ಬೆಂಗಳೂರಿನ ಹೋಟೆಲ್‌ನಲ್ಲಿ ಒಂದು ಊಟಕ್ಕೆ ಕನಿಷ್ಠವೆಂದರೂ 30 ರೂಪಾಯಿ ಕೊಡಬೇಕು. ಕಡಿಮೆ ದುಡ್ಡಿಗೂ ಊಟ ಸಿಗಬಹುದು. ಆದರೆ, ರುಚಿ- ಶುಚಿಯನ್ನು ಗಮನದಲ್ಲಿರಿಸಿಕೊಂಡರೆ ಮೂವತ್ತು ರೂ. ಬೇಕೇ ಬೇಕು. ಆದರೆ, ಇಲ್ಲೊಂದು ಹೋಟೆಲ್ ಕೇವಲ ಹತ್ತು ರೂಪಾಯಿಗೆ ಶುಚಿ-ರುಚಿಯ ಅಡುಗೆ ಉಣ ಬಡಿಸುತ್ತಿದೆ. ಹಾಗಂತ ಇಲ್ಲಿ ಹೇಳಲು ಹೊರಟಿರುವುದು ಇಂದಿರಾ ಕ್ಯಾಂಟೀನ್ ಬಗ್ಗೆ ಅಲ್ಲ. ಅಷ್ಟು ಕಡಿಮೆ ಹಣಕ್ಕೆ ಹೊಟ್ಟೆ ತುಂಬಾ ಊಟ ನೀಡುತ್ತಿರುವುದು ಮಲ್ಲೇಶ್ವರದ 7ನೇ ಕ್ರಾಸ್‌ನಲ್ಲಿರುವ ಬ್ರಾಹ್ಮಿನ್ಸ್ ಬೊಂಬಾಟ್ ಚಾಟ್ಸ್.
ಅಲ್ಲಿನ ಮೆನು ತುಂಬಾ ಸಿಂಪಲ್ ಆಗಿದೆ. ಪ್ರತಿದಿನ ಮಧ್ಯಾಹ್ನ ಕೇವಲ ಹತ್ತು ರೂ.ಗೆ ಪುಳಿಯೊಗರೆ, ಚಿತ್ರಾನ್ನ, ಮೊಸರನ್ನ, ಬಿಸಿಬೇಳೆ ಬಾತ್ ಇತ್ಯಾದಿ ಸಿಗುತ್ತದೆ. ಪ್ರತಿದಿನ 1000-1200 ಜನ ಬಂದು ಊಟ ಮಾಡುತ್ತಾರೆ. ಇಲ್ಲಿಗೆ ಬರುವವರು ಕೇವಲ ಬಡವರೆಂದು ತಿಳಿಯಬೇಡಿ. ಇಲ್ಲಿನ ಶುಚಿ-ರುಚಿಗೆ ಮಾರು ಹೋಗಿರುವವರಲ್ಲಿ ಶ್ರೀಮಂತರೂ ಇದ್ದಾರೆ. ತೀರಾ ಹತ್ತಿರದಲ್ಲೇ ಇನ್ನೂ ಎರಡು- ಮೂರು ಹೋಟೆಲ್‌ಗಳಿದ್ದರೂ, ಕಾರಿನಲ್ಲಿ ಬಂದು ಇಲ್ಲಿ ಊಟ ಮಾಡುತ್ತಾರೆ. ಅದಕ್ಕೆ ಮೂಲ ಕಾರಣ ಅಡುಗೆಯ ರುಚಿ ಎನ್ನುತ್ತಾರೆ ಬ್ರಾಹ್ಮಿನ್ ಚಾಟ್ಸ್ ಮಾಲೀಕ ಮಂಜುನಾಥ.
ಮಂಜುನಾಥ ಅವರು ಮೈಸೂರಿನವರು. ಅವರ ತಂದೆ ನಂಜನಗೂಡು ಎಂ.ಎನ್. ಸ್ವಾಮಿ ಪ್ರಸಿದ್ಧ ಅಡುಗೆ ಕಾಂಟ್ರ್ಯಾಕ್ಟರ್ ಆಗಿದ್ದರು. ಅವರ ಮರಣಾನಂತರ ಮಂಜುನಾಥ್ ತಮ್ಮ ತಾಯಿ ಗಿರಿಜಮ್ಮ ಹಾಗೂ ಸೋದರ ರಾಜು ಜೊತೆಗೆ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದರು. ಪಾಕ ಪ್ರಾವೀಣ್ಯತೆ ರಕ್ತದಲ್ಲೇ ಇದ್ದರೂ ಅವರು ಹೋಟೆಲ್ ತೆರೆಯುವ ಇರಾದೆಯಲ್ಲಿರಲಿಲ್ಲ. ಬೆಂಗಳೂರಿನಲ್ಲಿ ಮಂಜುನಾಥ್ ಮಾಡದ ಕೆಲಸವಿಲ್ಲ. ಕ್ಯಾಬ್ ಡ್ರೈವರ್ ಆಗಿ, ಸಿಗ್ನಲ್‌ನಲ್ಲಿ ವಸ್ತಗಳನ್ನು ಮಾರಾಟ ಮಾಡುತ್ತಾ ತುಂಬಾ ದಿನ ಕಷ್ಟಪಟ್ಟರು. ಹೀಗೇ ಒಂದು ದಿನ ಮಲ್ಲೇಶ್ವರದ ರಸ್ತೆಯಲ್ಲಿ ಸುಮ್ಮನೆ ಹಾದು ಹೋಗುತ್ತಿದ್ದಾಗ, ಹೋಟೆಲ್ ಒಂದರ ಎದುರು ಜನ ಕ್ಯೂ ನಿಂತಿರುವುದನ್ನು ಕಂಡರು. ಅಡುಗೆ, ಹೋಟೆಲ್ ಉದ್ಯಮದ ಲಾಭ-ನಷ್ಟಗಳನ್ನು ಅರಿತಿದ್ದ ಅವರು, ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಊಟ ಹಾಕುವ ಹೋಟೆಲೊಂದನ್ನು ತೆರೆಯಲು ನಿರ್ಧರಿಸಿದರು. ಹಾಗೆ ಶುರುವಾಗಿದ್ದೇ “ಬ್ರಾಹ್ಮಿನ್ಸ್ ಚಾಟ್ಸ್ ಸೆಂಟರ್’.
ಮಧ್ಯಾಹ್ನ 12ರಿಂದ 4 ಗಂಟೆಯವರೆಗೆ ಊಟ ಸಿಗುತ್ತದೆ. ಗಾಯತ್ರಿ ನಗರದಲ್ಲಿ ಇವರದ್ದೇ ಒಂದು ಗೋಡಾನ್ ಇದೆ. ಅಲ್ಲಿ ನಿತ್ಯ ಬೇಕಾಗುವ ಅಡುಗೆ ತಯಾರಾಗುತ್ತದೆ. ಮಂಜುನಾಥ್, ಅವರ ತಾಯಿ ಗಿರಿಜಮ್ಮ ಮತ್ತು ಸಹೋದರ ರಾಜು ಅವರ ಜೊತೆಗೆ ಇನ್ನೂ ಐದಾರು ಯುವಕರು ಅಡುಗೆ ಕೆಲಸಕ್ಕಿದ್ದಾರೆ. ದಿನಕ್ಕೆ 800-1000 ಜನ ಇಲ್ಲಿ ಬಂದು ಊಟ ಮಾಡುತ್ತಾರೆ. ಒಂದು ದಿನವೂ ಮಾಡಿದ ಅಡುಗೆ ಉಳಿದು ಹಾಳಾದ ಉದಾಹರಣೆ ಇಲ್ಲ. ಸಂಜೆ 4-30 ರಿಂದ 9-30ರ ತನಕ ರುಚಿ ರುಚಿಯಾದ ಚಾಟ್ಸ್ ಇಲ್ಲಿ ಸಿಗುತ್ತದೆ. ಬೇರೆ ಚಾಟ್ ಸೆಂಟರ್‌ಗಳಿಗಿಂತ ಕಡಿಮೆ ದುಡ್ಡಿಗೆ ನಿಮ್ಮ ನಾಲಿಗೆ ರುಚಿ ತಣಿಸಿಕೊಳ್ಳಬಹುದು.
ಹೋಟೆಲ್ ಶುರುವಾಗಿ ಎಂಟು ತಿಂಗಳಷ್ಟೇ ಆಗಿದ್ದರೂ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನ “ಬ್ರಾಹ್ಮಿನ್ಸ್ ಬೊಂಬಾಟ್ ಚಾಟ್ ಸೆಂಟರ್’ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಅದನ್ನು ನೋಡಿ ದಿನಕ್ಕೆ ಕನಿಷ್ಠ 50 ಮಂದಿಯಾದರೂ ಇವರನ್ನು ಬಂದು ಮಾತಾಡಿಸುತ್ತಾರೆ. ಹಲವರು ಫೋನ್ ಮಾಡಿ ಫ್ರಾಂಚೈಸಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇನ್ನೂ ಐದಾರು ಕಡೆಗಳಲ್ಲಿ ಇದೇ ರೀತಿಯ ಕ್ಯಾಂಟೀನ್ ತೆರೆಯುವ ಸಿದ್ಧತೆಯಲ್ಲಿದ್ದಾರೆ ಮಂಜುನಾಥ್. ಹೋಟೆಲ್ ಅನ್ನುವುದನ್ನು ಹಣ ಮಾಡುವ ಉದ್ದಿಮೆಯನ್ನಾಗಿ ನೋಡುವುದಿಲ್ಲ. ಜನರಿಗೆ ಕಡಿಮೆ ದರದಲ್ಲಿ ಅಚ್ಚುಕಟ್ಟಾದ ಊಟ ಕೊಡಬಹುದು ಎಂದು ತೋರಿಸುವುದು ನಮ್ಮ ಉದ್ದೇಶ ಎನ್ನುತ್ತಾರೆ ಮಂಜುನಾಥ. ಇಲ್ಲಿ ಊಟ ಮಾಡಿದವರೆಲ್ಲ “ಅನ್ನದಾತ ಸುಖೀಭವ’ ಎಂದು ಹೇಳಲು ಮರೆಯುವುದಿಲ್ಲ.
ಅಕ್ಟೋಬರ್ 10ರಿಂದ ಬೆಳಗಿನ ತಿಂಡಿಯೂ ಶುರುವಾಗಲಿದೆ. ಬೆಳಗ್ಗೆ ತಿಂಡಿಗೆ ಶ್ಯಾವಿಗೆ ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು, ಪುಳಿಯೊಗರೆ, ಲೆಮನ್‌ರೈಸ್, ಕ್ಯಾರೆಟ್ ಹಲ್ವಾ, ಬೋಂಡಾ ಅಥವಾ ಬಜ್ಜಿ ಲಭ್ಯವಿದೆ. ಹಾಂ, ಅದಕ್ಕೂ ಹತ್ತು ರೂಪಾಯಿಯೇ! ಪ್ರತಿದಿನ 7-30ರಿಂದ 12ರವರೆಗೆ ತಿಂಡಿ, ನಂತರ ಊಟ ಸಿಗುತ್ತದೆ.
ಪ್ರತಿದಿನದ ಮೆನು
ಪುಳಿಯೊಗರೆ- 10
ಚಿತ್ರಾನ್ನ- 10
ಮೊಸರನ್ನ- 10
ಗಸೆಗಸೆ ಪಾಯಸ- 5
ವಡೆ/ಬೋಂಡ (2ಕ್ಕೆ) -10
ಜಿಲೇಬಿ- 10 (2ಕ್ಕೆ)
ಮಿಕ್ಸಡ್ ರೈಸ್ – 20ಉಳಿದಂತೆ ವಾರದಲ್ಲಿ ಒಂದೊಂದು ದಿನ ಬಿಸಿಬೇಳೆಬಾತ್, ಗೀರೈಸ್, ಟೋಮೆಟೋಬಾತ್, ವಾಂ ಬಾತ್
ತೀರಾ ಹತ್ತಿರದಲ್ಲೇ ಇನ್ನೂ ಎರಡು- ಮೂರು ದೊಡ್ಡ ಹೋಟೆಲ್‌ಗಳಿದ್ದರೂ, ಕಾರಿನಲ್ಲಿ ಬಂದು ಇಲ್ಲಿ ಊಟ ಮಾಡುತ್ತಾರೆ. ಅದಕ್ಕೆ ಮೂಲ ಕಾರಣ ನಮ್ಮ ಅಡುಗೆಯ ರುಚಿ.
– ಮಂಜುನಾಥ್, ಬ್ರಾಹ್ಮಿನ್ ಚಾಟ್ಸ್ ಮಾಲೀಕ