ರಿಯೋ ಡಿ ಜನೈರೋ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹದಿಂದ ಬ್ರೆಜಿಲ್ ನ ಈಶಾನ್ಯ ಪ್ರದೇಶದ ಪೆರ್ನಾಂಬುಕೊ ರಾಜ್ಯದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಟಿಕೆಟ್ ಬಿಸಿ: ಕಾಂಗ್ರೆಸ್ ಶಿಬಿರಕ್ಕೆ ಗೈರಾದ ಎಸ್.ಆರ್.ಪಾಟೀಲ್, ಬಿ.ಎಲ್.ಶಂಕರ್, ಜಮೀರ್
ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಭೂಕುಸಿತ ಸಂಭವಿಸಿದ್ದು, ನೂರಾರು ಮನೆಗಳು ನೆಲಸಮವಾಗಿದೆ. ಮತ್ತೊಂದೆಡೆ ಕನಿಷ್ಠ 6,650 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ಹೇಳಿದೆ.
1966ರ ಮೇ ನಂತರ ಪೆರ್ನಾಂಬುಕೊ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಭಾರೀ, ಮಳೆಗೆ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 1966ರಲ್ಲಿನ ಮಳೆ, ಪ್ರವಾಹದಲ್ಲಿ 175 ಮಂದಿ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಮಳೆ, ಪ್ರವಾಹದಿಂದಾಗಿ ಕಣ್ಮರೆಯಾಗಿರುವವರ ಶವಗಳ ಪತ್ತೆಯಾಗಿ ತರಬೇತಿ ಪಡೆದ ಶ್ವಾನದಳದೊಂದಿಗೆ ಅಗ್ನಿಶಾಮಕ ತಂಡ ಮತ್ತು ಬ್ರೆಜಿಲ್ ಸೇನೆ ತೀವ್ರ ಶೋಧ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ಹೇಳಿದೆ. ಪೆರ್ನಾಂಬುಕೊ ರಾಜ್ಯದಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.
ಬುಧವಾರ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಭಾರೀ ಮಳೆಯಿಂದಾಗಿ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇದ್ದಿರುವುದಾಗಿ ಹವಾಮಾನ ಇಲಾಖೆ ಎಚ್ಚರಿಸಿದೆ.