರಿಯ ರೊಂದಿಗೆ ಚರ್ಚಿಸಿದ ಅನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿ ವಿವಾದ ತಣ್ಣಗಾಗಿಸಲು ತೇಪೆ ಹಾಕಿದ್ದಾರೆ.

ನಾನು ವಿರೋಧಿಸಿಲ್ಲ
ಇನ್ನೊಂದೆಡೆ “ಉದಯವಾಣಿ’ ಜತೆ ಮಾತನಾಡಿರುವ ಸತೀಶ್‌ ಜಾರಕಿಹೊಳಿ, ಕುಂದಗೋಳ ಉಪಚುನಾವಣೆ ವಿಚಾರ ಕುರಿತು ಸಚಿವ ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿಲ್ಲ. ಅವರ ವಿರುದ್ಧ ಹೇಳಿಕೆ ಕೂಡ ನೀಡಿಲ್ಲ. ಈಗಾಗಲೇ ಶಿವಕುಮಾರ್‌ಗೆ ಕುಂದಗೋಳ ಕ್ಷೇತ್ರದ ಉಸ್ತುವಾರಿ ಕೊಡಲಾಗಿದೆ. ಆದರೆ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ. ಇಲ್ಲೂ ಒಂದಾಗಿ ಕೆಲಸ ಮಾಡಿ ನಮ್ಮ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದಿದ್ದಾರೆ.

ನಾಮಪತ್ರ ಸಲ್ಲಿಕೆ
ಮೇ 19ರಂದು ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದರು. ಚಿಂಚೋಳಿ ಯಲ್ಲಿ ಕಾಂಗ್ರೆಸ್‌ನಿಂದ ಸುಭಾಶ್‌ ರಾಠೊಡ್‌ ಮತ್ತು ಬಿಜೆಪಿಯಿಂದ ಅವಿನಾಶ್‌ ಜಾಧವ್‌ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿಯಿಂದ ಎಸ್‌.ಐ.ಚಿಕ್ಕನಗೌಡರ್‌ತಮ್ಮ ನಾಮಪತ್ರ ಸಲ್ಲಿಸಿದರು.

ಗೆಲ್ಲಲು ತಂತ್ರಗಾರಿಕೆ
ಕುಂದಗೋಳ ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್‌ ತಂತ್ರಗಾರಿಕೆ ಹೆಣೆಯುತ್ತಿದೆ. ಮತ್ತೂಂದೆಡೆ ಡಿಕೆಶಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡರೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವನ್ನು ಬಿಜೆಪಿ ಅಸ್ತ್ರವಾಗಿಸಬಹುದು ಎಂಬ ಆತಂಕವೂ ಕಾಂಗ್ರೆಸ್‌ಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಈ ಬಗ್ಗೆ ಹೇಳಿಕೆ ನೀಡಿ, ಡಿಕೆಶಿ ಬರಲಿ; ಅವರು ಟ್ರಬಲ್‌ ಶೂಟರ್‌ ಅಲ್ಲ, ಟ್ರಬಲ್‌ ಕ್ರಿಯೇಟರ್‌, ಇಲ್ಲಿಗೆ ಬಂದು ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆಯೂ ಹೇಳಲಿ ಎಂದಿದ್ದರು. ಹೀಗಾಗಿ ಉಸ್ತುವಾರಿ ವಿಚಾರ ವಿವಾದವಾಗದಂತೆ ನೋಡಿಕೊಂಡಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next