Advertisement

“ಹಿಂ. ವರ್ಗದ ಅಭಿವೃದ್ಧಿಗೆ ಗುರುಗಳ ಹೆಸರಿನ ನಿಗಮ’

12:58 AM Sep 14, 2019 | Team Udayavani |

ಮಂಗಳೂರು: ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿಯಾಗುವ ಮೂಲಕ ಸಾಮಾಜಿಕ ಸಮಾನತೆಗಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮಾದರಿ ಕಾರ್ಯಗಳನ್ನು ನಡೆಸಿದ್ದಾರೆ. ಅವರದೇ ನೆನಪಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ನಿಗಮ ರಚಿಸುವ ಕುರಿತು ಸಿಎಂ ಜತೆಗೆ ಚರ್ಚಿಸಲಾಗು ವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಕಾರದೊಂದಿಗೆ ಶ್ರೀ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನ್‌ ಪುರುಷ ನಾರಾಯಣ ಗುರುಗಳ ಜನ್ಮದಿನಾಚರಣೆಯ ರಾಜ್ಯ ಮಟ್ಟದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಆ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿಯವರಲ್ಲಿ ನಿಗಮ ಸ್ಥಾಪನೆಗೆ ಒತ್ತಾಯ ಮಾಡಲಾಗುವುದು ಎಂದರು.

ಶಾಸಕ ಯು.ಟಿ. ಖಾದರ್‌ ಮಾತನಾಡಿ, ನಾರಾಯಣ ಗುರು
ಗಳು ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಸಮಾನತೆಯ ಕ್ರಾಂತಿ ಮಾಡಿದ ಈ ಮಹಾನ್‌ ಪುರುಷನ ಜಯಂತಿ ಒಂದು ಉತ್ಸವವಾಗಿ ನಡೆಯಬೇಕಾಗಿದೆ ಎಂದರು.

ಪಠ್ಯಪುಸ್ತಕದಲ್ಲಿ ಗುರುಗಳ ವಿಚಾರ ಉಪನ್ಯಾಸ ನೀಡಿದ ನಾರಾಯಣ ಗುರು ಪ.ಪೂ. ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ಗುರುಗಳ ಚಿಂತನೆ ಬಗ್ಗೆ ಹೆಚ್ಚು ಅಧ್ಯಯನ ಆಗಬೇಕಾಗಿದೆ. ಪಠ್ಯಪುಸ್ತಕದಲ್ಲಿ ಈ ಕುರಿತ ವಿಚಾರ ಸೇರಬೇಕಿದೆ ಎಂದರು. ಯುವವಾಹಿನಿ ಮಂಗಳೂರು ಘಟಕದ ಶ್ರೀ ಗುರು ಅಷ್ಟೋತ್ತರ ಶತನಾಮಾವಳಿ ಪುಸ್ತಕವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು.

ಅಪರ ಜಿಲ್ಲಾಧಿಕಾರಿ ರೂಪಾ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ದೇವಸ್ಥಾನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಊರ್ಮಿಳಾ ರಮೇಶ್‌ ಕುಮಾರ್‌, ದ.ಕ. ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕಲ್ಕೂರ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್‌ ಜಿ. ಉಪಸ್ಥಿತರಿದ್ದರು. ಲಕ್ಷ್ಮೀಶ್‌ ಸುವರ್ಣ ನಿರೂಪಿಸಿದರು.

Advertisement

“ಗುರುಗಳ ಸಂದೇಶ ಆದರ್ಶ’
ಕಟಪಾಡಿ: ಇಲ್ಲಿನ ಶ್ರೀ ವಿಶ್ವನಾಥ ಕ್ಷೇತ್ರದ ಜಿಲ್ಲಾ ಬಿಲ್ಲವ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿ. ಪಂ. ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಶುಕ್ರವಾರ ಹಮ್ಮಿ ಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ನಾರಾಯಣ ಗುರುಗಳ ಸಂದೇಶ ಜಾಗತಿಕವಾಗಿ ಅತ್ಯಂತ ಪ್ರಸ್ತುತ. ಇಡೀ ಪ್ರಪಂಚ ಒಂದೇ ಕುಟುಂಬದಂತೆ ಶಾಂತಿ, ಸಮಾನತೆ, ಸಹಬಾಳ್ವೆಯಿಂದ ಬದುಕಬೇಕೆಂದು ಗುರುಗಳು ಬಯಸಿದ್ದರು. ಅವರು ಜಗತ್ತಿಗೇ ಸಾರಿದ ಸಮಾನತೆಯ ಸಂದೇಶ ನಮಗೆಲ್ಲರಿಗೂ ಆದರ್ಶ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next