Advertisement

ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ: ಥೀಂ ಪಾರ್ಕ್‌ ಮಾದರಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ

10:11 PM Jan 02, 2020 | mahesh |

ಮಹಾನಗರ: ಆಧುನಿಕ ಭಾರತದ ನವನಿರ್ಮಾತೃ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನೂತನ ಅಧ್ಯಯನ ಪೀಠವು ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದ್ದು, ಈಗ ಥೀಂ ಪಾರ್ಕ್‌ ಮಾದರಿಯ ವಿವಿಧ ವಿಭಾಗಗಳ ಸ್ವಂತ ಕಟ್ಟಡ ವನ್ನು ಅಧ್ಯಯನ ಪೀಠಕ್ಕಾಗಿ ನಿರ್ಮಿಸಲು ಎಲ್ಲ ಸಿದ್ಧತೆ ನಡೆಸಲಾಗಿದೆ.

Advertisement

ಬ್ರಹ್ಮ ಶ್ರೀ ನಾರಾಯಣಗುರುಗಳ ಸಾಮಾಜಿಕ ಸುಧಾರಣಾ ತಣ್ತೀ ಸಂದೇಶಗಳು, ಕಾರ್ಯವಿಧಾನ, ಕೊಡುಗೆಗಳು, ಸಾಧನೆಗಳ ಮಹತ್ವವನ್ನು ಇಂದಿನ ಮತ್ತು ಮುಂದಿನ ಸಮುದಾಯಕ್ಕೆ ಪಸರಿ ಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವನ್ನು 2017ರಲ್ಲಿ ಸ್ಥಾಪಿಸಲಾಗಿದೆ.

ನಾರಾಯಣಗುರುಗಳ ಕುರಿತಾಗಿ ವಿಸ್ತಾರ ಅಧ್ಯಯನ ಪ್ರಸರಣ ಮತ್ತು ಅದನ್ನೊಂದು ಶೈಕ್ಷಣಿಕ, ಸಮಾಜಮುಖಿಯಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಸಲಹಾ ಸಮಿತಿಯ ಶಿಫಾರಸಿನಂತೆ ಥೀಂ ಪಾರ್ಕ್‌ ಮಾದರಿಯ ವಿವಿಧ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಇದಕ್ಕಾಗಿ ಮಂಗಳೂರು ವಿ.ವಿ. ಮುಖ್ಯದ್ವಾರ ಕ್ಕಿಂತ ಮುಂದೆ ಕೆ.ಪಿ.ಎ. ಕಟ್ಟಡದ ಬಳಿಯಲ್ಲಿ ನಿವೇಶನ ಗೊತ್ತುಪಡಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕೆ ಒಟ್ಟು 5 ಕೋ.ರೂ.ಗಳ ಅಂದಾಜು ವೆಚ್ಚ ನಿರೀಕ್ಷಿಸಲಾಗಿದ್ದು, ಸದ್ಯ 3.15 ಕೋಟಿ ರೂ. ಮೊತ್ತದ ಅಂದಾಜುಪಟ್ಟಿ ಮತ್ತು ನೀಲನಕಾಶೆ ಸಿದ್ಧಗೊಂಡಿದೆ. ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಮಂಜೂರು ಮಾಡಿರುವ 50 ಲಕ್ಷ ರೂ. ಅನುದಾನದಿಂದ ಈಗ ಕಾಮಗಾರಿ ಆರಂಭಿಸಲು ನಿರ್ಧರಿಸಲಾಗಿದ್ದು, ಉಳಿದ ಮೊತ್ತ ಸರಕಾರ ಹಾಗೂ ಇತರ ಮೂಲಗಳಿಂದ ದೊರೆಯುವ ನಿರೀಕ್ಷೆಯಿದೆ. ಜ. 12ರಂದು ನಿಯೋಜಿತ ಕಟ್ಟಡದ ಶಿಲಾನ್ಯಾಸ ನಡೆಸಲು ಸಿದ್ಧತೆ ನಡೆಸಲಾಗಿದೆ.

ವಿ.ವಿ. ನಿಗದಿಪಡಿಸಿದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ತಜ್ಞ ಕಟ್ಟಡ ವಿನ್ಯಾಸಕಾರ ಸಂತೋಷ್‌ ಕುಮಾರ್‌ ತುಂಬೆ ನೀಲನಕಾಶೆ ಸಿದ್ಧಪಡಿಸಿದ್ದು, ವಿ.ವಿ.ಯ ಎಂಜಿನಿಯರಿಂಗ್‌ ವಿಭಾಗದ ನೇತೃತ್ವದಲ್ಲಿ ಕಟ್ಟಡ ಕಾಮಗಾರಿ ನಡೆಯಲಿದೆ. 90×80 ಚದರಡಿ ವಿಸ್ತೀರ್ಣದ ಎರಡು ಅಂತಸ್ತುಗಳ ಕಟ್ಟಡ ನಿರ್ಮಿಸಿ, ನಡುವಿನ ಅಂಗಣದಲ್ಲಿ ನಾರಾಯಣಗುರುಗಳ ನಿಂತ ಭಂಗಿಯ ಶಿಲಾ ಪ್ರತಿಮೆ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.

Advertisement

ವಿದ್ಯಾರ್ಥಿಗಳಿಗೆ ನಾರಾಯಣಗುರುಗಳ ಬಗ್ಗೆ ಅಧ್ಯಯನಕ್ಕೆ ಪೂರಕವಾಗುವ ಗುರುಗಳ ಜೀವನ, ಕೆಲಸ ಮತ್ತು ಸಾಧನೆಗಳ ಕುರಿತು ಅಂತಾರಾಷ್ಟ್ರೀಯ ಗುಣಮಟ್ಟದ ಸಮಗ್ರ ದಾಖಲೆಗಳು, ಜ್ಞಾನ ಮಂದಿರ, ಧ್ಯಾನ ಕೇಂದ್ರ, ವಸ್ತು ಸಂಗ್ರಹಾಲಯ, ಆಕರ್ಷಕ ಸೆಮಿನಾರ್‌ ಸಭಾಂಗಣ, ಸಂಶೋಧನ ವಿಭಾಗ, ಗ್ರಂಥಾಲಯ, ಫೋಟೋಗಳು, ವರ್ಣ ಚಿತ್ರಗಳು, ಚಲನಚಿತ್ರಗಳು, ಕಚೇರಿ, ಗುರುಗಳ ಶಿಲಾ ಪ್ರತಿಮೆ ಸಹಿತ ಅಧ್ಯಯನಕ್ಕೆ ಪೂರಕ ವಾಗುವ ಸವಲತ್ತುಗಳು ಇರಲಿದೆ ಎನ್ನುತ್ತಾರೆ ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ.

ಸ್ವಂತ ಕಟ್ಟಡದ ಉದ್ದೇಶ
ಮಂಗಳೂರು ವಿ.ವಿ. ಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠಕ್ಕೆ ನೂತನ ಕಟ್ಟಡ ನಿರ್ಮಿಸಲು ಈಗ ನಿರ್ಧರಿಸಲಾಗಿದೆ. ಶ್ರೀ ನಾರಾಯಣ ಗುರುಗಳ ಕುರಿತಾದ ವಿಸ್ತಾರ ಅಧ್ಯಯನ ಪ್ರಸರಣಕ್ಕೆ ಸ್ವಂತ ಕಟ್ಟಡವು ವಿಶೇಷ ಒತ್ತು ನೀಡುವ ಆಶಯ ಹೊಂದಲಾಗಿದೆ.
 - ಪ್ರೊ| ಪಿ.ಎಸ್‌. ಎಡಪಡಿತ್ತಾಯ, ಉಪಕುಲಪತಿ, ಮಂಗಳೂರು ವಿ.ವಿ.

ಜ.12ರಂದು ಶಿಲಾನ್ಯಾಸ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಾರಾಯಣಗುರು ಅಧ್ಯಯನ ಪೀಠ 2017ರಲ್ಲಿ ಆರಂಭವಾಗಿದೆ. ಪ್ರಸ್ತುತ ಅಧ್ಯಯನ ಪೀಠ ನೀಲನಕಾಶೆ ತಯಾರಾಗಿದ್ದು, ಜ.12ರಂದು ಶಿಲಾನ್ಯಾಸ ನಡೆಸಲು ತೀರ್ಮಾನಿಸಲಾಗಿದೆ. ಥೀಮ್‌ ಪಾರ್ಕ್‌ ಮಾದರಿಯಲ್ಲಿ ಈ ಅಧ್ಯಯನ ಪೀಠ ಕಟ್ಟಡ ರೂಪುಗೊಳ್ಳಲಿದೆ.
 - ಮುದ್ದು ಮೂಡುಬೆಳ್ಳೆ, ನಿರ್ದೇಶಕರು, ಬ್ರಹ್ಮಶ್ರೀನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿವಿ.

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next