Advertisement

ರಾಂಗ್ ಸೈಡ್ ನಿಂದ ಬಂದ ಬಸ್ಸನ್ನೆ ತಡೆದ ದಿಟ್ಟ ಮಹಿಳೆ : ವಿಡಿಯೋ ವೈರಲ್!

10:37 AM Sep 27, 2019 | Hari Prasad |

ತಿರುವನಂತಪುರಂ: ರಸ್ತೆಯಲ್ಲಿ ನೀವು ನಿಮ್ಮ ವಾಹನವನ್ನು ಚಲಾಯಿಸುವಾಗ ನಿಮಗೆ ಚಿತ್ರ ವಿಚಿತ್ರ ಪರಿಸ್ಥಿತಿಗಳೆಲ್ಲಾ ಎದುರಾಗಬಹುದು. ನೀವು ಸರಿಯಾದ ರೀತಿಯಲ್ಲೇ ನಿಮ್ಮ ವಾಹನ ಚಲಾಯಿಸುತ್ತಿದ್ದರೂ ಬೇರೆಯವರ ತಪ್ಪುಗಳು ನಿಮ್ಮನ್ನು ಅಪಘಾತದಂತಹ ತೊಂದರೆಗೆ ಸಿಲುಕಿಸುವ ಸಾಧ್ಯತೆಗಳೂ ಇರುತ್ತವೆ. ಆದರೆ ಕೆಲವರು ರಸ್ತೆಯಲ್ಲಿ ಬೇರೆ ವಾಹನಗಳಿಂದ ತಮಗೆ ಎದುರಾಗುವ ತೊಂದರೆಗಳಿಗೆ ಸ್ಥಳದಲ್ಲಿಯೇ ಪ್ರತಿಕ್ರಿಯೆ ನೀಡುತ್ತಾರೆ, ಅಥವಾ ತಮ್ಮದೇ ತಪ್ಪಿದ್ದರೂ ರಸ್ತೆಯಲ್ಲೇ ಜಗಳಕ್ಕೆ ನಿಂತುಬಿಡುತ್ತಾರೆ. ಇವೆಲ್ಲಾ ಕೆಲವೊಮ್ಮೆ ಹೊಡೆದಾಟದ ಮಟ್ಟದಲ್ಲಿ ಕೊನೆಗೊಳ್ಳುವುದನ್ನೂ ನಾವು ನೋಡಿದ್ದೇವೆ. ಮತ್ತು ಇಂತಹ ಪ್ರಕರಣಗಳು ಹೆಚ್ಚಾಗಿ ಪುರುಷ ವಾಹನ ಸವಾರರ ನಡುವೆ ನಡೆಯುತ್ತಿರುತ್ತದೆ.

Advertisement

ಆದರೆ ಕೇರಳದಲ್ಲಿ ನಡೆದಿರುವ ಘಟನೆಯೊಂದು ಇದಕ್ಕೆಲ್ಲಾ ವ್ಯತಿರಿಕ್ತವಾಗಿದೆ. ತನ್ನ ಎದುರಿಗೆ ಸರಕಾರಿ ಬಸ್ಸೊಂದು ರಾಂಗ್ ಸೈಡ್ ನಿಂದ ಬರುತ್ತಿದ್ದರೂ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಭಯಪಡದೆ ತನ್ನ ಪಥವನ್ನು ಬಿಡದೇ ಆ ಬಸ್ಸನ್ನೇ ಸರಿಯಾದ ಪಥಕ್ಕೆ ತಿರುಗಿಸಿದ ಘಟನೆಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮತ್ತು ಈ ಮಹಿಳೆಯ ಗಟ್ಟಿಗಿತ್ತಿತನಕ್ಕೆ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.


ಮಹಿಳೆಯೊಬ್ಬರು ಸ್ಕೂಟಿಯಲ್ಲಿ ಎಡಬದಿಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ರಾಂಗ್ ಸೈಡ್ ಮೂಲಕ ಬರುತ್ತಿರುತ್ತದೆ. ಆ ಬಸ್ಸು ತನ್ನ ಹತ್ತಿರಕ್ಕೆ ಬರುತ್ತಿರುವುದನ್ನು ಗಮನಿಸಿದ ಆ ಮಹಿಳೆ ತನ್ನ ಸ್ಕೂಟಿಯಲ್ಲಿ ನಿಂತ ಜಾಗದಲ್ಲೇ ನಿಂತು ಬಿಡುತ್ತಾರೆ. ಕೊನೆಗೆ ಬಸ್ಸು ಚಾಲಕನೇ ತನ್ನ ಎಡಬದಿಗೆ ಬಸ್ಸನ್ನು ಚಲಾಯಿಸಿಕೊಂಡು ಸರಿಯಾದ ರೀತಿಯಲ್ಲಿ ಮುಂದೆ ಹೋಗುತ್ತಾನೆ.

ರಾಂಗ್ ಸೈಡಿನಿಂದ ಬಸ್ಸನ್ನು ಚಲಾಯಿಸಿಕೊಂಡು ಮಹಿಳೆಯ ಸ್ಕೂಟಿಗೆ ತೀರಾ ಹತ್ತಿರ ಬಂದಿದ್ದ ಬಸ್ ಚಾಲಕ, ಈ ಮಹಿಳೆ ಬದಿಗೆ ಸರಿಯುವ ಮೂಲಕ ತನ್ನ ಬಸ್ಸಿಗೆ ದಾರಿ ಬಿಡಬಹುದೆಂದು ಅಂದುಕೊಂಡಿದ್ದ. ಆದರೆ ಮಹಿಳೆ ತಾನಿದ್ದ ರಸ್ತೆಯ ಬದಿಯಿಂದ ಒಂದಿಂಚೂ ಕದಲದೇ ಇದ್ದಾಗ ವಿಧಿಯಿಲ್ಲದೇ ಬಸ್ಸಿನ ಚಾಲಕ ತನ್ನ ಬಸ್ಸನ್ನು ಕಷ್ಟಪಟ್ಟು ಎಡಗಡೆಗೆ ತಿರುಗುಸುಕೊಂಡು ಮುಂದಕ್ಕೆ ಸಾಗುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ.

ತನ್ನೆದುರಿಗೆ ಅಷ್ಟು ದೊಡ್ಡ ಬಸ್ಸು ನಿಂತಿದ್ದರೂ ಅಳುಕದೇ ದೃಢವಾಗಿ ನಿಂತು ಆ ಬಸ್ಸು ಚಾಲಕನ ತಪ್ಪನ್ನು ತನ್ನ ಮೌನ ಪ್ರತಿಭಟನೆಯ ಮೂಲಕವೇ ಆತನಿಗೆ ಮನವರಿಕೆ ಮಾಡಿಕೊಟ್ಟ ಮಹಿಳೆಯ ದಿಟ್ಟತನಕ್ಕೆ ಇದೀಗ ನೆಟ್ಟಿಗರು ‘ಕುಡೋಸ್’ ಅನ್ನುತ್ತಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next