ಮೈಸೂರು: ಬ್ರಾಹ್ಮಣ ಸಮಾಜದ ಬಡವರಿಗೆ ಉದ್ಯೋಗ, ಶಿಕ್ಷಣದ ಜತೆಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವೇ ಕಾರ್ಯಕ್ರಮವೊಂದನ್ನು ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ನಗರದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬ್ರಾಹ್ಮಣರಿಗಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸಾಧ್ಯವಿಲ್ಲ.
ಆದರೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಅವರೊಂದಿಗೆ ಚರ್ಚಿಸಿ, ಬ್ರಾಹ್ಮಣ ಸಮಾಜದ ಬಡವರಿಗಾಗಿ ಏನೇನು ಮಾಡಬೇಕೆಂಬುದನ್ನು ಶೀಘ್ರವೇ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈ ಬಗ್ಗೆ ಸಾರ್ವಜನಿಕವಾಗಿ ನೀಡಿರುವ ಮಾತನ್ನು ಈಡೇರಿಸಲು ತಾವು ಬದ್ಧರಾಗಿದ್ದು, ಇದನ್ನು ಜಾರಿಗೊಳಿಸಲು ಪ್ರಯತ್ನ ಮಾಡುವುದಾಗಿ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಬ್ರಾಹ್ಮಣ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ ಆಡಳಿತದಲ್ಲಿರುವವರು ಯಾವುದೋ ಕೇವಲ ಒಂದು ಜಾತಿ, ಸಮುದಾಯದ ಪರ ಅಥವಾ ವಿರುದ್ಧ ಇದ್ದರೆ ಅವರು ಆ ಸ್ಥಾನದಲ್ಲಿರಲು ಅರ್ಹರಲ್ಲ. ಅಲ್ಲದೆ ಬ್ರಾಹ್ಮಣ ಸಮುದಾಯದ ಬಡವರು ಹಾಗೇ ಇರಲಿ ಎಂದು ಹೇಳಿದರೆ ಸಮಾನತೆ ಸಾಧ್ಯವಿಲ್ಲ ಎಂಬ ಅರಿವು ತಮಗಿದೆ.
ಅಲ್ಲದೆ ಯಾರೂ ಪೂರ್ವಗ್ರಹ ಪೀಡಿತರಾಗಿರದೆ, ಎಲ್ಲರನ್ನೂ ಮಾನವೀಯತೆ ದೃಷ್ಟಿಕೋನದಿಂದ ನೋಡಬೇಕಿದೆ. ಜಾತ್ಯತೀತತೆ ಎಂದರೆ ಧರ್ಮ ಬಿಡುವುದಲ್ಲ, ಯಾವುದೇ ಜಾತಿಗೆ ಸೇರಿದ್ದರೂ ಸಹಿಷ್ಣುತೆ, ಸಹಬಾಳ್ವೆಯಿಂದ ಇರಬೇಕೆಂಬುದಾಗಿದೆ. ಸಂವಿಧಾನದ ಆಶಯವೂ ಇದೆ ಆಗಿದೆ. ಪ್ರತಿಯೊಬ್ಬರಲ್ಲೂ ಇದೇ ರೀತಿಯ ಆಲೋಚನೆ ಇದ್ದಲ್ಲಿ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಸಚಿವ ತನ್ವೀರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬ್ರಾಹ್ಮಣ ಸಮಾಜದ ವಲಯ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್, ಮುಖಂಡರಾದ ಜಿ.ರವಿ, ಎಂ.ಡಿ.ಪಾರ್ಥಸಾರಥಿ ಮುಂತಾದವರಿದ್ದರು.