ಹೆತ್ತವರ ಕಷ್ಟಕ್ಕೆ ಹೆಣ್ಣುಮಕ್ಕಳು ಬೇಗ ಕರಗುತ್ತಾರೆ. ಅಪ್ಪ-ಅಮ್ಮನನ್ನು ಮಗನಿಗಿಂತ, ಮಗಳೇ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎನ್ನುವುದು ನೂರಕ್ಕೆ ನೂರು ಸತ್ಯ. ಈ ಮಾತಿಗೆ ಉದಾಹರಣೆಯಾದವರು ಕೋಲ್ಕತ್ತಾದ ರಾಖಿ ದತ್ತ ಮತ್ತು ರೂಬಿ ದತ್ತ. ಅವರ ತಂದೆ ಸುದೀಪ್ ದತ್, ಕೆಲ ತಿಂಗಳುಗಳ ಹಿಂದೆ ಹೆಪಟೈಟಿಸ್ ಬಿ ಸಮಸ್ಯೆಯಿಂದ ಬಳಲುತ್ತಿದ್ದರು. 20 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಈ ಹುಡುಗಿಯರೇ. ಆದರೂ, ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸಲಿಲ್ಲ. ಕೊನೆಗೆ ಅಪ್ಪನನ್ನು ದೂರದ ಹೈದರಾಬಾದ್‌ಗೆ ಚಿಕಿತ್ಸೆಗೆಂದು ಕರೆತಂದರು. ವೈದ್ಯರು ಲಿವರ್ (ಯಕೃತ್) ಮರುಜೋಡಣೆ ಮಾಡದಿದ್ದರೆ ಪ್ರಾಣಕ್ಕೆ ಅಪಾಯವಿದೆ ಅಂದಾಗ, ತಂದೆಗೆ ಲಿವರ್ ದಾನ ಮಾಡಲು ಮುಂದೆ ಬಂದವಳು ಹಿರಿ ಮಗಳು ರೂಬಿ. ಆದರೆ, ಆಕೆಯ ಯಕೃತ್, ತಂದೆಗೆ ಮ್ಯಾಚ್ ಆಗಲಿಲ್ಲ. ಆಗ, ಎರಡನೇ ಮಗಳು ರಾಖಿಯ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಶೇ.65ರಷ್ಟು ಭಾಗವನ್ನು ಈಕೆ ದಾನ ಮಾಡಬಹುದು ಅಂದರು. ಹೀಗೆ ಲಿವರ್ ದಾನ ಮಾಡಿದರೆ, ಶಸ್ತ್ರಚಿಕಿತ್ಸೆಯಿಂದಾಗಿ ಚರ್ಮ ಸುಕ್ಕಾದಂತೆ ಕಾಣುತ್ತದೆ. ಅದೇ ಕಾರಣದಿಂದ ಸೌಂದರ್ಯವೂ ಕಳೆಗುಂದಬಹುದು. ಇವೆಲ್ಲಾ ಗೊತ್ತಾದ ಮೇಲೂ, ಹಿಂದೆ-ಮುಂದೆ ಯೋಚಿಸದೆ ಒಪ್ಪಿಕೊಂಡ ರಾಖಿ, ಅಂಗದಾನ ಮಾಡಿ ಅಪ್ಪನನ್ನು ಉಳಿಸಿದಳು. ಗಂಡು ಮಕ್ಕಳಿದ್ದಿದ್ದರೂ ಅವರು ಅಂಗದಾನಕ್ಕೆ ಮುಂದಾಗುತ್ತಿದ್ದರೋ, ಇಲ್ಲವೋ!
25 ವರ್ಷದ ರೂಬಿ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, 19 ವರ್ಷದ ರಾಖಿ ಸಿನಿಮಾಟೊಗ್ರಾಫರ್ ಆಗುವ ಗುರಿ ಹೊಂದಿದ್ದಾಳೆ. ಇವರಿಬ್ಬರೂ, ನಾಲ್ಕು ತಿಂಗಳು ಹೈದರಾಬಾದ್‌ನಲ್ಲಿಯೇ ಉಳಿದು ಅಪ್ಪನನ್ನು ಆರೈಕೆ ಮಾಡಿದ್ದು ನಿಜಕ್ಕೂ ಹೆಮ್ಮೆ ಪಡುವ ವಿಷಯ.