Advertisement

ಬ್ರಹ್ಮಾವರ: ರಸ್ತೆ ಅಪಘಾತದ ಗಾಯಾಳು ಸಾವು; 6 ಮಂದಿಗೆ ಅಂಗಾಂಗ ದಾನ ಪ್ರಯೋಜನ

02:19 AM Apr 06, 2022 | Team Udayavani |

ಉಡುಪಿ/ ಕೋಟ: ಬ್ರಹ್ಮಾವರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಅಂಗಾಂಗ ದಾನದಿಂದ 6 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ.

Advertisement

ಸಾಲಿಗ್ರಾಮದ ಶ್ರೀನಿವಾಸ (19) ಎಂಬವರು ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಬಳಿ ಎ. 2ರಂದು ಸಂಜೆ ವೇಳೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಶ್ರೀನಿವಾಸ್‌ ಅವರ ತಂದೆ ರಾಜು ನಾಯರಿ ಅವರು ಕಾರ್ಯ ಸಾಧ್ಯವಾದ ಅಂಗಗಳನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದರು. ಅದರಂತೆ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳು 6 ಜನರ ಜೀವ ಉಳಿಸಲು ಸಹಾಯವಾಯಿತು.

ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾಗಳು ಮತ್ತು ಎರಡು ಮೂತ್ರಪಿಂಡ ಮತ್ತು ಚರ್ಮವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಲಾಯಿತು. ಯಕೃತ್ತನ್ನು ಬೆಂಗಳೂರಿನ ಆಸ್ಟರ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ಇದನ್ನೂ ಓದಿ:ಡಾ| ಪ್ರಭಾಕರ ಭಟ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

Advertisement

ಪುನೀತ್‌ರಾಜ್‌ ಪ್ರೇರಣೆ
ಶ್ರೀನಿವಾಸ ಬಡ ಕುಟುಂಬದವರಾಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಹಿಂದೆ ಪುನೀತ್‌ರಾಜ್‌ ಕುಮಾರ್‌ ಸಾವನ್ನಪ್ಪಿದ ಸಂದರ್ಭ ನೇತ್ರ ದಾನ ನಡೆದಾಗ ಮುಂದೆ ತಾನು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಕಣ್ಣು, ಅಂಗಾಗಗಳನ್ನು ದಾನ ಮಾಡಬೇಕು ಎಂದು ಶ್ರೀನಿವಾಸ ತಮಾಷೆಯಾಗಿ ಮನೆಯಲ್ಲಿ ಹೇಳಿಕೊಂಡಿದ್ದ. ಅದೇ ರೀತಿ ಎ. 4ರಂದು ಅಪಘಾತದಿಂದ ಆತನ ಮಿದುಳು ನಿಷ್ಕ್ರಿàಯಗೊಂಡಾಗ ಆತನ ತಾಯಿ ಮಗನ ಇಚ್ಛೆಯನ್ನು ಕುಟುಂಬದವರಿಗೆ ತಿಳಿಸಿ ಅಂಗಾಗ ದಾನ ಮಾಡಲು ತಿಳಿಸಿದ್ದಾರೆ. ಬಡ ಕುಟುಂಬದ ಈ ರೀತಿಯ ಮಾನವೀಯ ಕಳಕಳಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಅಂಗದಾನ ಪುಣ್ಯದ ಕೆಲಸ. ನಮ್ಮ ಮಗ ಅಂಗದಾನ ಮಾಡಿ ಸಾರ್ಥಕ್ಯ ಮೆರೆದಿದ್ದಾನೆ.
-ರಾಜು ನಾಯರಿ, ಶ್ರೀನಿವಾಸ್‌ ಅವರ ತಂದೆ

ಅಂಗದಾನ ಶ್ರೇಷ್ಠ ಕಾರ್ಯ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು.
-ಡಾ| ಅವಿನಾಶ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಕೆಎಂಸಿ

Advertisement

Udayavani is now on Telegram. Click here to join our channel and stay updated with the latest news.

Next