ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಲೀಗ್. ಇಲ್ಲಿ ಕೋಟ್ಯಾಂತರ ರೂ ಗಳಲ್ಲಿ ವಹಿವಾಟು ನಡೆಯುತ್ತದೆ. ಭಾರಿ ಖರ್ಚು ಮಾಡಿ ಆಟಗಾರರನ್ನು ಖರೀದಿಸುವ ತಂಡಗಳೂ ಇಲ್ಲಿ ಹಲವು ರೀತಿಯ ಆದಾಯ ಪಡೆಯುತ್ತವೆ. ತಂಡದ ಪ್ರದರ್ಶನ ಹೆಚ್ಚಿದಂತೆ ಫ್ರಾಂಚೈಸಿಗೆ ಬರುವ ಪ್ರಾಯೋಜತ್ವದ ಬೆಲೆಯೂ ಹೆಚ್ಚುತ್ತದೆ. ಹಾಗಾದರೆ ಯಾವ ತಂಡವು ಹೆಚ್ಚಿನ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ? ಇಲ್ಲಿ ನೋಡೋಣ.
ಹೌಲಿಹಾನ್ ಲೋಕಿ ವರದಿಯ ಪ್ರಕಾರ, ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2023ರ ಐಪಿಎಲ್ ನಲ್ಲಿ ಹೆಚ್ಚಿನ ಬ್ರ್ಯಾಂಡ್ ವಾಲ್ಯೂ ಹೊಂದಿದೆ. ಸಿಎಸ್ ಕೆ ತಂಡವು 212 ಯುಎಸ್ ಮಿಲಿಯನ್ ಡಾಲರ್ ಬ್ರ್ಯಾಂಡ್ ವಾಲ್ಯೂ ಹೊಂದಿದ್ದು, ಎರಡನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಆರ್ ಸಿಬಿಯ ಬ್ರ್ಯಾಂಡ್ ವಾಲ್ಯೂ 195 ಯುಎಸ್ ಮಿಲಿಯನ್ ಡಾಲರ್.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು 146 ಮಿಲಿಯನ್ ಡಾಲರ್ ನಿಂದ 212 ಮಿಲಿಯನ್ ಡಾಲರ್ ಗೆ ಏರಿಕೆ ಕಂಡಿದೆ. ಅಂದರೆ ಸಿಎಸ್ ಕೆ ಬ್ರ್ಯಾಂಡ್ ವಾಲ್ಯೂನಲ್ಲಿ ಶೇ 42 ರಷ್ಟು ಹೆಚ್ಚಾಗಿದೆ. ವಿರಾಟ್ ಕೊಹ್ಲಿ ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್ ವಾಲ್ಯೂ ಶೇ 52.3 ಹೆಚ್ಚಳ ಕಂಡಿದ್ದು, 128 ಮಿಲಿಯನ್ ಡಾಲರ್ ನಿಂದ 195 ಮಿಲಿಯನ್ ಡಾಲರ್ ತಲುಪಿದೆ.
ಆರ್ ಸಿಬಿ ಐಪಿಎಲ್ ನಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ, ಅದರ ಭಾವೋದ್ರಿಕ್ತ ಅಭಿಮಾನಿ ಬಳಗ ತಂಡದ ಗುರುತಿಗೆ ಹೆಸರುವಾಸಿಯಾಗಿದೆ. ಸಿಎಸ್ ಕೆ ಜೊತೆಗೆ ಆರ್ ಸಿಬಿ ಪ್ಯಾನ್-ಇಂಡಿಯಾದಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಜನಪ್ರಿಯವಾಗಿದೆ. ಬಹುಶಃ ಈ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಉಪಸ್ಥಿತಿಯು ಆರ್ ಸಿಬಿ ಗೆ ವಿಶಿಷ್ಟವಾದ ಸೆಳವು ನೀಡುತ್ತದೆ. ಭಾವನಾತ್ಮಕ ಮಟ್ಟದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಆರ್ ಸಿಬಿ ಸಾಮರ್ಥ್ಯ ಮತ್ತು ಬಲವಾದ ಬ್ರಾಂಡ್ ಅನ್ನು ನಿರ್ಮಿಸಲು ಅದರ ನಿರಂತರ ಪ್ರಯತ್ನಗಳು ಅದರ ನಿರಂತರ ಜನಪ್ರಿಯತೆಗೆ ಕಾರಣವಾಗಿವೆ, ಇದು ಪ್ರೀಮಿಯಂ ಬೆಲೆಯಲ್ಲಿ ತಂಡಕ್ಕೆ ಮಾರ್ಕ್ಯೂ ಪ್ರಾಯೋಜಕರನ್ನು ತರಲು ಸಹಾಯ ಮಾಡಿದೆ. ಇತ್ತೀಚಿನ ಬಹು-ವರ್ಷದ ಕತಾರ್ ಏರ್‌ವೇಸ್ ಪ್ರಾಯೋಜಕತ್ವ ಒಪ್ಪಂದವು ಈ ಸತ್ಯಕ್ಕೆ ಸಾಕ್ಷಿಯಾಗಿದೆ” ಎಂದು ಬೆಂಗಳೂರು ಫ್ರಾಂಚೈಸಿಯನ್ನು ಉಲ್ಲೇಖಿಸಿ ವರದಿ ಹೇಳಿದೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಶೇ 34.8 ಹೆಚ್ಚಳವಾಗಿದೆ. 141 ಮಿಲಿಯನ್ ಡಾಲರ್ ನಲ್ಲಿದ್ದ ಮುಂಬೈ ಬ್ರ್ಯಾಂಡ್ ವಾಲ್ಯೂ ಇದೀಗ 190 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಹತ್ತು ಫ್ರಾಂಚೈಸಿಗಳ ಬ್ರ್ಯಾಂಡ್ ವಾಲ್ಯೂ (ಮಿಲಿಯನ್ ಯುಎಸ್ ಡಾಲರ್)
ಸಿಎಸ್ ಕೆ: 212
ಆರ್ ಸಿಬಿ: 195
ಮುಂಬೈ: 190
ಕೆಕೆಆರ್: 181
ಡಿಸಿ: 133
ಎಸ್ ಆರ್ ಎಚ್: 128
ಆರ್ ಆರ್: 120
ಜಿಟಿ: 120
ಪಂಜಾಬ್: 90
ಲಕ್ನೋ: 83