ರಿಯೋ ಡಿ ಜನೈರೋ: ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 34,918 ಜನರಿಗೆ ಹೊಸದಾಗಿ ಕೋವಿಡ್ -19 ಸೋಂಕು ತಗುಲಿದ್ದು, 1,281 ಜನರು ಮೃತಪಟ್ಟಿದ್ದಾರೆ. ಆ ಮೂಲಕ ಒಟ್ಟಾರೆ ಮೃತರ ಸಂಖ್ಯೆ 45 ಸಾವಿರ ಗಡಿ ದಾಟಿದೆ.
ಬ್ರೆಜಿಲ್ ನಲ್ಲಿ ಸುಮಾರು 210 ಮಿಲಿಯನ್ ಜನಸಂಖ್ಯೆ ಇದ್ದು, ವರದಿಗಳ ಪ್ರಕಾರ ಜೂನ್ ತಿಂಗಳ ಅಂತ್ಯದ ವೇಳೆ 60,000 ಕ್ಕಿಂತ ಹೆಚ್ಚು ಜನರು ಈ ಮಹಾಮಾರಿಗೆ ಬಲಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಬ್ರೆಜಿಲ್ ನಲ್ಲಿ 9 ಲಕ್ಷಕ್ಕಿಂತ ಹೆಚ್ಚು ಕೋವಿಡ್-19 ಸೋಂಕಿತರಿದ್ದು ಜಗತ್ತಿನ ಎರಡನೇ ಹಾಟ್ ಸ್ಪಾಟ್ ಎನಿಸಿಕೊಂಡಿದೆ.
ಕೋವಿಡ್ ಮಹಾಮಾರಿ ಉಗಮ ಸ್ಥಾನ ಚೀನಾದಲ್ಲಿ ಮತ್ತೆ 31 ಹೊಸ ಪ್ರಕರಣಗಳು ವರದಿಯಾಗಿದೆ. ಮಾತ್ರವಲ್ಲದೆ ಬೀಜಿಂಗ್ ಕೆಲವೆಡೆ ಎರಡನೇ ಹಂತದ ಲಾಕ್ ಡೌನ್ ಅನ್ನು ಜಾರಿಗೆ ತರಲಾಗಿದೆ.
ಅಮೆರಿಕಾದಲ್ಲಿ ಕೋವಿಡ್ 19 ವೈರಸ್ ಅಟ್ಟಹಾಸ ಮೆರೆಯುತ್ತಿದ್ದು ಈಗಾಗಲೇ 22 ಲಕ್ಷಕ್ಕಿಂತ ಹೆಚ್ಚು ಸೋಂಕಿತರು ಕಂಡುಬಂದಿದ್ದು, 1,19,132 ಜನರು ಬಲಿಯಾಗಿದ್ದಾರೆ. ವಿಪರ್ಯಾಸವೆಂದರೇ ಇದು ಪ್ರಥಮ ಮಹಾಯುದ್ಧದಲ್ಲಿ ಮೃತರಾದ ಜನರ ಸಂಖ್ಯೆಯನ್ನು ಮೀರಿದೆ. ಪ್ರಥಮ ಮಹಾಯುದ್ಧದಲ್ಲಿ ಸುಮಾರು 1,16,516 ಅಮೆರಿಕನ್ನರು ಮೃತಪಟ್ಟಿದ್ದರು.
ಭಾರತದಲ್ಲಿ ಕೂಡ ವೈರಸ್ ಅಟ್ಟಹಾಸ ಮಿತಿಮೀರಿದ್ದು ಮೃತರ ಪ್ರಮಾಣ 10,000 ದ ಗಡಿ ದಾಟಿದೆ. ಕಳೆದ 2 ವಾರದಿಂದ ಪ್ರತಿದಿನ 10 ಸಾವಿರ ಹೊಸ ಸೋಂಕಿತರು ಕಂಡುಬರುತ್ತಿದ್ದು ಆತಂಕಕ್ಕೆ ಎಡೆಮಾಡಿದೆ. ಒಟ್ಟಾರೆಯಾಗಿ ದೇಶದಲ್ಲಿ 3,43,091 ವೈರಾಣು ಪೀಡಿತರಿದ್ದು ಜಾಗತಿಕವಾಗಿ ಭಾರತ 4ನೇ ಹಾಟ್ ಸ್ಪಾಟ್ ಎನಿಸಿಕೊಂಡಿದೆ.