ಗದಗ: 1999ರಲ್ಲಿ ಕಾರ್ಗಿಲ್ ಹಿಮ ಶಿಖರದಲ್ಲಿ ಇಂಡೋ-ಪಾಕ್ ನಡುವೆ ನಡೆದ ಕಾಳಗದಲ್ಲಿ ಭಾರತ ಜಯಭೇರಿ ಬಾರಿಸಿತು. ಕಾರ್ಗಿಲ್ ವಿಜಯದಲ್ಲಿ ಗದಗಿನ ಹೆಜ್ಜೆ ಗುರುತುಗಳು ಅಚ್ಚೊತ್ತಿವೆ. ತಾಲೂಕಿನ ಲಕ್ಕುಂಡಿಯ ನಿವೃತ್ತ ನಾಯಕ್ ದತ್ತಾತ್ರೇಯ ಜೋಶಿ ಕಾರ್ಗಿಲ್ ಯುದ್ಧದಲ್ಲಿನ ತಮ್ಮ ಅನುಭವಗಳ ನೆನಪಿನ ಬುತ್ತಿಯನ್ನು ‘ಉದಯವಾಣಿ’ ಎದುರು ಬಿಚ್ಚಿಟ್ಟಿದ್ದಾರೆ.
ಕಾರ್ಗಿಲ್ ಯುದ್ಧ ಆರಂಭಗೊಂಡಾಗ ನಾನು ಕಮ್ಯೂನಿಕೇಷನ್ ರೆಜಿಮೆಂಟ್‌ನ 51 ಡಿವಿಜನ್ ಸಿಕಿಂದ್ರಾಬಾದ್‌ನಲ್ಲಿದ್ದೆ. ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆಗೆ ನಮ್ಮ ತಂಡ ಸಾಗಿತ್ತು. ಪ್ರಯಾಣದ ಮಧ್ಯೆ ನನಗೆ ಅನಿರೀಕ್ಷಿತವಾಗಿ ಮತ್ತೂಂದು ಆದೇಶ ಬಂತು. ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿರುವ 18ನೇ ವೈರ್‌ಲೆಸ್ ರೆಜಿಮೆಂಟ್‌ಗೆ ಬೆಂಬಲಿಸಲು ತೆರಳುವಂತೆ ಆದೇಶಿಸಲಾಯಿತು.
ನಾನು ಕಾರ್ಗಿಲ್ ವಲಯಕ್ಕೆ ತಲುಪುವ ಹೊತ್ತಿಗೆ ಯುದ್ಧ ಕೊನೆ ಹಂತದತ್ತ ಸಾಗಿತ್ತು. ಆದರೂ ನಮ್ಮ ಹಾಗೂ ಶತ್ರು ರಾಷ್ಟ್ರಗಳ ವೈರ್‌ಲೆಸ್ ಸಂವಹನದ ಮೇಲೆ ನಿಗಾ ಇರಿಸುವುದು ಮಹತ್ವದ ಕೆಲಸವಾಗಿತ್ತು. ನಾನು ಅಲ್ಲಿದ್ದ 8 ದಿನಗಳೂ ಒಮ್ಮೊಮ್ಮೆ ಮನದಲ್ಲಿ ಭಯ, ದೇಶ ಭಕ್ತಿ, ಶೌರ್ಯ ಮೆರೆಯುವ ಎದೆಗಾರಿಕೆಯೂ ಒಟ್ಟೊಟ್ಟಿಗೆ ಕಾಡುತಿದ್ದವು.
ನಾವೇ ಟಾರ್ಗೆಟ್ ಆಗಿದ್ದೆವು: ಎಂದಿನಂತೆ ಕಿವಿಗೆ ವೈರ್‌ಲೆಸ್ ಉಪಕರಣ ಅಂಟಿಸಿಕೊಂಡಿದ್ದ ನನಗೆ ಪಾಕಿಸ್ತಾನ ಭಾಗದ ಯಾವುದೋ ಫ್ರಿಕೆನ್ಸಿ ಕನೆಕ್ಟ್ ಆಗಿತ್ತು. ಅದರಲ್ಲಿ ಕಾರ್ಗಿಲ್ ದಾಳಿ ಕುರಿತು ಕೋಡೆಡ್ ಮಾತುಗಳು ಕೇಳಿ ಬಂದವು. ತಕ್ಷಣ ಅನುಮಾನದಿಂದ ರೆಕಾರ್ಡ್ ಹಾಕಿ ಮೇಲಧಿಕಾರಿಗಳಿಗೆ ರವಾನಿಸಿದೆ. ಅದನ್ನು ಡಿಕೋಡಿಂಗ್ ಮಾಡಿ, ವಿರೋಧಿಗಳು ನಾವಿರುವ ತಾಣದ ಮೇಲೆ ದಾಳಿಗೆ ಸಂಚು ರೂಪಿಸಿದ್ದನ್ನು ಪತ್ತೆ ಮಾಡಿ ಅದನ್ನು ವಿಫಲಗೊಳಿಸಲಾತು. ಅದಕ್ಕೆ ನಾನೇ ಟ್ಯಾಪ್ ಮಾಡಿದ್ದ ಕಾಲ್ ರೆಕಾರ್ಡ್ ಕಾರಣ ಎಂಬ ಮಾತಿನಿಂದ ಕ್ಷಣಕಾಲ ಮೂಕವಿಸ್ಮಿತನಾಗಿದ್ದೆ. ಆನಂತರ ದಿನದಿಂದ ದಿನಕ್ಕೆ ಭಾರತದ ಗೆಲುವಿನ ದಿನಗಳು ಹತ್ತಿರವಾಗಿ, ನಮ್ಮ ರೆಜಿಮೆಂಟ್‌ಗೆ ವಾಪಸ್ ಕಳುಹಿಸಲಾಯಿತು. ಇದು ನನ್ನ ಸೇನಾ ಬದುಕಿನ ಅತ್ಯಂತ ಮಹತ್ವದ ದಿನಗಳು ಎನ್ನುತ್ತಾರೆ ದತ್ತಾತ್ರೇಯ ಜೋಶಿ.
•ವೀರೇಂದ್ರ ನಾಗಲದಿನ್ನಿ