ಮುಂಬೈ: 15ನೇ ಆವೃತ್ತಿಯ ಐಪಿಎಲ್ ಶನಿವಾರ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕೆಕೆಆರ್ ನಾಯಕನಾಗಿ ಶ್ರೇಯಸ್ ಅಯ್ಯರ್ ಶುಭಾರಂಭ ಮಾಡಿದ್ದಾರೆ.
ಇದೇ ಪಂದ್ಯದಲ್ಲಿ ಸಿಎಸ್ ಕೆ ಬೌಲರ್ ಡ್ವೇನ್ ಬ್ರಾವೋ ಅವರು ಲಸಿತ್ ಮಾಲಿಂಗ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಬ್ರಾವೋ ಐಪಿಎಲ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಮಾಲಿಂಗ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮಾಜ ಮುಂಬೈ ಇಂಡಿಯನ್ಸ್ ಆಟಗಾರ ಲಸಿತ್ ಮಾಲಿಂಗ ಅವರು ಐಪಿಎಲ್ ನಲ್ಲಿ 170 ವಿಕೆಟ್ ಪಡೆದಿದ್ದರು. ಡ್ವೇನ್ ಬ್ರಾವೋ ಅವರು ಕೆಕೆಆರ್ ಪಂದ್ಯದಲ್ಲಿ ಈ ದಾಖಲೆ ಸರಿಗಟ್ಟಿದ್ದಾರೆ.
ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಬ್ರಾವೋ ಐಪಿಎಲ್‌ನಲ್ಲಿ ತಮ್ಮ 151ನೇ ಪಂದ್ಯದಲ್ಲಿ ಮಾಲಿಂಗ ಅವರ ಖಾತೆಯನ್ನು ಸರಿಗಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ಪರ 122 ಪಂದ್ಯಗಳಿಂದ 170 ವಿಕೆಟ್ ಪಡೆದ ನಂತರ ಮಾಲಿಂಗ ವಿದಾಯ ಹೇಳಿದ್ದರು. ಸದ್ಯ ಮಾಲಿಂಗ ರಾಜಸ್ಥಾನ ರಾಯಲ್ಸ್ ನ ಸ್ಪೀಡ್ ಬೌಲಿಂಗ್ ಕೋಚ್ ಆಗಿದ್ದಾರೆ.
ಇದನ್ನೂ ಓದಿ:ಬೆಂಗಳೂರು ವರ್ಸಸ್ ಅಗರ್ವಾಲ್! ಆರ್‌ಸಿಬಿ ಅದೃಷ್ಟ ಬದಲಿಸಿಯಾರೇ ಡು ಪ್ಲೆಸಿಸ್?
166 ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ ಮೂರನೇ ಸ್ಥಾನದಲ್ಲಿದ್ದು, ನಾಲ್ಕನೇ ಸ್ಥಾನದಲ್ಲಿ ಪಿಯೂಷ್ ಚಾವ್ಲಾ ಇದ್ದಾರೆ. ಅವರು ಐಪಿಎಲ್ ನಲ್ಲಿ 157 ವಿಕೆಟ್ ಕಿತ್ತಿದ್ದಾರೆ.
ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದರೆ, ಕೆಕೆಆರ್ ತಂಡವು 18.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.