“ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್ ಆದ ನಂತರ ಸಿನಿಮಾ ಸಕ್ಸಸ್ ಆಗಿದೆ ಅಂಥ ಸಕ್ಸಸ್ ಮೀಟ್ ಮಾಡಿರಲಿಲ್ಲ. ಇದೇ ಮೊದಲ ಸಲ “ಬ್ರಹ್ಮಚಾರಿ’ ಸಿನಿಮಾ ಸಕ್ಸಸ್ ಆಗಿದೆ ಅಂಥ ಸಕ್ಸಸ್ ಮೀಟ್ ಮಾಡ್ತಿರೋದು. ಹಾಗಾಗಿ ನನಗೆ ತುಂಬ ಖುಷಿಯಾಗ್ತಿದೆ…’- ಹೀಗೆ ಹೇಳುತ್ತಾ ಮಾತಿಗಿಳಿದವರು ನಟ ನೀನಾಸಂ ಸತೀಶ್.
ಇತ್ತೀಚೆಗಷ್ಟೆ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಬ್ರಹ್ಮಚಾರಿ’ ಚಿತ್ರ ತೆರೆಗೆ ಬಂದಿತ್ತು. ರೊಮ್ಯಾಂಟಿಕ್ ಕಾಮಿಡಿ ಕಥಾ ಹಂದರದ “ಬ್ರಹ್ಮಚಾರಿ’ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತ, ಬಾಕ್ಸಾಫೀಸ್ ಗಳಿಕೆಯಲ್ಲೂ ಏರಿಕೆ ಕಾಣುತ್ತಿದೆ. ಇದೇ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಇದೇ ವೇಳೆ ಮಾತಿಗಿಳಿದ ನೀನಾಸಂ ಸತೀಶ್ “ಬ್ರಹ್ಮಚಾರಿ’ ಕೊಟ್ಟ ಗೆಲುವಿನ ಖುಷಿಯ ಬಗ್ಗೆ ಒಂದಷ್ಟು ಮಾತನಾಡಿದರು.
“ಇವತ್ತು ಒಂದು ಸಿನಿಮಾ ಜನಕ್ಕೆ ಆಗೋದು ತುಂಬ ಕಷ್ಟ.ಅಂಥದ್ರಲ್ಲಿ ನಾವು ಕಷ್ಟಪಟ್ಟು ಮಾಡಿದ ಸಿನಿಮಾ ಜನಕ್ಕೆ ಇಷ್ಟ ಆಗ್ತಿದೆ ಅಂದ್ರೆ ಅದಕ್ಕಿಂತ ಖುಷಿ ಬೇರೊಂದಿಲ್ಲ. ಎಲ್ಲ ಕಡೆ “ಬ್ರಹ್ಮಚಾರಿ’ ಸಿನಿಮಾ ನೋಡಿದ ಆಡಿಯನ್ಸ್ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಎಲ್ಲ ವರ್ಗದ ಆಡಿಯನ್ಸ್‌ಗೂ ಸಿನಿಮಾ ಇಷ್ಟವಾಗ್ತಿದೆ. ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಒಳ್ಳೆಯ ಕಲೆಕ್ಷನ್ಸ್ ಬರುತ್ತಿದೆ. ಇಡೀ ಚಿತ್ರತಂಡ ಖುಷಿಯಾಗಿದೆ. ಎಲ್ಲರ ಸಹಕಾರದಿಂದ “ಬ್ರಹ್ಮಚಾರಿ’ ಗೆಲ್ಲೋದಕ್ಕೆ ಸಾಧ್ಯವಾಯ್ತು. ಚಿತ್ರದ ಗೆಲುವಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು’ ಎಂದರು.
ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ನಿರ್ಮಾಪಕ ಉದಯ್ ಮೆಹ್ತಾ, “ಸಿನಿಮಾವನ್ನು ಸುಮಾರು 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ರಿಲೀಸ್ ಮಾಡಲಾಗಿತ್ತು. ರಿಲೀಸ್ ಆದ ಎಲ್ಲ ಕೇಂದ್ರಗಳಲ್ಲೂ, ಆಡಿಯನ್ಸ್ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. “ಬ್ರಹ್ಮಚಾರಿ’ಗೆ ಹಾಕಿದ ಬಂಡವಾಳ ವಾಪಾಸ್ ಬಂದಿದ್ದು, ಕಲೆಕ್ಷನ್ ಚೆನ್ನಾಗಿದೆ. ಇನ್ನಷ್ಟು ಕೇಂದ್ರಗಳಲ್ಲಿ ಸಿನಿಮಾ ರಿಲೀಸ್ ಮಾಡುವಂತೆ ಬೇಡಿಕೆ ಬರುತ್ತಿದೆ. ಒಟ್ಟಿನಲ್ಲಿ ಒಂದೊಳ್ಳೆ ಸಿನಿಮಾವನ್ನು ಆಡಿಯನ್ಸ್ ಒಳ್ಳೆಯ ರೀತಿ ಸ್ವೀಕರಿಸಿ, ನಮಗೆ ಸಕ್ಸಸ್ ತಂದು ಕೊಟ್ಟಿದ್ದಾರೆ’ ಎಂದರು.
ಇದೇ ವೇಳೆ ನಾಯಕ ನಟಿ ಅದಿತಿ ಪ್ರಭುದೇವ, “”ಬ್ರಹ್ಮಚಾರಿ’ಯನ್ನು ನೋಡಿದವರು ತುಂಬ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ಖುಷಿ ತಂದಿದೆ. ಒಂದೊಳ್ಳೆ ಟೀಮ್ ಜೊತೆ ಒಳ್ಳೆಯ ಸಿನಿಮಾ ಮಾಡಿದಕ್ಕೆ ಖುಷಿಯಿದೆ’ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.
ವೇದಿಕೆ ಮೇಲೆ ಹಾಜರಿದ್ದ ನಿರ್ದೇಶಕ ಚಂದ್ರ ಮೋಹನ್, ಸಂಕಲನಕಾರ ಅರ್ಜುನ್ ಕಿಟ್ಟು ಸೇರಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರದ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡರು. “ಬ್ರಹ್ಮಚಾರಿ’ ಯಶಸ್ವಿ ಪ್ರದರ್ಶನದ ಪ್ರಯುಕ್ತ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ ಕೇಕ್ ಕತ್ತರಿಸಿದ ಚಿತ್ರತಂಡ, ಸಂಭ್ರಮಿಸಿತು.