Advertisement

ಯುದ್ಧ ಮತ್ತು ಬೀನಾ : ಸೈನಿಕನ ಮಡದಿಯ ದಿಟ್ಟ ಹೆಜ್ಜೆಗಳು

12:59 PM Apr 18, 2019 | Hari Prasad |

ಜೀವನ ಸಂಗಾತಿ ಬಳಿ ಇಲ್ಲದ ಹೊತ್ತಿನಲ್ಲಿ ಯಾರಿಗೇ ಆದರೂ ಒಂದು ಶೂನ್ಯ ಕಾಡುತ್ತದೆ. ಆ ಶೂನ್ಯದ ಚೌಕಟ್ಟನ್ನು ಮೀರಿ ನಿಲ್ಲುವ ಬದುಕಿನಲ್ಲಿ ಹಲವು ಗಟ್ಟಿ ಅನುಭವಗಳಿರುತ್ತವೆ. ಕಾರ್ಗಿಲ್‌ ಯುದ್ಧದಲ್ಲಿ ಮೊದಲ ಆಹುತಿಯಾದ, ಬೆಳಗಾವಿಯ ಫ್ಲೈಟ್‌ ಲೆಫ್ಟಿನೆಂಟ್‌ ಮುಹಿಲನ್‌ ವೀರ ಮರಣ ಅಪ್ಪಿದಾಗ, ಪತ್ನಿ ಬೀನಾ ಅವರು ಧೃತಿಗೆಡಲಿಲ್ಲ. ಕಣ್ಣೀರು ಹಾಕಿ ಪತಿಗೆ ಅಪಮಾನ ಮಾಡುವುದಿಲ್ಲ ಎಂದು ನಿರ್ಧರಿಸಿ, ಮಗ ಧ್ರುವನನ್ನು ಬಿಗಿದಪ್ಪಿಕೊಂಡರಂತೆ. ನಂತರ ಅವರು ಇಟ್ಟ ದಿಟ್ಟ ಹೆಜ್ಜೆಗಳನ್ನು ವಿಂಗ್‌ ಕಮಾಂಡರ್‌ ಸುದರ್ಶನ್‌ ಅವರು ಇಲ್ಲಿ ಅಕ್ಷರಗಳಲ್ಲಿ ಮೂಡಿಸಿದ್ದಾರೆ…

Advertisement

ನಾನು ಬೀನಾ… ಬೆಳಗಾವಿಯ ಪುಟ್ಟ ಮನೆಯೊಂದರಲ್ಲಿ ಹುಟ್ಟಿ ಬೆಳೆದವಳು. ಮನೆ ತುಂಬಾ ಜನ. ಯಾವಾಗಲೂ ಗದ್ದಲ, ಗಲಾಟೆ, ಸಡಗರ ಮತ್ತು ನಿರಂತರ ಮಾತುಕತೆ. ಆಗಲೇ ನನಗೆ ನಿಶ್ಶಬ್ದದ ಮಹತ್ವದ ಅರಿವಾಗಲು ಆರಂಭಿಸಿತ್ತು. ನಮ್ಮ ತಂದೆ ಮಾಡುತ್ತಿದ್ದ ವ್ಯಾಪಾರದಲ್ಲಿ ಏರುಪೇರಾಗಿ, ಹಣಕಾಸಿನ ಮುಗ್ಗಟ್ಟು ಎದುರಾಯಿತು. ಹಾಗಾಗಿ, ಮನೆಯ ಜವಾಬ್ದಾರಿ ನನ್ನ ಹೆಗಲಿಗೂ ಬಿತ್ತು. ಹೈಸ್ಕೂಲ್‌ ವಿದ್ಯಾಭ್ಯಾಸದ ಜೊತೆಗೇ ಟೈಪಿಂಗ್‌ ಮತ್ತು ಶೀಘ್ರಲಿಪಿಯ (ಶಾರ್ಟ್‌ಹ್ಯಾಂಡ್‌) ತರಬೇತಿ ಪಡೆದುಕೊಂಡು, ಅರೆಕಾಲಿಕ ಟೈಪಿಸ್ಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಅದರಿಂದ ಬರುತ್ತಿದ್ದ ವರಮಾನದಲ್ಲೇ ನನ್ನ ಮತ್ತು ತಮ್ಮ, ತಂಗಿಯ ವಿದ್ಯಾಭ್ಯಾಸದ ಖರ್ಚು ಸರಿದೂಗಿಸುತ್ತಿದ್ದೆ. ಕಡಿಮೆ ಖರ್ಚಿನ ಕಾಲೇಜಿಗೆ ಸೇರಿಕೊಂಡು ಪದವಿಯನ್ನೂ ಮುಗಿಸಿದೆ.

ಬದುಕಿನಲ್ಲಿ ಅದೆಷ್ಟೋ ಘಟನೆಗಳು ಆಕಸ್ಮಿಕವಾಗಿ ನಡೆದುಬಿಡುತ್ತವೆ. ಅಂಥಹುದರಲ್ಲಿ ನನ್ನ ಮತ್ತು ಫ್ಲೈಟ್‌ ಲೆಫ್ಟಿನೆಂಟ್‌ ಮುಹಿಲನ್‌ ಅವರ ಭೇಟಿಯೂ ಒಂದು. ಪರಿಚಯದಲ್ಲಿ ಶುರುವಾದ ನಮ್ಮ ಸಂಬಂಧ ಪ್ರೇಮಕ್ಕೆ ತಿರುಗಿ, ಅಲ್ಲಿಂದ ಪ್ರಣಯ ವಿವಾಹದ ಮೆಟ್ಟಿಲೇರಿದ್ದು ಈಗಲೂ ಕನಸಿನಂತೆ ಅನ್ನಿಸುತ್ತದೆ. ನಮ್ಮ ಮದುವೆಯಾದಾಗ ಅವರು ಅಸ್ಸಾಂನಲ್ಲಿನ ಒಂದು ವಾಯುನೆಲೆಯಲ್ಲಿ ಹೆಲಿಕಾಪ್ಟರ್‌ ಪೈಲಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಾನಾಯ್ತು ನನ್ನ ಓದು, ಕೆಲಸ ಆಯ್ತು ಅಂತ ಬದುಕಿದ್ದ ಹುಡುಗಿ ನಾನು. ಬೆಳಗಾವಿಯೇ ಒಂದು ಜಗತ್ತು ಅಂದುಕೊಂಡಿದ್ದ ನನಗೆ, ಹೊರ ಪ್ರಪಂಚದ ಅರಿವಾಗಿದ್ದು ಅಸ್ಸಾಂಗೆ ಹೋದ ಮೇಲೆಯೇ.

ಮುಹಿಲನ್‌ ಒಬ್ಬ ಸಾಹಸಿ ಪೈಲಟ್‌. ಹೆಲಿಕಾಪ್ಟರ್‌ ಗಳ ಗನ್‌ಗಳಿಂದ ಗುರಿಯಿಟ್ಟು ಗುಂಡು ಹಾರಿಸುವುದರಲ್ಲಿ ನಿಸ್ಸೀಮರು. ಶಾರ್ಪ್‌ ಶೂಟರ್‌ ಅಂತಲೇ ಎಲ್ಲರೂ ಅವರನ್ನು ಕರೆಯುತ್ತಿದ್ದುದು. ಮುಹಿಲನ್‌ ತುಂಬಾ ಸರಳ ಸ್ವಭಾವದವರು, ಮಿತಭಾಷಿ. ಆಡುವ ಮಾತೂ ತೂಕದ್ದು. ನಾನು, ಅವರು, ನಮ್ಮ ಮಗು; ಇವಿಷ್ಟೇ ನನ್ನ ಪ್ರಪಂಚವಾಗಿತ್ತು.

ಅವರ ಕಣ್ಣಲ್ಲಿ ಹೆದರಿಕೆ ಇರಲಿಲ್ಲ…
ಕಾರ್ಗಿಲ್‌ ಸಂಘರ್ಷದ ಕಾರ್ಮೋಡಗಳು ದೇಶಾದ್ಯಂತ ದಟ್ಟೈಸುತ್ತಿದ್ದ ಸಮಯವದು. ಮುಹಿಲನ್‌ ಅವರಿಗೆ ಕಾಶ್ಮೀರದ ಶ್ರೀನಗರಕ್ಕೆ ಹೊರಡುವಂತೆ ಆದೇಶ ಬಂತು. ನಾಲ್ಕು ಹೆಲಿಕಾಪ್ಟರ್‌ಗಳ ಒಂದು ತಂಡ, ದ್ರಾಸ್‌ ಪ್ರಾಂತ್ಯದಲ್ಲಿ ಅತಿಕ್ರಮಣ ಮಾಡಿ ಕುಳಿತಿದ್ದ ಪಾಕಿಸ್ತಾನದ ಸೈನಿಕರ ಮೇಲೆ ಕಾರ್ಯಾಚರಣೆ ನಡೆಸುವ ಆದೇಶ ಅದಾಗಿತ್ತು. ಹದಿನಾರು ಸಾವಿರ ಅಡಿ ಎತ್ತರದಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ಶತ್ರುಗಳ ಮೇಲೆ ದಾಳಿ ನಡೆಸುವ ವ್ಯೂಹವನ್ನು ಅದೇ ಮೊದಲ ಬಾರಿಗೆ ಪ್ರಯೋಗಾತ್ಮಕವಾಗಿ ರಚಿಸಲಾಗಿತ್ತು. ಅದೇನೋ ಹೊಸ ಆಟ ಎನ್ನುವಂತೆ ಮುಹಿಲನ್‌ ಉತ್ಸುಕರಾಗಿದ್ದರು. ಅದರ ಬಗ್ಗೆ ವಿವರಿಸುವಾಗ ಅವರ ಕಣ್ಣುಗಳಲ್ಲಿ ಎಳ್ಳಷ್ಟೂ ಹೆದರಿಕೆ ಇರಲಿಲ್ಲ.

Advertisement

ಕಾರ್ಗಿಲ್‌ ಯುದ್ಧದ ಮೊದಲ ಆಹುತಿ
ಮುಹಿಲನ್‌ ಅವರು ಹಾರಿಸುತ್ತಿದ್ದ ಹೆಲಿಕಾಪ್ಟರ್‌ ನಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದವು. ಆದರೆ, ಅವತ್ತೇ ದಾಳಿ ನಡೆಸಬೇಕಾದ ಅನಿವಾರ್ಯವನ್ನು ಮುಹಿಲನ್‌ ಅರ್ಥ ಮಾಡಿಕೊಂಡಿದ್ದರು. “ಪರವಾಗಿಲ್ಲ, ನಾನು ನಿಭಾಯಿಸಬಲ್ಲೆ’ ಎಂದು ಹುಮ್ಮಸ್ಸಿನಿಂದಲೇ ಹೆಲಿಕಾಪ್ಟರ್‌ ಏರಿದರು. ಆಕಾಶದಲ್ಲಿ ಯುದ್ಧ ಪ್ರಾರಂಭವಾಯ್ತು. ಹಠಾತ್ತನೆ ಬಂದೆರಗಿದ ಹೆಲಿಕಾಪ್ಟರ್‌ಗಳ ದಾಳಿಯಿಂದ ಕಕ್ಕಾಬಿಕ್ಕಿಯಾದ ಪಾಕಿಸ್ತಾನಿ ಸೈನಿಕರು ತಮ್ಮಲ್ಲಿದ್ದ ಎಲ್ಲಾ ಮಿಸೈಲ್‌ಗ‌ಳಿಂದ ಒಟ್ಟಿಗೆ ಫೈರ್‌ ಮಾಡಲು ಆರಂಭಿಸಿದರಂತೆ. ಧೃತಿಗೆಡದ ಮುಹಿಲನ್‌, ಪ್ರತಿಯಾಗಿ ಆಕ್ರಮಣ ನಡೆಸಿದರು. ಆಗ ಶತ್ರು ಸೈನ್ಯದ ಒಂದು ಮಿಸೈಲ್‌ ಮುಹಿಲನ್‌ರ ಹೆಲಿಕಾಪ್ಟರಿಗೆ ಹೊಡೆದು ಬಿಟ್ಟಿತು. ಕಾರ್ಗಿಲ್‌ ಸಂಘರ್ಷ ತನ್ನ ಮೊದಲ ಆಹುತಿಯನ್ನು ಪಡೆದು ಬಿಟ್ಟಿತ್ತು! ಹೆಲಿಕಾಪ್ಟರ್‌ನಲ್ಲಿದ್ದ ನಾಲ್ಕೂ ಜನ ಆಕಾಶದಲ್ಲಿಯೇ ಹುತಾತ್ಮರಾದರು. ವಾಯುನೆಲೆಯಲ್ಲಿದ್ದ ನನಗೆ ವಿಷಯ ತಿಳಿದಾಗ, ಎರಡು ವರ್ಷದ ಮಗು ಧ್ರುವ ಎದೆಗೊರಗಿ ನಿದ್ದೆ ಮಾಡುತ್ತಿದ್ದ. ಆ ಸ್ಥಿತಿಯಲ್ಲೇ “ಮುಹಿಲನ್‌ ಇನ್ನಿಲ್ಲ’ ಎಂಬ ಕಟು ಸತ್ಯವನ್ನು ಅರಗಿಸಿಕೊಳ್ಳುವ ಪ್ರಯತ್ನ ಮಾಡಿದೆ.

ಕೈ ಹಿಡಿದ ಅಧ್ಯಾತ್ಮ
ಚಿಕ್ಕಂದಿನಿಂದಲೇ ನನಗೆ ಅಧ್ಯಾತ್ಮದ ಕಡೆಗೆ ಒಲವಿತ್ತು. ಯಾವುದು ಸರಿ, ಯಾವುದು ತಪ್ಪು, ಪಾಪ-ಪುಣ್ಯ, ಧರ್ಮ-ಅಧರ್ಮ, ನೋವು-ನಲಿವು ಇವೆಲ್ಲಾ ದ್ವಂದ್ವಗಳ ನಡುವೆ ಖಚಿತವಾದದ್ದು ಸಾವೊಂದೇ ಎಂಬ ಸತ್ಯ ನನಗೆ ಅರ್ಥವಾಗಿತ್ತು. ವಯೋ ಸಹಜ ಸಾವು, ಅನಾರೋಗ್ಯದಿಂದ ಸಾವು, ಅಪಘಾತದಲ್ಲಿ ಸಾವು, ಕುಂತ ಕುಂತಲ್ಲೇ ಸುಖ ಮರಣ… ಹೀಗೆ ಎಲ್ಲರೂ ಒಂದಲ್ಲಾ ಒಂದು ದಿನ ಈ ಜಗತ್ತನ್ನು ತೊರೆಯಲೇಬೇಕು. ಆದರೆ, ನನ್ನ ಮುಹಿಲನ್‌ನ ಸಾವು ಎಲ್ಲದ್ದಕ್ಕಿಂತ ಶ್ರೇಷ್ಠ. ದೇಶ ರಕ್ಷಣೆಯಲ್ಲಿ ದಕ್ಕಿದ ವೀರಮರಣ. ಇದು ಕೆಲವರಿಗಷ್ಟೇ ಸಿಗುವ ಸಾವು. ಹಾಗಾಗಿ ಇದು ಶೋಕಿಸುವ ಸಂದರ್ಭವಲ್ಲ, ಹೆಮ್ಮೆಯಿಂದ ಗರ್ವ ಪಡುವ ಸಂದರ್ಭ. ನಾನು ಕಣ್ಣೀರು ಹಾಕಿ, ಮುಹಿಲನ್‌ಗೆ ಅಪಮಾನ ಮಾಡುವುದಿಲ್ಲ ಎಂದು ನಿರ್ಧರಿಸಿದವಳೇ ಧ್ರುವನನ್ನು ಇನ್ನೊಮ್ಮೆ ಬಿಗಿದಪ್ಪಿಕೊಂಡೆ, ನನ್ನ ವಿಚಾರಧಾರೆಯನ್ನು ಅವನಿಗೆ ಧಾರೆಯೆರೆಯುವಂತೆ…

ಪರಿಶೋಧನೆ ಆರಂಭ
ಮುಹಿಲನ್‌ರ ಪಾರ್ಥಿವ ಶರೀರದೊಂದಿಗೆ ಬೆಳಗಾವಿಗೆ ಮರಳಿದೆ. ವೀರಯೋಧನ ಶವಸಂಸ್ಕಾರ ರಾಷ್ಟ್ರೀಯ ಗೌರವದಿಂದ ನಡೆಯುತ್ತಿದ್ದಾಗ ನಾನೇ ಮಂಚೂಣಿಯಲ್ಲಿ ನಿಂತು ಅಂತಿಮ ನಮನ ಸಲ್ಲಿಸಿದೆ. ಅವತ್ತು ನನ್ನ ನಿಲುವು ಕಂಡು ಕೆಲವರಿಗೆ ಆಶ್ಚರ್ಯವಾಗಿರಬಹುದು, ಕೆಲವರಿಗೆ ಅರ್ಥವಾಗಿರಲೂಬಹುದು. ಮುಂದಿನ ಹೋರಾಟಕ್ಕೆ ಆಗಲೇಸಿದ್ಧತೆ ಪ್ರಾರಂಭವಾಗಿತ್ತು. ಅಧ್ಯಾತ್ಮಿಕ ಪರಿಪಕ್ವತೆಯ ಪರಿಶೋಧ ನಡೆಸಲು ನಿರ್ಧರಿಸಿದೆ. ಮುಂದೆ, ಸ್ವಾಮಿ ವಿವೇಕಾನಂದ, ಮಹರ್ಷಿ ಮಹೇಶ್‌ ಯೋಗಿಯವರ ವಿಚಾರಧಾರೆ ನನಗೆ ಮಾರ್ಗದರ್ಶಿಯಾದವು. ಪೂನಾದ ಗುರು ತೇಜ್‌ ಪರಖೀಜಿಯವರು ಅಧ್ಯಾತ್ಮಿಕ ಗುರುವಾದರು. ನನ್ನ ಬದುಕಿನ ಎಲ್ಲಾ ದ್ವಂದ್ವಗಳ, ಸಂಘರ್ಷಗಳ ನಡುವೆ ಒಂದಂತೂ ಸತ್ಯ- “ತೃಣಮಪಿ ನಚಲತಿ ತೇನವಿನಾ..’. ಅವನಿಲ್ಲದೆ ಹುಲ್ಲುಕಡ್ಡಿಯೂ ಅಲುಗಲಾರದು!

ಎಲ್ಲರಿಗಾಗಿ ಆನಂದ


ಹುತಾತ್ಮ ಯೋಧನ ಮಡದಿಯಾಗಿ, ಒಂಟಿ ಮಹಿಳೆಯಾಗಿ, ಒಂಟಿ ತಾಯಿಯಾಗಿ ನಾನು ಕಲಿತ ಪಾಠಗಳು ಅನೇಕ. ಪರಿಸ್ಥಿತಿ ಕಲಿಸಿದ ಪಾಠಗಳನ್ನು ನನ್ನೊಳಗೇ ಇಟ್ಟುಕೊಂಡರೆ? ಆ ಅನುಭವದಿಂದ ಇತರರಿಗೂ ಸಹಾಯವಾಗುವುದಾದರೆ, ಅದರಿಂದ ಸಂತೋಷದಿಂದ ಯಾಕೆ ವಂಚಿತಳಾಗಬೇಕು ಎಂದು, “ಆನಂದ ಯೋಗಾ ಸೆಂಟರ್‌’ ಪ್ರಾರಂಭಿಸಿದೆ. ಆ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ. ಸಹೃದಯಿ ಮಿತ್ರರೂ ಇದರಲ್ಲಿ ಕೈ ಜೋಡಿಸಿದರು. ಈಗ ನಮ್ಮ ಯೋಗಾ ಸೆಂಟರ್‌, ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ವಿಕಸನಗಳ ಕೇಂದ್ರವಾಗಿ ಬೆಳೆಯುತ್ತಿದೆ ಎಂಬ ತೃಪ್ತಿ ನನಗಿದೆ.

ಪೆಟ್ರೋಲ್‌ ಬಂಕ್‌ ತೆರೆದೆ…


ಇತ್ತ ಲೌಕಿಕ ಪ್ರಪಂಚದಲ್ಲಿಯೂ ಬದುಕು ನಡೆಸಲು ಹೋರಾಟ ನಡೆಸಬೇಕಾದ ಅನಿವಾರ್ಯವನ್ನು ಕಡೆಗಣಿಸುವಂತಿರಲಿಲ್ಲ. ಸರ್ಕಾರದ ನೆರವು ಪಡೆದು ಒಂದು ಪೆಟ್ರೋಲ್‌ ಬಂಕ್‌ ಪ್ರಾರಂಭಿಸಿದೆ. ಸಮಾಜದಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದರ ಪರಿಚಯವಾಗಿದ್ದು ಆಗಲೇ. ಹೆಜ್ಜೆ ಹೆಜ್ಜೆಗೂ ಎಡರು ತೊಡರುಗಳು ಹುಟ್ಟಿಕೊಳ್ಳುತ್ತಾ ಹೋದವು. ಕೊನೆಗೂ ಒಂದು ದಿನ ಬೆಳಗಾವಿಯ ಹೊರವಲಯದಲ್ಲಿ, “ವಿಜಯ ಭಾರತಿ ಆಟೋಮೊಬೈಲ್‌ ಸೇವಾಕೇಂದ್ರ’ದ ಉದ್ಘಾಟನೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next