ಮಡಿಕೇರಿ: ಭಾರಿ ಮಳೆಯಿಂದಾಗಿ ಜಿಲ್ಲೆಯ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿದು ಆಗಿರುವ ಅನಾಹುತದ ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ಆಗಮಿಸಿದ್ದರೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಸಂಜೆ ಮೂರು ಗಂಟೆಯ ನಂತರ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ.
ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಸೋದರ ಆನಂದತೀರ್ಥ ಅವರ ಮೃತ ದೇಹ ಪತ್ತೆಯಾಗಿದೆ.
ಭಾಗಮಂಡಲದಲ್ಲಿ ಪ್ರವಾಹ ಉಂಟಾಗಿದ್ದು, ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಜೆಸಿಬಿ ಹಿಟಾಟಿ ಯಂತ್ರಗಳಿಗೆ ಘಟನಾ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಗುರುವಾರ ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ತಲಕಾವೇರಿ ಅರ್ಚಕ ನಾರಾಯಣ ಆಚಾರ್ಯ ಮತ್ತು ಅವರ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದರು. ಇನ್ನೂ ಅವರ ಪತ್ತೆಯಾಗಿಲ್ಲ. ಶುಕ್ರವಾರವೂ ಮಳೆಯ ಕಾರಣದಿಂದ ಕಾರ್ಯಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಅರ್ಚಕರ ಕುಟುಂಬ ಮಣ್ಣಿನಡಿ ಸಿಲುಕಿ ಎರಡು ದಿನಗಳ ಮೇಲಾಗಿದೆ. ಹೀಗಾಗಿ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಸ್ವಲ್ಪ ಮಳೆ ಕಡಿಮೆಯಾದ ಕಾರಣ ಕಾರ್ಯಾಚರಣೆ ನಡೆಸಲಾಯಿತು. ಆದರೆ ಮತ್ತೆ ಮಳೆ ಆರಂಭವಾಗಿ ಅಡ್ಡಿಯಾಯಿತು. ನಾಪತ್ತೆಯಾಗಿದ್ದ ಕೆಲವು ಜಾನುವಾರುಗಳ ಕಳೆಬರ ಇಂದು ಪತ್ತೆಯಾಗಿದೆ.
ಸಚಿವ ಸೋಮಣ್ಣ ಸಭೆ
ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, ಸಂಪೂರ್ಣ ಮಾಹಿತಿ ಪಡೆದಿದ್ದಾರೆ, ಮುಖ್ಯಮಂತ್ರಿಗಳು ಕೂಡ ತಲಕಾವೇರಿ ಬೆಟ್ಟ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಿಹಾರ ಕಾರ್ಯವನ್ನು ಆರಂಭಿಸಲೇ ಬೇಕು ಎಂದು ಸಿಎಂ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.