ಬೆಂಗಳೂರು: ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಫೆ.24ರಿಂದ 25ರವರೆಗೆ ನಗರದಲ್ಲಿ “ಬೆಂಗಳೂರು ಮಹಾನಗರ ಬ್ರಾಹ್ಮಣರ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಸಮಾರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್‌ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ, ಸಚಿವ ರಾಮಲಿಂಗಾ ರೆಡ್ಡಿ,
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಸುರೇಶ್ ಕುಮಾರ್ ಸೇರಿದಂತೆ ನಾಡಿನ ವಿವಿಧ ಮಠಾಧಿಪತಿಗಳು, ಸಾಹಿತಿಗಳು ಮತ್ತು ಸಿನಿಮಾ ಕಲಾವಿದರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಸೇರಿದಂತೆ ಎಂದು ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಹೇಳಿದರು.ಎಂದು ತಿಳಿಸಿದರು.
ರಾಜ್ಯದಲ್ಲೂ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸಮಾವೇಶದಲ್ಲಿ ಒತ್ತಾಯಿಸಲಾಗುವುದು. ಬ್ರಾಹ್ಮಣರ ಮಹಾಸಭಾದಿಂದ ವಿದ್ಯಾಕೇಂದ್ರ ಸ್ಥಾಪಿಸಲು ಸರ್ಕಾರದಿಂದ 10 ಎಕರೆ ಜಾಗ ಮತ್ತು ಸಮುದಾಯ ಭವನ ಸ್ಥಾಪನೆಗೆ 10 ಕೋಟಿ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ, ಎರಡೂ ದಿನ ವಿವಿಧ ರೀತಿಯ ಗೋಷ್ಠಿಗಳು ನಡೆಯಲಿವೆ.
ಫೆ.24ರ ಸಂಜೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ “ಹಾಸ್ಯ ಸಂಜೆ’ ಹಾಗೂ ಸಮಾರೋಪದ ನಂತರ ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮತ್ತು ತಮ್ಮ ನೇತೃತ್ವದ ತಂಡ “ಸಂಗೀತ ರಸ ಸಂಜೆ’ ಕಾರ್ಯಕ್ರಮವನ್ನು ನಡೆಸಿಕೊಡಲಿದೆ ಎಂದು ಹೇಳಿದರು. ಅಖೀಲ ಕರ್ನಾಟ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಸತ್ಯನಾರಾಯಣ, ಎಚ್.ಸಿ.ಕೃಷ್ಣ, ರಾಮಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.