Advertisement
ಏನಿದು ಬ್ರೈನ್ ಫಾಗ್?ದೈನಂದಿನ ಜೀವನದಲ್ಲಿ ನಾವು ಅಂದುಕೊಂಡ ಕೆಲಸಗಳು ಅಥವಾ ಇನ್ನಾವುದೋ ಆಲೋಚನೆಗಳನ್ನು ಮರೆತು ಬೇರಾವುದೋ ಅನಗತ್ಯ ವಿಷಯಗಳ ಬಗ್ಗೆ ಚಿಂತಿಸಲು ಶುರು ಮಾಡಿದರೆ ಮತ್ತು ನಮ್ಮ ಈ ವಿಚಿತ್ರ ನಡವಳಿಕೆ ಇತರರಿಗೆ ಒಂದಿಷ್ಟು ಅಚ್ಚರಿ ಎನಿಸಿದರೆ ಅದನ್ನೇ “ಮಂಕು ಕವಿಯುವುದು’ ಅಥವಾ ವೈದ್ಯಕೀಯ ಭಾಷೆಯಲ್ಲಿ “ಬ್ರೈನ್ ಫಾಗ್’ ಎಂದು ಕರೆಯುತ್ತಾರೆ. ಆಸ್ಟ್ರೇಲಿಯಾದ ಮೊನಾಶ್ ವಿವಿಯ ಸಂಶೋಧಕರು ಈ ಬಗ್ಗೆ ಕೆಲವು ಸಂಶೋಧನೆಗಳನ್ನು ನಡೆಸಿದ್ದು ಅವರ ಪ್ರಕಾರ ಋತುಬಂಧದ ಸಮಯದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಋತುಬಂಧ ಎಂದರೆ ಮೆನೋಪಾಸ್ ಅಥವಾ ಪಿರಿಯಡ್ಸ್ ನಿಲ್ಲುವುದು. ಸಾಮಾನ್ಯವಾಗಿ 40 ವರ್ಷದ ಅನಂತರ ಅಥವಾ 45-50 ವರ್ಷ ವಯಸ್ಸಿನ ಮಹಿಳೆಯರು ಋತುಬಂಧಕ್ಕೊಳಗಾಗುತ್ತಾರೆ. ಋತುಬಂಧದ ಅನಂತರ ಸಂತಾನೋತ್ಪತ್ತಿ ಪ್ರಕ್ರಿಯೆ ನಿಲ್ಲುತ್ತದೆ. ಅನಂತರ ಕ್ರಮೇಣ ಸ್ತ್ರೀಯರಲ್ಲಿರುವ ಹಾರ್ಮೋನ್‌ಗಳು ಕಡಿಮೆಯಾಗುತ್ತದೆ. ಇದರಿಂದಾಗಿ ಅವರಲ್ಲಿ ಮಾನಸಿಕ ಬದಲಾವಣೆ ಸಾಧ್ಯತೆ ಅಧಿಕ ಎನ್ನುತ್ತಾರೆ ತಜ್ಞರು.
ಸಂಶೋಧನೆಯ ಪ್ರಕಾರ ಶೇ. 60ರಷ್ಟು ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಜ್ಞಾಪಕ ಶಕ್ತಿಯ ಕೊರತೆ ಉಂಟಾದರೆ ಇನ್ನು ಕೆಲವರಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳಬಹುದು. ಅವರ ಕಾರ್ಯ ಸಾಮರ್ಥ್ಯವನ್ನು ಕುಗ್ಗಿಸಲೂಬಹುದು. ಇದು ಬಹುದೊಡ್ಡ ಸಮಸ್ಯೆ ಅಲ್ಲದಿದ್ದರೂ ನಿರ್ಲಕ್ಷ್ಯ ಮಾಡಬಾರದು. ಈ ಎಲ್ಲ ಮಾನಸಿಕ ಬದಲಾವಣೆಗಳು ಬ್ರೈನ್ ಫಾಗ್‌ನ ಪಾರ್ಶ್ವ ಪರಿಣಾಮಗಳಾಗಿವೆ. ಆದರೆ ಋತುಬಂಧ ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರುವುದಿಲ್ಲ ಬದಲಾಗಿ ನಿದ್ರಾಹೀನತೆ, ಆತಂಕ, ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇವೆಲ್ಲವೂ ನಿಮ್ಮ ಮೆದುಳನ್ನು ಮಂಕಾಗಿಸುತ್ತದೆ. ಇಂತಹ ಅನುಭವ ಪದೇ ಪದೆ ನಿಮ್ಮಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದರೆ ನೀವು ಅಗತ್ಯವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ನಿಮಗೆ ಮೊದಲೇ ಖನ್ನತೆಯ ಸಮಸ್ಯೆ ಇದ್ದರೆ ಹೆಚ್ಚು ಪ್ರಭಾವ ಬೀರುವ ಸಂಭವವಿರುತ್ತದೆ. ಇದನ್ನೂ ಓದಿ:ಆಲಪ್ಪುಳ ಅವಳಿ ಕೊಲೆ ಪ್ರಕರಣ : ಪೊಲೀಸರಿಂದ ಇಬ್ಬರ ಬಂಧನ
Related Articles
ನೀವು ತುಂಬಾ ದಿನಗಳಿಂದ ನಿದ್ರೆಗೆಡುತ್ತಿದ್ದೀರಿ ಅಥವಾ ಸರಿಯಾಗಿ ನಿದ್ದೆ ಬರುತ್ತಿಲ್ಲ, ಮಧ್ಯೆ-ಮಧ್ಯೆ ನಿದ್ರೆ ಭಂಗವಾಗುತ್ತಿದ್ದಲ್ಲಿ ಸುಖನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮೆದುಳು ಮಂಕಾಗುತ್ತದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ರೆ ಅತ್ಯವಶ್ಯಕ. ಮೆದುಳಿಗೆ ವಿಶ್ರಾಂತಿ ಅತ್ಯಗತ್ಯವಾಗಿದ್ದು ನಿದ್ರಾ ಸಮಯದಲ್ಲಿ ಮೆದುಳು ಸಹಜ ಸ್ಥಿತಿಗೆ ಮರಳುತ್ತದೆ ಮತ್ತು ಸಕ್ರಿಯಗೊಳ್ಳುತ್ತದೆ. ಹೀಗಾಗಲು ಅಗತ್ಯವಿರುವ ನ್ಯೂರಾನ್‌ಗಳು ತಯಾರಾಗಬೇಕಿದ್ದು ಇದಕ್ಕೆ ನಿದ್ರೆ ಆವಶ್ಯಕ. ಹಾಗಾಗಿ ನಿಮ್ಮ ಅಭ್ಯಾಸಗಳು ಅಥವಾ ಯಾವುದೇ ರೀತಿಯ ಚಟುವಟಿಕೆ ನಿಮ್ಮ ನಿದ್ರೆಗೆ ಭಂಗವಾಗುವ ರೀತಿಯಲ್ಲಿರಬಾರದು.
Advertisement
ಯುವಜನರ ಮೇಲೂ ಪರಿಣಾಮಇತ್ತೀಚಿನ ದಿನಗಳಲ್ಲಿ ಇದು ವಿವಿಧ ವಯೋಮಾನದವರಲ್ಲಿಯೂ ಕಂಡು ಬರುತ್ತಿದೆ. ಅದಕ್ಕಿಂತ ಮಿಗಿಲಾಗಿ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಮನೋಶಾಸ್ತ್ರಜ್ಞರ ಪ್ರಕಾರ ಕೋವಿಡ್‌ನಿಂದಾಗಿ ಇದು ಚಿಕ್ಕ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಯುವಜನರ ಮೇಲೆ ಇದರ ಪರಿಣಾಮ ಗಂಭೀರವಾಗಿರಬಹುದು ಎಂಬುದು ಸಂಶೋ ಧನೆಗಳ ವೇಳೆ ಸಾಬೀತಾಗಿದೆ. ಇನ್ನು ಈ ರೀತಿಯ ಸಮಸ್ಯೆ ಮಹಿಳೆಯರಲ್ಲಿ ಹಲವು ಬಾರಿ ಕಂಡು ಬರುತ್ತದೆ. ಕೆಲವೊಮ್ಮೆ ಗರ್ಭಾವಸ್ಥೆಯ ಸಮಯದಲ್ಲಿ ಇಂತಹ ಸಮಸ್ಯೆ ಎದುರಾಗಬಹುದು. ಕಾಳಜಿ ಹೇಗೆ?
-ಮಹಿಳೆಯರು ಯಾವುದೇ ಔಷಧಗಳನ್ನು ಅತಿಯಾಗಿ ಬಳಸಬಾರದು.
-ಡ್ರಗ್ಸ್, ಮದ್ಯ ಸೇವಿಸಬಾರದು.
– ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಹಣ್ಣು- ತರಕಾರಿಗಳಿರಬೇಕು.
-ಸಕಾರಾತ್ಮಕ ಚಿಂತನೆ ಮತ್ತು ಒಳ್ಳೆಯ ಸಂದೇಶ ನೀಡುವ ಪುಸ್ತಕ ಓದುವುದು.
-ಕೆಲವು ಔಷಧ ತೆಗೆದುಕೊಂಡ ಬಳಿಕ ಸ್ವಲ್ಪ ಸಮಯ ನಿದ್ರಿಸಬೇಕು. ನಿದ್ದೆಯನ್ನು ಬಲವಂತವಾಗಿ ತಡೆ ಹಿಡಿದ ಸಂದರ್ಭದಲ್ಲಿ ಖನ್ನತೆ ಉಂಟಾಗಬಹುದು. - ಪ್ರೀತಿ ಭಟ್ ಗುಣವಂತೆ