ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದಿರುವ ಮೀಸಲಾತಿ ವಂಚಿತ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿಯನ್ನು ರಾಜ್ಯದಲ್ಲಿ ಕೂಡಲೇ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಸಂಘದ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಡು ಬಡವರಿಗೆ ಶೇ.10 ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿ ಬಹುದಿನಗಳೇ ಕಳೆದಿವೆ. ಆದರೆ, ರಾಜ್ಯದಲ್ಲಿ ಇನ್ನೂ ಈ ಆದೇಶ ಅನುಷ್ಠಾನಗೊಂಡಿಲ್ಲ. ಕೇಂದ್ರ ಸರ್ಕಾರದ ಆದೇಶದಂತೆ ಮೀಸಲಾತಿ ಜಾರಿಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಾಯಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ತೆರೆಕಂಡಿರುವ “ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದೆ. ಆದ್ದರಿಂದ ಸಮುದಾಯಕ್ಕೆ ನೋವು ಮಾಡುವಂತೆ ಆಗಿದ್ದು, ಕೂಡಲೇ ಚಿತ್ರದ ನಿರ್ಮಾಪಕ ನಿರ್ದೇಶಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಸಿನಿಮಾದಲ್ಲಿರುವ ಅವಹೇಳನಕಾರಿ ದೃಶ್ಯ ಮತ್ತು ಸಂಭಾಷಣೆಗಳನ್ನು ಚಿತ್ರದಿಂದ ತೆಗೆದುಹಾಕಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿರುವ ಸ್ಮಶಾನ ಭೂಮಿಯಲ್ಲಿ ಕೆಲ ಕಿಡಿಗೇಡಿಗಳು ಶವ ಸಂಸ್ಕಾರಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬ್ರಾಹ್ಮಣ ಸಮುದಾಯುದವರು ಮಾತ್ರವಲ್ಲದೇ ಅನೇಕ ಸಮುದಾಯದವರೂ ಶವ ಸಂಸ್ಕಾರ ನೆರವೇರಿಸುತ್ತಿದ್ದಾರೆ. ಶವ ಸಂಸ್ಕಾರದ ಸಮಯದಲ್ಲಿ ಅವಾಚ್ಯ ಶಬ್ದಗಳಿಂದ ಬೈಯುವುದು ಮತ್ತು ಕಲ್ಲು ತೂರಾಟ ಮಾಡುವ ಮಾಡುತ್ತಿದ್ದಾರೆ ಎಂದು ದೂರಿದರು.
ಸ್ಮಶಾನ ಭೂಮಿಯಲ್ಲಿ ವಿದ್ಯುತ್ ಚಿತಾಗಾರ ಅಳವಡಿಸಲಾಗಿದ್ದು, ಈ ಚಿತಾಗಾರ ಕೆಟ್ಟು ನಿಂತಾಗ ಎಲ್ಲರೂ ಪರ್ಯಾಯವಾಗಿ ಕಟ್ಟಿಗೆಗಳಿಂದ ಶವ ದಹನ ಮಾಡುತ್ತಾರೆ. ಕಿಡಿಗೇಡಿಗಳ ಹಾವಳಿ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಬಿಹಾರದ ಬೆಗುಸರಾಯ್‌ನಲ್ಲಿ ಪಂಡಿತ ಬ್ರಾಹ್ಮಣ ಸಮುದಾಯದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆದಿದ್ದು , ಈ ಪ್ರಕರಣದ ಆರೋಪಿಗಳ ವಿರುದ್ದ ಕಠಿಣ
ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಪ್ರತಿಭಟನಾಕಾರರು ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಶ್ರೀಪಾದ ಜೋಶಿ, ಶಾಮರಾವ ಕುಲಕರ್ಣಿ, ಪ್ರಸಾದ್ ಎಚ್., ಜಯತೀರ್ಥ, ಕೃಷ್ಣಾಜಿ ಕುಲಕರ್ಣಿ, ನವಲಿ ಕೃಷ್ಣಾಚಾರ್ಯ, ಉದಯ ಪಾಟೀಲ, ರಾಘವೇಂದ್ರ ಕುಲಕರ್ಣಿ, ಪ್ರಹ್ಲಾದ ಬಿ.ಕೆ., ಮದನ ಕುಲಕರ್ಣಿ, ಚಂದ್ರಿಕಾ, ಸರೋಜಿನಿ, ಸುಲೋಚನಾ, ರಾಧಾ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.