ಜಗತ್ತಿನ ಬಹುತೇಕ ದೇಶಗಳಲ್ಲಿ ರಾಷ್ಟ್ರವ್ಯಾಪಿ ನಿರ್ಬಂಧ ಹೇರಿರುವುದು ಈಗ ಆಯಾ ದೇಶಗಳ ಸರಕಾರಗಳಿಗೇ ತಲೆನೋವಾಗಿ ಪರಿಣಮಿಸಿದೆ.
ಲಾಕ್ ಡೌನ್‌ನಿಂದಾಗಿ ಅರ್ಥ ವ್ಯವಸ್ಥೆ ಸ್ತಬ್ಧವಾಗಿದ್ದು, ಜನರು ಕೂಡ ಮನೆಗಳಲ್ಲೇ ಬಂಧಿಯಾಗಿ ರೋಸಿಹೋಗಿದ್ದಾರೆ. ಹೀಗಾಗಿ, ನಿರ್ಬಂಧ ತೆರವುಗೊಳಿಸುವಂತೆ ಸರಕಾರಗಳ ಮೇಲೆ ಒತ್ತಡ ಹೆಚ್ಚತೊಡಗಿದೆ.
ಎರಡು ತಿಂಗಳ ಬಳಿಕ ಅಮೆರಿಕದ ಟೆಕ್ಸಾಸ್ ಮತ್ತು ವರ್ಮೌಂಟ್ ಸೇರಿದಂತೆ ಕೆಲವು ಪ್ರಾಂತ್ಯಗಳಲ್ಲಿ ಲಾಕ್ ಡೌನ್ ಭಾಗಶಃ ತೆರವುಗೊಳಿಸಲಾಗಿದೆ. ಇಲ್ಲಿನ ಹಲವು ಭಾಗಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಮಾರನೇ ದಿನವೇ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ನ್ಯೂಯಾರ್ಕ್ ಗವರ್ನರ್ ಮಾತ್ರ ಯಾವುದೇ ಒತ್ತಡಕ್ಕೂ ಮಣಿಯದೇ, ನಿರ್ಬಂಧ ಮುಂದುವರಿಯಲಿದೆ ಎಂದಿದ್ದಾರೆ.
ಇದಾದ ಬೆನ್ನಲ್ಲೇ ಬ್ರೆಜಿಲ್ ನ ಪ್ರಮುಖ ನಗರಗಳಲ್ಲೂ ಭಾನುವಾರ ನೂರಾರು ಮಂದಿ ಪ್ರತಿಭಟನೆ ಆರಂಭಿಸಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೋ ಕೂಡ ಗವರ್ನರ್‌ಗಳು ಹೇರಿರುವ ಶಟ್ ಡೌನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಪೇನ್ ನಲ್ಲೂ ಏ.27ರಿಂದ ನಿರ್ಬಂಧ ಭಾಗಶಃ ತೆರವುಗೊಳಿಸುವುದಾಗಿ ಅಲ್ಲಿನ ಸರಕಾರ ಘೋಷಿಸಿದೆ. ಫ್ರಾನ್ಸ್ ಮಾತ್ರ ಮೇ 11ರವರೆಗೂ ಲಾಕ್ ಡೌನ್ ಮುಂದುವರಿಯಲಿದೆ. ಇದೇ ವೇಳೆ, 2 ವಾರಗಳ ಬಳಿಕ ನ್ಯೂಯಾರ್ಕ್ ನಲ್ಲಿ ದೈನಂದಿನ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಭಾನುವಾರ 550 ಮಂದಿ ಮೃತಪಟ್ಟಿದ್ದಾರೆ.