ಸುಬ್ರಹ್ಮಣ್ಯ: ಐತಿಹಾಸಿಕ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಗುರುವಾರ ಬೆಳಗ್ಗೆ 11.04ರ ಕುಂಭ ಲಗ್ನದಲ್ಲಿ ಶ್ರೀಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ಅನುಗ್ರಹ ಹಾಗೂ ಸಮ್ಮುಖದಲ್ಲಿ ಶ್ರೀ ವಿಧುಶೇಖರ ಭಾರತೀ ಶ್ರೀಗಳು ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಸಿದರು.
ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಶಾಂತಿ-ಪ್ರಾಯಶ್ಚಿತ್ತಾದಿ ಕಲಶಾಭಿಷೇಕ ನಡೆದ ಬಳಿಕ ಶ್ರೀಶೃಂಗೇರಿ ಶಾರದಾಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಶ್ರೀಗಳು ಆಗಮಿಸಿದರು. 11.04ರ ಕುಂಭ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಸಲಾಯಿತು. ಅನಂತರ ಶ್ರೀ ದೇವರಿಗೆ ಮಂಗಳಾರತಿ, ಮಹಾಪೂಜೆ ನಡೆಯಿತು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರ್ಗುಡಿ ಸದಾನಂದ ರೈ, ಗೌರವಾಧ್ಯಕ್ಷ ಲಿಂಗಪ್ಪ ಗೌಡ ಕಟ್ಟ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ, ಪ್ರಧಾನ ಅರ್ಚಕ ಶ್ರೀವತ್ಸ ಎಂ.ವಿ., ಜಗದ್ಗುರುಗಳ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಮಂಜುನಾಥ ಎಂ.ವಿ., ಶ್ರೀ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಮುರಳಿ ಕಾಮತ್ ಬಳ್ಪ, ಸಂಘಟನ ಕಾರ್ಯದರ್ಶಿ ವಿಶ್ವನಾಥ ರೈ ಅರ್ಗುಡಿ, ಜಗದ್ಗುರುಗಳ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕರುಣ್ ರಾವ್ ಬೆಳ್ಳೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀಕೃಷ್ಣ ಭಟ್ ಪಠೊಳಿ, ಪ್ರಧಾನ ಸಂಚಾಲಕ ಎನ್.ಕೆ. ಜಗನ್ನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಪಾದುಕಾ ಪೂಜೆ
ಬೆಳಗ್ಗೆ ದೇವಸ್ಥಾನದ ಭಾರತೀ ಸಭಾಭವನದಲ್ಲಿ ಶ್ರೀಗುರು ಪಾದುಕಾ ಪೂಜೆ, ಸೇರಿದಂತೆ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅನುಗ್ರಹ ಹಾಗೂ ಸಮ್ಮುಖದಲ್ಲಿ ಶ್ರೀ ವಿಧುಶೇಖರ ಭಾರತೀ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಭಕ್ತರು ಪಡೆದರು.