Advertisement

ಬ್ರಾಂಡ್‌ ಬೇಳೆಕಾಳು ವಹಿವಾಟು ಸದ್ದಿಲ್ಲದೇ ಸ್ಥಗಿತ

06:00 AM Dec 21, 2017 | Team Udayavani |

ಬೆಂಗಳೂರು: ಜಿಎಸ್‌ಟಿಯಡಿ ಬ್ರಾಂಡೆಡ್‌ ಆಹಾರಧಾನ್ಯಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.90ರಷ್ಟು (ಸುಮಾರು 5,400) ಬ್ರಾಂಡ್‌ನ‌ ಆಹಾರಧಾನ್ಯ, ಬೇಳೆಕಾಳು ವಹಿವಾಟು ಸದ್ದಿಲ್ಲದೇ ಸ್ಥಗಿತಗೊಂಡಿದೆ!

Advertisement

ಇನ್ನೊಂದೆಡೆ ಬ್ರಾಂಡ್‌ ಆಹಾರಧಾನ್ಯವನ್ನೇ ಬ್ರಾಂಡ್‌ರಹಿತವಾಗಿ ಮಾರಾಟ ಮಾಡುವುದು ಹೆಚ್ಚಾಗಿದೆ. ನವೆಂಬರ್‌ನಿಂದ ಒಂದೇ ಹೆಸರು, ಸಂಕೇತದಡಿ ಎರಡು, ಮೂರು ಕಂಪನಿಗಳ ಆಹಾರಧಾನ್ಯ ಮಾರುಕಟ್ಟೆ ಪ್ರವೇಶಿಸಿದೆ. ಇದರಿಂದ ಗೊಂದಲ ಸೃಷ್ಟಿಯಾಗಿದ್ದು, ಗುಣಮಟ್ಟದ ಆಹಾರಧಾನ್ಯ ಆಯ್ಕೆಗೆ ಜನ ಪರದಾಡುವಂತಾಗಿದೆ. ಜಿಎಸ್‌ಟಿಯಡಿ ತೆರಿಗೆ ವಿಧಿಸುವುದನ್ನು ತಪ್ಪಿಸಲು ಬಹಳಷ್ಟು ಸಗಟುದಾರರು, ತಯಾರಕರು ವಾಮಮಾರ್ಗ ಹಿಡಿದಿದ್ದು, ಸರ್ಕಾರದ ಬೊಕ್ಕಸಕ್ಕೂ ತೆರಿಗೆ ಆದಾಯ ಸೋರಿಕೆಯಾಗುತ್ತಿದೆ.

ಜನಸಾಮಾನ್ಯರು ದಿನನಿತ್ಯ ಬಳಸುವ ಆಹಾರಧಾನ್ಯ, ಬೇಳೆಕಾಳುಗಳಿಗೆ ಮೊದಲಿನಿಂದಲೂ ತೆರಿಗೆ ವಿನಾಯ್ತಿ ಇದೆ. ಆದರೆ ಜಿಎಸ್‌ಟಿ ಜಾರಿಯಾದ ಜುಲೈ 1ರಿಂದ ಬ್ರಾಂಡೆಡ್‌ ಆಹಾರಧಾನ್ಯಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಯಿತು. ಇದರಿಂದ ಬಹಳಷ್ಟು ಮಂದಿ ಬ್ರಾಂಡ್‌ ನೋಂದಣಿ ರದ್ಧತಿಗೆ ಮುಂದಾದರು. ಇದನ್ನು ತಪ್ಪಿಸಲು ಅ.22ರ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ 2017ರ ಮೇ 15ರವರೆಗೆ ಬ್ರಾಂಡ್‌ ನೋಂದಣಿಯಾದ ಆಹಾರ ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಯಿತು. ಆದರೆ ತಮ್ಮದೇ ವಿಶಿಷ್ಟ ಹೆಸರು, ಸಂಕೇತವಿದ್ದರೂ ಅದನ್ನು ಇತರರು ಬಳಸಿಕೊಂಡರೆ ಅದರ ವಿರುದ್ಧ ಕ್ರಮ ಜರುಗಿಸುವಂತೆ (ಆ್ಯಕ್ಷನೆಬಲ್‌ ಕ್ಲೇಮ್‌) ವಿಶಿಷ್ಟತೆಯನ್ನು ಪ್ರತಿಪಾದಿಸದಿದ್ದರೆ ತೆರಿಗೆ ಪಾವತಿಸುವಂತಿಲ್ಲ. ಇದರಿಂದ ಒಂದೇ ಹೆಸರು, ಸಂಕೇತದ‌ ಆಹಾರಧಾನ್ಯಗಳ ಸಂಖ್ಯೆ ಹೆಚ್ಚಾಗಿದೆ.

ಶೇ.90 ಬ್ರಾಂಡ್‌ ಸ್ಥಗಿತ
ತಮ್ಮ ಉತ್ಪನ್ನ ಹೆಚ್ಚು ಗುಣಮಟ್ಟದ್ದು, ವಿಶಿಷ್ಟವಾದುದು ಎಂದು ಘೋಷಿಸಿಕೊಳ್ಳುವವರು ಕೇಂದ್ರ ವಾಣಿಜ್ಯ ಇಲಾಖೆಯ ಟ್ರೇಡ್‌ಮಾರ್ಕ್‌ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಸುಮಾರು 6000 ಬ್ರಾಂಡಿನ ಆಹಾರಧಾನ್ಯಗಳಲ್ಲಿ ಶೇ.90ರಷ್ಟು ಬ್ರಾಂಡ್‌ನ‌ ಆಹಾರಧಾನ್ಯಗಳ ವಹಿವಾಟು ಜಿಎಸ್‌ಟಿ ಜಾರಿ ಬಳಿಕ ಸ್ಥಗಿತವಾಗಿವೆ. ಬ್ರಾಂಡ್‌ ಮುಂದುವರಿಸಿದರೆ ಶೇ.5ರಷ್ಟು ತೆರಿಗೆ ಪಾವತಿಸಬೇಕಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಆಹಾರಧಾನ್ಯ ಲಭ್ಯವಿದ್ದಾಗ ಬ್ರಾಂಡೆಡ್‌ ಧಾನ್ಯಕ್ಕೆ ಬೇಡಿಕೆ ಕಡಿಮೆ ಎಂಬುದು ಮಾರಾಟಗಾರರ ಅಳಲು. ಇದರಿಂದ ಶೇ.90ರಷ್ಟು ಬ್ರಾಂಡ್‌ಗಳ ವಹಿವಾಟು ಸ್ಥಗಿತವಾಗಿದೆ.

ವಾಮಮಾರ್ಗದಲ್ಲಿ ಮಾರಾಟ
ಜಿಎಸ್‌ಟಿ ತೆರಿಗೆ ತಪ್ಪಿಸಿಕೊಳ್ಳಲು ಬ್ರಾಂಡ್‌ನ‌ಡಿ ಆಹಾರಧಾನ್ಯ ಮಾರಾಟ ಬಹುತೇಕ ಸ್ಥಗಿತಗೊಂಡಿದೆ. ಆದರೆ ಅದೇ ಆಹಾರಧಾನ್ಯವನ್ನು ಬ್ರಾಂಡ್‌ ಇಲ್ಲದೇ ಬೇರೆ ಹೆಸರು, ಸಂಕೇತದಡಿ ಮಾರಲಾಗುತ್ತಿದೆ. ಶೇ.5ರಷ್ಟು ತೆರಿಗೆ ಪಾವತಿಸುವವರಿಗೆ ಬ್ರಾಂಡೆಡ್‌ ಹಾಗೂ ತೆರಿಗೆ ಪಾವತಿಸಲು ಸಿದ್ಧರಿಲ್ಲದವರಿಗೆ ಅದೇ ಆಹಾರಧಾನ್ಯವನ್ನು ಬ್ರಾಂಡ್‌ರಹಿತವಾಗಿ ನೀಡಲಾಗುತ್ತಿದೆ. ಕೆಲವರು ಬ್ರಾಂಡೆಡ್‌ ಪದಾರ್ಥ ಮಾರಿದರೂ ರಸೀದಿಯಲ್ಲಿ ಬ್ರಾಂಡ್‌ ನಮೂದಿಸದೇ  ತೆರಿಗೆ ತಪ್ಪಿಸಿಕೊಳ್ಳುವ ಜತೆಗೆ ತಮ್ಮ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ತೆರಿಗೆ ಆದಾಯ ಸೋರಿಕೆಯಾಗುತ್ತಿದೆ.

Advertisement

ಸದ್ಯದ ಸ್ಥಿತಿ
ಮಾರುಕಟ್ಟೆಯಲ್ಲಿನ ಸದ್ಯದ ಸ್ಥಿತಿಯನ್ನು ಉದಾಹರಣೆ ಮೂಲಕ ತಿಳಿಸುವ ಪ್ರಯತ್ನ ಇಲ್ಲಿದೆ. “ರಾಜ’ ಬ್ರಾಂಡಿನ ಆಹಾರಧಾನ್ಯದ ಬೆಲೆ ಒಂದು ಕೆ.ಜಿ.ಗೆ 50 ರೂ. ಇದೆ ಎಂದು ಭಾವಿಸೋಣ. ಬ್ರಾಂಡ್‌ ನೋಂದಣಿ ಹಿನ್ನೆಲೆಯಲ್ಲಿ ಶೇ.5ರಷ್ಟು ತೆರಿಗೆ ಪಾವತಿಸಬೇಕಿದ್ದು, ಬೆಲೆ 52.50 ರೂ.ಗೆ ಏರಿಕೆಯಾಗಲಿದೆ. “ರಾಜ’ ಬ್ರಾಂಡ್‌ ಬಳಸದೇ ಬೇರೆ ಹೆಸರು, ಸಂಕೇತದಲ್ಲೇ ಅದೇ ಧಾನ್ಯ ಮಾರಿದರೆ ತೆರಿಗೆ ಪಾವತಿಸಬೇಕಾದ ಅಗತ್ಯವಿಲ್ಲ. ಇದರಿಂದಾಗಿ ಬ್ರಾಂಡ್‌ ನಮೂದಿಸದೆ ಮಾರಾಟ ಮಾಡುವುದು ಹೆಚ್ಚಾಗಿದೆ. ಬ್ರಾಂಡ್‌ ನೋಂದಣಿಯಾಗದ ಕಾರಣ ಇತರೆ ಕಂಪನಿಗಳು ಅದೇ ಹೆಸರು, ಸಂಕೇತ ಬಳಸಿ ಕಡಿಮೆ ಬೆಲೆಯಲ್ಲಿ ಮಾರಿದರೂ ಪ್ರಶ್ನಿಸುವಂತಿಲ್ಲ. ಇದರಿಂದಾಗಿ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಗುಣಮಟ್ಟದಲ್ಲಿ ಲೋಪವಿದ್ದರೂ ಪ್ರಶ್ನಿಸುವ, ಆಕ್ಷೇಪಿಸುವ ಅವಕಾಶವಿಲ್ಲದ ಕಾರಣ ಅಸ್ಪಷ್ಟತೆ ಮೂಡಿದೆ.

ಟ್ರೇಡ್‌ಮಾರ್ಕ್‌ ಕೇಳುವವರೇ ಇಲ್ಲ!
ದಕ್ಷಿಣ ಭಾರತ ರಾಜ್ಯಗಳಿಂದ ಈ ಹಿಂದೆ ಆಹಾರಧಾನ್ಯಕ್ಕೆ ಟ್ರೇಡ್‌ಮಾರ್ಕ್‌ ನೋಂದಣಿ ಕೋರಿ ನಿತ್ಯ ಆರೇಳು ಅರ್ಜಿ ಸಲ್ಲಿಕೆಯಾಗುತ್ತಿತ್ತು. ಆದರೆ ಜಿಎಸ್‌ಟಿ ಅನುಷ್ಠಾನದ ನಂತರ ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ಪ್ರತಿ 10 ವರ್ಷಕ್ಕೊಮ್ಮೆ ಬ್ರಾಂಡ್‌ ನೋಂದಣಿ ನವೀಕರಿಸಬೇಕಿದ್ದು, ನಾಲ್ಕೈದು ತಿಂಗಳಿನಿಂದ ನವೀಕರಣ ಪ್ರಸ್ತಾವ ಸಲ್ಲಿಕೆಯೂ ಕ್ಷೀಣಿಸಿದೆ. ಬ್ರಾಂಡ್‌ ನೋಂದಣಿ ರದ್ಧತಿಗೂ ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 6000 ಬ್ರಾಂಡ್‌ನ‌ ಆಹಾರಧಾನ್ಯವಿದ್ದು, ಇದರಲ್ಲಿ 5,400ಕ್ಕೂ ಹೆಚ್ಚು ಬ್ರಾಂಡ್‌ನ‌ ವಹಿವಾಟು ಸ್ಥಗಿತವಾಗಿದೆ ಎಂದು ಚೆನ್ನೈನಲ್ಲಿರುವ ಟ್ರೇಡ್‌ಮಾರ್ಕ್‌ ನೋಂದಣಿ ಕಚೇರಿ ಮೂಲಗಳು ತಿಳಿಸಿವೆ.

ಜನಸಾಮಾನ್ಯರು ನಿತ್ಯ ಬಳಸುವ ಆಹಾರಧಾನ್ಯಗಳಿಗೂ ಬ್ರಾಂಡ್‌/ ಬ್ರಾಂಡ್‌ರಹಿತ ಎಂಬ ವಿಂಗಡಣೆ ಗೊಂದಲದಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಹಿಂದಿನಂತೆ ಆಹಾರಧಾನ್ಯಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಚಿಂತಿಸುವಂತೆ ಜಿಎಸ್‌ಟಿ ಕೌನ್ಸಿಲ್‌ಗೆ ಸಲಹೆ ನೀಡಲಾಗಿದೆ.
– ಬಿ.ಟಿ. ಮನೋಹರ್‌, ಎಫ್ಕೆಸಿಸಿಐ ರಾಜ್ಯ ತೆರಿಗೆ ಸಮಿತಿ ಮತ್ತು ಟೀಮ್‌ ಜಿಎಸ್‌ಟಿ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ

ಬ್ರಾಂಡ್‌/ ಬ್ರಾಂಡ್‌ರಹಿತ ಆಹಾರಧಾನ್ಯ ವರ್ಗೀಕರಣದಿಂದ ಮಾರುಕಟ್ಟೆಯಲ್ಲಿ ಒಂದೇ ಹೆಸರು, ಸಂಕೇತದ ಹಲವು ಪದಾರ್ಥ ಲಭ್ಯವಿದ್ದು, ಗುಣಮಟ್ಟದ ಖಾತರಿ ಇಲ್ಲದಂತಾಗಿದೆ. ಜತೆಗೆ ಐಡೆಂಟಿಟಿ ಕ್ರೈಸಿಸ್‌ ತಲೆದೋರಿದ್ದು, ಕಲಬೆರಕೆ ಪದಾರ್ಥ ಹೆಚ್ಚಾಗುವ ಅಪಾಯವಿದೆ.
– ಸಿ. ವೆಂಕಟಸುಬ್ರಹ್ಮಣ್ಯಂ, ಪೇಟೆಂಟ್‌-ಟ್ರೇಡ್‌ಮಾರ್ಕ್‌ ತಜ್ಞ

ಮಾರುಕಟ್ಟೆಗೆ ಒಂದೇ ಹೆಸರು, ಸಂಕೇತದ ಹಲವು ಆಹಾರಧಾನ್ಯಗಳು ಪೂರೈಕೆಯಾಗುತ್ತಿವೆ. ಬೆಲೆಯಲ್ಲೂ ಶೇ.10ರಿಂದ ಶೇ.15ರಷ್ಟು ವ್ಯತ್ಯಾಸವಿದ್ದು, ಗ್ರಾಹಕರು ಕೇಳಿದ್ದನ್ನು ನೀಡಲಾಗುತ್ತಿದೆ. ಜಿಎಸ್‌ಟಿ ಜಾರಿ ನಂತರ ಗೊಂದಲ ಹೆಚ್ಚಾಗಿದೆ. ನಿಯಂತ್ರಿಸದಿದ್ದರೆ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ಸ್ಪಷ್ಟತೆ ಇರುವುದಿಲ್ಲ.
– ರಮೇಶ್‌ಚಂದ್ರ ಲಹೋಟಿ, ಬೆಂಗಳೂರು ಸಗಟು ಆಹಾರಧಾನ್ಯ, ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next