ಶಿರ್ವ: ಮಂಗಳೂರು ವಿ.ವಿ. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ಪಡುಬೆಳ್ಳೆ ಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಗುರುನಡೆ ಗ್ರಾಮದೆಡೆ- ನಾರಾಯಣ ಗುರು ಶಿಕ್ಷಣ ಸಂದೇಶ ಅಭಿಯಾನ ಕಾರ್ಯಕ್ರಮವು ಜು. 14 ರಂದು ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮಾತನಾಡಿ ಆಧ್ಯಾತ್ಮದ ಮೂಲಕ ಆತ್ಮವಿಶ್ವಾಸವನ್ನು ತುಂಬಿ ಶೋಷಿತರ ಜೀವನದಲ್ಲಿ ದಾರಿದೀಪವಾಗಿ ಮನುಕುಲದ ಹಿತಕ್ಕಾಗಿಯೇ ಜೀವನ ಸವೆಸಿದ ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳು ಮನುಕುಲಕ್ಕೆ ಮಾದರಿ ಎಂದು ಹೇಳಿದರು.
ಮಂಗಳೂರು ವಿ.ವಿ. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಂಯೋಜಕ ಡಾ| ಗಣೇಶ್ ಅಮೀನ್ ಸಂಕಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ನಾರಾಯಣಗುರುಗಳ ತತ್ವ ಸಿದ್ಧಾಂತಗಳನ್ನು ವಿದ್ಯಾ ದೇಗುಲಗಳಲ್ಲಿ ಎಲ್ಲಾ ಜಾತಿ,ಜನಾಂಗದ ವಿದ್ಯಾರ್ಥಿಗಳಿಗೆ ಕಲಿಸಿದಲ್ಲಿ ಸಮಾಜಕ್ಕೆ ಒಳಿತಾಗಿ ವಿಶ್ವವ್ಯಾಪಿಯಾಗಿತ್ತದೆ ಎನ್ನುವ ದೃಷ್ಟಿಯಿಂದ ಮಂಗಳೂರು ವಿವಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವು ನಾರಾಯಣಗುರು ಶಿಕ್ಷಣ ಸಂದೇಶ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.
ಪಡುಬೆಳ್ಳೆ ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಸಂಚಾಲಕ ಧನಂಜಯ ಶಾಂತಿ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳ ಬಗ್ಗೆ ಉಪನ್ಯಾಸ ನೀಡಿದರು. ಮಾಜಿ ತಾ.ಪಂ. ಸದಸ್ಯೆ ಗೀತಾ ವಾಗ್ಲೆ,ಪಡುಬೆಳ್ಳೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಘು ಪೂಜಾರಿ ವೇದಿಕೆಯಲ್ಲಿದ್ದರು.
ಸುರತ್ಕಲ್‌ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಜಯಂತಿ ಸಂಕಮಾರ್, ಶಿಕ್ಷಕ,ಶಿಕ್ಷಕೇತರ ವೃಂದ,ಶಿಕ್ಷಕ-ರಕ್ಷಕ ಸಂಘದ ಸದಸ್ಯರು,ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಜಿನರಾಜ ಸಿ. ಸಾಲಿಯಾನ್‌ಸ್ವಾಗತಿಸಿದರು. ಶಿಕ್ಷಕಿಸಂಗೀತಾ ಕಾರ್ಯಕ್ರಮ ನಿರೂಪಿಸಿ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ.ಎಸ್ ವಂದಿಸಿದರು.