Advertisement

Kanyadi ಬೆಂಗಳೂರು, ತಿರುಪತಿಯಲ್ಲಿ ಶಾಖಾ ಮಠ: ಸಚಿವ ಮಂಕಾಳ ವೈದ್ಯ

11:02 PM Sep 03, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಶ್ರೀರಾಮ ಕ್ಷೇತ್ರದ ಶಾಖಾ ಮಠಗಳನ್ನು ಬೆಂಗಳೂರು ಮತ್ತು ತಿರುಪತಿಯಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಆಶಯ ಮತ್ತು ಅಪೇಕ್ಷೆಯಂತೆ ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ ಮತ್ತು ಒಳನಾಡು, ಬಂದರು ಸಚಿವ ಮಂಕಾಳ ಎಸ್‌. ವೈದ್ಯ ಹೇಳಿದರು.

Advertisement

ದೇವರಗುಡ್ಡೆ ಗುರುದೇವ ಮಠದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಜಗದ್ಗುರು ಪೀಠದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕದ 15ನೇ ವರ್ಧಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕ ಹರೀಶ್‌ ಪೂಂಜ ನೇತೃತ್ವದಲ್ಲಿ ದೇವರಗುಡ್ಡೆಯಲ್ಲಿ ಪ್ರಾರಂಭಿಸಿರುವ ಅನ್ನಛತ್ರ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸಭಾಭವನವನ್ನು 10 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು. ಇದಕ್ಕೆ ಸರಕಾರದಿಂದ ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮದ ಮರ್ಮವನ್ನರಿತು ಸಾತ್ವಿಕ ಜೀವನ ನಡೆಸಿದರೆ ಸುಖ-ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಅತಿಯಾಸೆ ಪಡದೆ ಎಲ್ಲರೂ ಪ್ರೀತಿ-ವಿಶ್ವಾಸದಿಂದ ಸೌಹಾರ್ದದ ಜೀವನ ನಡೆಸಬೇಕು ಎಂದರು.

ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಮಾತನಾಡಿ, ಯಾವುದೇ ಸಂಪತ್ತು, ಸಂಪನ್ಮೂಲ ಇಲ್ಲದ ಸಂದರ್ಭದಲ್ಲಿ ರಾಮಕ್ಷೇತ್ರದ ಸ್ಥಾಪಕ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಊರೂರು ಅಲೆದಾಡಿ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಸದ್ವಿನಿಯೋಗ ಮಾಡಿ ರಾಮಕ್ಷೇತ್ರವನ್ನು ಮಾದರಿಯಾಗಿ ರೂಪಿಸಿದ್ದಾರೆ ಎಂದು ಸ್ಮರಿಸಿದರು.

ಶಾಸಕ ಹರೀಶ್‌ ಪೂಂಜ ಮಾತನಾಡಿ, ಮುಂದಿನ ವರ್ಷ ನೂತನ ಅನ್ನಛತ್ರ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟಿಸಲಾಗುವುದು ಎಂದರು.

Advertisement

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಹಿಂದೂ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಕಾಲಿಕ ಮಾರ್ಗದರ್ಶನವನ್ನು ಸ್ಮರಿಸಿದರು.

ಮಠದ ಹಿರಿಯ ಟ್ರಸ್ಟಿ ಚಿತ್ತಾರಂಜನ್‌ ಗರೋಡಿ, ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ಜಯಂತ ಕೋಟ್ಯಾನ್‌, ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್‌.ಪಿ. ಪೀತಾಂಬಾರ ಹೇರಾಜೆ, ಉತ್ತರ ಕನ್ನಡ ಜಿ.ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಟ್ರಸ್ಟಿ ತುಕಾರಾಮ್‌ ಸಾಲಿಯಾನ್‌, ಶ್ರೀರಾಮ ಕ್ಷೇತ್ರ ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಹೊನ್ನಾವರ ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ವಾಮನ ನಾಯ್ಕ, ಸಿದ್ದಾಪುರ ಶ್ರೀರಾಮ ಕ್ಷೇತ್ರ ಸಮಿತಿ ಸಂಚಾಲಕ ಆರ್‌.ಎನ್‌. ನಾಯ್ಕ, ಹೊನ್ನಾವರ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ್‌ ನಾಯ್ಕ ಉಪಸ್ಥಿತರಿದ್ದರು.

ಮಂಗಳೂರಿನ ಗೋಕರ್ಣ ನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಪ್ರೊ| ಕೇಶವ ಬಂಗೇರ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ವಂದಿಸಿದರು. ಸೀತಾರಾಮ ಬಿ.ಎಸ್‌. ನಿರ್ವಹಿಸಿದರು.

ದೇವಸ್ಥಾನ ಹಾಗೂ ಮಠ- ಮಂದಿರಗಳಿಗೆ ನೀಡಿದ ಅನುದಾನ ಮತ್ತು ಸೇವೆ ಶಾಶ್ವತವಾಗಿ ಜನರ ಮನದಲ್ಲಿರುತ್ತದೆ. ಮುಂದಿನ ವರ್ಷ ಭಟ್ಕಳದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ಚಾತುರ್ಮಾಸ ವ್ರತ ಆಚರಣೆ ನಡೆಯಲಿದ್ದು ಈ ಬಗ್ಗೆ ಪೂರ್ಣ ಸಹಕಾರ ನೀಡಲಾಗುವುದು.
– ಮಂಕಾಳ ಎಸ್‌. ವೈದ್ಯ, ಸಚಿವರು

 

Advertisement

Udayavani is now on Telegram. Click here to join our channel and stay updated with the latest news.

Next