Advertisement
ದೇವಸ್ಥಾನದ ಒಳಗೆ ಬ್ರಹ್ಮಕಲಶೋತ್ಸವದ ವೈದಿಕ ವಿಧಿ ವಿಧಾನಗಳು ನಡೆಯುವುದರಿಂದ ಬೆಳಗ್ಗೆ 10 ಗಂಟೆಯ ವರೆಗೆ ಭಕ್ತರಿಗೆ ದೇಗುಲ ಪ್ರವೇಶಾವಕಾಶ ಇರುವುದಿಲ್ಲ. ಸಂಜೆ 5.30ರಿಂದ 8.30ರ ತನಕವೂ ಭಕ್ತರ ದೇಗುಲ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
Related Articles
ಮಾ. 13ರಂದು ಮುಂಜಾನೆ 4ರಿಂದಲೇ ವೈದಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಬಳಿಕ ಬೆಳಗ್ಗೆ 7.40ರಿಂದ 8.10ರ ಮೀನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ. 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ನಡೆಯಲಿದೆ. ಬ್ರಹ್ಮಕಲಶೋತ್ಸವದ ಪವಿತ್ರ ಅನ್ನಪ್ರಸಾದ ವಿತರಣೆ ಮಧ್ಯಾಹ್ನ 12.30ರಿಂದ ಆರಂಭವಾಗುತ್ತದೆ.
Advertisement
ಕ್ಷೇತ್ರದ ತಂತ್ರಿಗಳಾದ ವೇ|ಮೂ| ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪೊಳಲಿ ರಾಜರಾಜೇಶ್ವರೀ ದೇವಿಗೆ 501 ಕಲಶಾಭಿಷೇಕ, ದುರ್ಗಾಪರಮೇಶ್ವರೀ ದೇವಿಗೆ 501 ಕಲಶಾಭಿಷೇಕ ಹಾಗೂ ಪರಿವಾರ ದೇವರುಗಳಿಗೆ 108 ಕಲಶಗಳ ಅಭಿಷೇಕ ನಡೆಯಲಿದೆ. ಭಕ್ತರಿಗೆ ನಿರಂತರ ಊಟೋಪಚಾರದ ವ್ಯವಸ್ಥೆ ಇದೆ. ಬ್ರಹ್ಮಕಲಶಾಭಿಷೇಕದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಬಸ್ಸಿನ ವ್ಯವಸ್ಥೆ ಯನ್ನೂ ಕಲ್ಪಿಸಲಾಗಿದೆ.
ಅರ್ಧ ಶತಮಾನದ ಬಳಿಕ ಮಗೃಂತಾಯಿ ನೇಮರಾತ್ರಿ ಶ್ರೀ ಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು ದೈವಗಳ ನೇಮ ನಡೆಯಲಿದೆ. ಜತೆಗೆ ಅರ್ಧ ಶತಮಾನಕ್ಕೂ ಅಧಿಕ ಕಾಲದ ಬಳಿಕ ಇದೇ ಮೊದಲ ಬಾರಿಗೆ ನಡೆಯುವ ಮಗೃಂತಾಯಿ ದೈವದ ನೇಮವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ದಿನವಿಡೀ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 5 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಬ್ರಹ್ಮಕಲಶಾಭಿಷೇಕದ ಯಶಸ್ಸಿಗೆ ದುಡಿಯಲಿದ್ದು, ಎಷ್ಟೇ ಭಕ್ತರು ಆಗಮಿಸಿದರೂ ಅವರಿಗೆ ವ್ಯವಸ್ಥೆಗಳನ್ನು ಕಲ್ಪಿಸಲು ಕ್ಷೇತ್ರ ಸರ್ವಸನ್ನದ್ಧವಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ. ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನೂ ಅಚ್ಚಕಟ್ಟು ಗೊಳಿಸಲಾಗಿದ್ದು, 22 ಎಕರೆಗೂ ಅಧಿಕ ವಿಸ್ತೀರ್ಣದಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ.