Advertisement

Health: ಜಿಲ್ಲಾಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಬ್ರೈನ್‌ ಹೆಲ್ತ್‌ ಕ್ಲಿನಿಕ್‌

12:17 AM Nov 06, 2023 | Team Udayavani |

ಬೆಂಗಳೂರು: ನರಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಮರಣಕ್ಕೆ ತುತ್ತಾಗುವ ಅಥವಾ ಅಂಗವೈಕಲ್ಯ ಹೊಂದುವ ಪ್ರಕರಣಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ರಾಜ್ಯಾದ್ಯಂತ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ತೆರೆಯಲು ಮುಂದಾಗಿದೆ.

Advertisement

ಆರೋಗ್ಯ ಇಲಾಖೆ ನಿಮ್ಹಾನ್ಸ್‌ ಸಹಯೋಗದಲ್ಲಿ ಮೆದುಳಿನ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಉತ್ತೇಜಿಸಲು ಬ್ರೈನ್‌ ಹೆಲ್ತ್‌ ಇನೀಶಿಯೇಟ್‌ ಯೋಜನೆ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಯೋಜನೆಯನ್ನು ಪ್ರಾಯೋಗಿಕವಾಗಿ ಕೋಲಾರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರದಲ್ಲಿ ಅನುಷ್ಠಾನಗೊಳಿಸ ಲಾಗಿದ್ದು, ಇದುವರೆಗೆ 30 ಸಾವಿರ ರೋಗಿ ಗಳಿಗೆ ಚಿಕಿತ್ಸೆ ನೀಡಲಾಗಿದೆ.
ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯಕ್ಕೆ ಹಬ್‌ ಮತ್ತು ನ್ಪೋಕ್ಸ್‌ ಮಾದರಿಯಲ್ಲಿ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಪ್ರಾರಂಭಿಸಲು ಉದ್ದೇಶಿಸಿದೆ.

ನರ ಸಂಬಂಧಿಸಿದ ಕಾಯಿಲೆಗಳಾದ ಪಾರ್ಶ್ವ ವಾಯು, ತಲೆ ನೋವು, ಬುದ್ಧಿಮಾಂದ್ಯತೆ, ಅಪಸ್ಮಾರ ಹಾಗೂ ಇತರ ನರ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ನೋಡಲ್‌ ಕೇಂದ್ರಗಳಾಗಿ ಕಾರ್ಯಾಚರಣೆ ಮಾಡಲಿವೆ. ಜತೆಗೆ ರೋಗಿಗಳಿಗೆ ಅಗತ್ಯವಿರುವ ಸಮಾ ಲೋಚನೆ, ಫಿಸಿಯೋಥೆರಪಿ, ಸ್ಪೀಚ್‌ ಥೆರಪಿ, ಪುನರ್ವಸತಿ ಹಾಗೂ ಸಮಗ್ರ ಆರೈಕೆ ಒದಗಿಸಲಿದೆ. ನಿಮ್ಹಾನ್ಸ್‌ ನೇತೃತ್ವದಲ್ಲಿ ಚಿಕಿತ್ಸೆ ನೀಡಲು ಅಗತ್ಯ ತರಬೇತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಹಾಗೂ ಜಿಲ್ಲಾ ಆಸ್ಪತ್ರೆಗಳ ವೈದ್ಯರಿಗೆ ನೀಡಲಾಗಿದೆ.

ಕಾರ್ಯಾಚರಣೆ ಹೇಗೆ?
ಮೈಗ್ರೇನ್‌ ಸಹಿತ ತಲೆಗೆ ಸಂಬಂಧಿಸಿದ ರೋಗಗಳ ಚಿಕಿತ್ಸೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಲಾಗುತ್ತದೆ. ತರಬೇತಿ ಪಡೆದ ಇಲ್ಲಿನ ವೈದ್ಯರು ಶೇ.30ರಿಂದ 40ರಷ್ಟು ನರ ಸಂಬಂಧಿಸಿದ ಸಮಸ್ಯೆಗೆ ಚಿಕಿತ್ಸೆ ನೀಡಬಹುದಾಗಿದೆ. ಎರಡನೇ ಹಂತ ವಾದ ಚಿಕಿತ್ಸೆ ಜಿಲ್ಲಾಸ್ಪತ್ರೆಯ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ನಲ್ಲಿ ನೀಡಲಾಗುತ್ತದೆ. ಕೆಲವೊಮ್ಮ ಟೆಲಿ ನ್ಯೂರೊ ಕಾಲ್‌ ಮೂಲಕ ರೋಗಿ ಹಾಗೂ ವರದಿಯನ್ನು ತಜ್ಞ ವೈದ್ಯರನ್ನು ಸಂಪರ್ಕಿಸಿ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು, ಅಪಸ್ಮಾರ ಮುಂತಾದ ರೋಗದ ಚಿಕಿತ್ಸೆಗೆ ತೃತೀಯ ಹಂತ (ಸ್ಪೆಶಲಿಸ್ಟ್‌) ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆ ನೀಡಲಾಗುತ್ತದೆ ಎಂದು ನಿಮ್ಹಾನ್ಸ್‌ ನರ ರೋಗ ವಿಭಾಗದ ಮುಖ್ಯಸ್ಥೆ ಪ್ರೊ| ಸುವರ್ಣ ಆಲಾಡಿ ಮಾಹಿತಿ ನೀಡಿದರು.

25 ಕೋಟಿ ರೂ. ಯೋಜನೆ

Advertisement

ಸುಮಾರು 25 ಕೋ. ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ 10 ಕೋ. ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಅನುಷ್ಠಾನವಾಗಲಿದೆ. ಎಂಆರ್‌, ಸಿಟಿ ಸ್ಕ್ಯಾನಿಂಗ್‌, ರಕ್ತ ಪರೀಕ್ಷೆ ಮುಂತಾದ ಆಯ್ದ ಕೆಲವು ಲ್ಯಾಬೊರೇಟರಿ ಸೇವೆಗಳು ಸರಕಾರಿ ಆಸ್ಪತ್ರೆಗಳಲ್ಲಿಯೇ ಇವೆ. ವ್ಯವಸ್ಥೆಗಳಿಲ್ಲದ ಕಡೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಗೋಲ್ಡನ್‌ ಸಮಯದಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗಲು ಸಾಧ್ಯ ಎಂದು ಮಾನಸಿಕ ರೋಗ ವಿಭಾಗದ ಉಪನಿರ್ದೇಶಕಿ ಡಾ| ರಜನಿ ಪಾರ್ಥಸಾರಥಿ ತಿಳಿಸಿದರು.

ಮೆದುಳಿನ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಉತ್ತೇಜಿಸಲು ಜಿಲ್ಲಾಸ್ಪತ್ರೆಯಲ್ಲಿ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಪ್ರಾರಂಭಿಸಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿ ಯಾಗಿದ್ದು, ಸಾವಿರಾರು ರೋಗಿಗಳು ಬ್ರೈನ್‌ ಹೆಲ್ತ್‌ ಕ್ಲಿನಿಕ್‌ನಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಯೋಜನೆ ರಾಜ್ಯಾದ್ಯಂತ ಆರಂಭವಾಗ‌ಲಿದೆ.
– ಡಾ| ರಣದೀಪ್‌, ಆಯುಕ್ತರು, ಆರೋಗ್ಯ ಇಲಾಖೆ

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next