ಮಾಗಡಿ: ಸರ್ವ ಶಿಕ್ಷಣ ಅಭಿಯಾನದಡಿ ಶಿಕ್ಷಕರಿಗೆ ತರಬೇತಿಗಾಗಿಯೇ ನಿರ್ಮಾಣ ಗೊಂಡಿರುವ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಟ್ಟಡದ ಸುತ್ತಲು ಬೃಹತ್ತಾಗಿ ಕುರಚಲು ಗಿಡ ಗಂಟಿಗಳು ಬೆಳೆದಿದ್ದು, ವಿಷ ಜಂತುಗಳ ವಾಸವಾಗಿ ಮಾರ್ಪಟ್ಟಿದೆ. ಕಟ್ಟಡ ಸಹ ತೀರ ಶಿಥಿಲಗೊಂಡಿದ್ದು, ಮಳೆ ಬಿದ್ದರೆ ಮೇಲ್ಚಾವಣಿ ಸೋರುತ್ತಿದ್ದು, ಬೂತ ಬಂಗಲೆಯಂತಾಗಿದೆ. ಪ್ರಸ್ತುತ ಬಿಆರ್‌ಸಿ ಕೇಂದ್ರವೀಗ ಮುಚ್ಚಿದ್ದು, ತಿರುಮಲೆ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಶಿಕ್ಷಕರಿಗೆ ಸದ್ಯ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರಿಂದ ಇಲ್ಲಿನ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.
ಬೂತ ಬಂಗಲೆ: ಸರ್ವ ಶಿಕ್ಷಣ ಅಭಿಯಾನದಡಿ ತಾಲೂಕಿನ ಶಿಕ್ಷಕರಿಗೆ ತರಬೇತಿ ನೀಡಲು ತಿರುಮಲೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಕ್ಷೇತ್ರ ಸಂಪನ್ಮಾಲ ಕೇಂದ್ರದ ಕಟ್ಟಡ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಸಹ ಸೋರುತ್ತಿದ್ದು, ಈಗ ಕೇಂದ್ರ ಬೂತ ಬಂಗಲೆಯಾಗಿದೆ.
ಸೋರುತ್ತಿದೆ ಕೇಂದ್ರ: ಗೋಡೆಗಳಲ್ಲಿ ಬಿರುಕು, ಕಟ್ಟಡದ ಸುತ್ತಲೂ ಕುರುಚಲು ಗಿಡ ಗಂಟಿಗಳು ಬೆಳೆದು ನಿಂತಿವೆ.ಹಾವು, ಚೇಳು, ಕಪ್ಪೆ ಸೇರಿಕೊಂಡಿವೆ. ಮಳೆ ಬಿದ್ದರೆ ಸಾಕುಕಟ್ಟಡ ಪೂರ್ಣ ಸೋರುತ್ತಿದ್ದು, ಮಹತ್ವದ ದಾಖಲೆಗಳು ಹಾಳುತ್ತವೆ ಎಂದು ಬಿಆರ್‌ಸಿ ಸಂಪನ್ಮೂಲಧಿಕಾರಿ ದಾಖಲೆಗಳನ್ನು ಪಕ್ಕದ ಶಾಲೆಯ ಕೊಠಡಿಗೆ ವರ್ಗಾಯಿಸಿದ್ದಾರೆ. ಈ ಕಟ್ಟಡದಲ್ಲಿ ತರಬೇತಿ ನೀಡಲು ಸಾಧ್ಯವಾಗದೆ, ಪಕ್ಕದ ಶಾಲಾ ಕೊಠಡಿಯಲ್ಲಿಯೇ ಶಿಕ್ಷಕರ ತರಬೇತಿ ನಡೆಯುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ.
ಕಟ್ಟಡ ವರ್ಗಾಹಿಸಿ: ಮಾಗಡಿ ಪಟ್ಟಣದ ಹೊಸಪೇಟೆ ವಾಟರ್ ಪಂಪ್ ಹೌಸ್ ಬಳಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಕಟ್ಟಡದಲ್ಲಿ ಹಿಂದೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಡೆಸಲಾಗುತ್ತಿತ್ತು. ಪ್ರಸ್ತುತ ಕಿತ್ತೂರು ರಾಣಿ ಚೆನ್ನಮ್ಮವಸತಿ ಶಾಲೆಯನ್ನು ಸ್ವಂತ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.
ಈಗ ಕಟ್ಟಡ ಒಂದು ವರ್ಷದಿಂದಲೂ ಖಾಲಿಯಿದ್ದು, ಹೀಗೆ ಬಿಟ್ಟರೆ ಅದು ಸಹ ಬೂತ ಬಂಗಲೆಯಾಗುವುದರಲ್ಲಿ ಸಂಶಯವಿಲ್ಲ.ಈ ಕಟ್ಟಡ ಬಹಳ ಸುಸಜ್ಜಿತವಾಗಿದ್ದು, ಶಿಕ್ಷಕರ ತರಬೇತಿಗೆ ಹೇಳಿ ಮಾಡಿಸಿದಂತಿದೆ.ಬಿಆರ್‌ಸಿ ಕೇಂದ್ರವನ್ನು ಸರ್ಕಾರಿ ಕಟ್ಟಡಕ್ಕೆ ಬದಲಾಯಿಸಿಕೊಳ್ಳುವುದು ಸೂಕ್ತ ಎಂಬುವುದು ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಶಾಸಕರು ಮನಸ್ಸು ಮಾಡಬೇಕಿದೆ.