Advertisement

ಕುಕ್ಕೆ ಪ್ರವೇಶಿಸಿತು ನೂತನ ಬ್ರಹ್ಮರಥ

10:37 PM Oct 02, 2019 | mahesh |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಲುಪಿದ ಬ್ರಹ್ಮರಥವನ್ನು ಬುಧವಾರ ಭಕ್ತಿ, ಭಾವಗಳೊಂದಿಗೆ ಸ್ವಾಗತಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರ ಭಕ್ತರು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡರು.

Advertisement

ಕಡಬ ಮಾರ್ಗವಾಗಿ ಕೈಕಂಬಕ್ಕೆ 5 ಗಂಟೆಗೆ ಬ್ರಹ್ಮರಥ ಮೆರವಣಿಗೆ ತಲುಪಿತು. ಸ್ಥಳೀಯ ಸಂಘಟನೆಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯೆಯರು, ನಾಗರಿಕರು ಪೂರ್ಣಕುಂಭ ಸ್ವಾಗತ, ಪುಷ್ಪಾರ್ಚನೆ ನಡೆಸಿ ಬರ ಮಾಡಿಕೊಂಡರು. ಅಲ್ಲಿಂದ ವಾಹನಗಳ ಮೂಲಕ ರಥ ಮೆರವಣಿಗೆ ಕುಲ್ಕುಂದ ತಲುಪಿತು. ಬ್ರಹ್ಮರಥಕ್ಕೆ ಅಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ತೆಂಗಿನಕಾಯಿ ಒಡೆದು ಪುಷ್ಪಾರ್ಚನೆ ನಡೆಯಿತು. ಸಹಸ್ರಾರು ಭಕ್ತರ ಸಮ್ಮುಖ ಕಾಲ್ನಡಿಗೆಯ ಮೆರವಣಿಗೆ ಸುಬ್ರಹ್ಮಣ್ಯದ ಕಡೆಗೆ ಹೊರ ಟಿತು. ಮಂಗಲ ಮಂತ್ರ ಘೋಷ, ವಾಲಗ, ಕೊಂಬು ಇತ್ಯಾದಿಗಳಿದ್ದವು. ಕೆಎಸ್‌ಎಸ್‌ ಕಾಲೇಜು, ಎಸ್‌ಎಸ್‌ಪಿಯು ಕಾಲೇಜು, ಕುಮಾರ ಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಭಜನ ಮಂಡಳಿಗಳ ಸದಸ್ಯರಿದ್ದರು.

ಮನಸೆಳೆದ ಸ್ತಬ್ಧಚಿತ್ರ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಿಬಂದಿ, ಮಂಜುಶ್ರೀ ಕನ್‌ಸ್ಟ್ರಕ್ಷನ್‌ ಕುಂದಾಪುರ, ಅಖೀಲಾ ಭಾರತ ಅಯ್ಯಪ್ಪ ಸೇವಾ ಸಂಘ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸಾರ್ವಜನಿಕ ಶ್ರೀ ಕೃಷ್ಣಾಷ್ಟಮಿ ಉತ್ಸವ ಸಮಿತಿ, ಪಿಡಬ್ಲೂಡಿ ಗುತ್ತಿಗೆದಾರರು, ಆಟೋ ವರ್ಕ್ಸ್ ರೋಹಿತ್‌ ಮುಂತಾದವರ ಪ್ರಾಯೋಜಕತ್ವದಲ್ಲಿ ವಿವಿಧ ಕಥೆಗಳನ್ನು ಸಾರುವ ಸ್ತಬ್ಧಚಿತ್ರ ಮನಸೆಳೆಯಿತು. ಸುಬ್ರ ಹ್ಮಣ್ಯ ಗ್ರಾ.ಪಂ. ವತಿಯಿಂದ ಸ್ವತ್ಛತೆ ಜಾಗೃತಿಯ ಸ್ತಬ್ಧ ಚಿತ್ರ ಗಮನ ಸೆಳೆಯಿತು. ಕೇರಳದ ಚೆಂಡೆ, ಹುಲಿ ವೇಷ, ಗೊಂಬೆಕುಣಿತ, ಯಕ್ಷಗಾನ ವೇಷ, ಗೂಟದ ಮೇಲಿನ ನಡಿಗೆ ಸಹಿತ ವಿವಿಧ ವೇಷಭೂಷಣಗಳು ರಂಗು ತುಂಬಿದವು.

15 ಸಾವಿರಕ್ಕೂ ಮಿಕ್ಕಿದ ಭಕ್ತರು
15 ಸಾವಿರಕ್ಕೂ ಅಧಿಕ ಮಂದಿ ರಥ ಆಗಮನದ ವೈಭವ ವೀಕ್ಷಿಸಿದರು. ಭಕ್ತರು ರಸ್ತೆ ಇಕ್ಕೆಲ, ನಗರದ ಸುತ್ತಮುತ್ತ ಕಿಕ್ಕಿರಿದು ನೆರೆದಿದ್ದರು. ಸುಂದರ ಕಲಾಕೃತಿಯ ಮಹಾರಥದ ದರ್ಶನ ಪಡೆದ ಭಕ್ತರು ಪುಷ್ಪಾರ್ಚನೆ ಸಮರ್ಪಿಸಿದರು. ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಪಾನೀಯ ಹಾಗೂ ಸಿಹಿತಿಂಡಿ ಹಂಚಿದರು.

ಸೌಹಾರ್ದತೆಯ ಫ‌ಲಕ
ಬ್ರಹ್ಮರಥ ಸಾಗಿ ಬರುವ ರಸ್ತೆಯುದ್ದಕ್ಕೂ ಸಂಘ ಸಂಸ್ಥೆಗಳಿಂದ ಹಾಗೂ ವಯಕ್ತಿಕವಾಗಿ ಸ್ವಾಗತ ಬ್ಯಾನರ್‌ ಫ‌ಲಕಗಳನ್ನು ಹಾಕಲಾಗಿತ್ತು. ಜಾತಿ-ಮತ ಭೇದವಿಲ್ಲದೆ ಎಲ್ಲರೂ ರಥಕ್ಕೆ ಭಾವ ಪೂರ್ಣ ಸ್ವಾಗತ ಕೋರಿ ಬ್ಯಾನರ್‌ ಹಾಕಿದ್ದರು. ಹೊಸಮಠ ಹಾಗೂ ಕಡಬ ಸಹಿತ ಕೆಲವೆಡೆಗಳಲ್ಲಿ ಮುಸ್ಲಿಮರು ಸ್ವಾಗತ ಬ್ಯಾನರ್‌ ಹಾಕಿ ಧಾರ್ಮಿಕ ಸೌಹಾರ್ದತೆ ಮೆರೆದರು.

Advertisement

ಸ್ವಾಮೀಜಿ, ಶಾಸಕರ ದರ್ಶನ
ಬ್ರಹ್ಮರಥ ಕಡಬ ನಗರ ಪ್ರವೇಶಿಸಿದ ಸಂದರ್ಭ ಹಲವು ಗಣ್ಯರು ಸ್ವಾಗತ ಕೋರಿದರು. ಸುಳ್ಯ ಶಾಸಕ ಎಸ್‌. ಅಂಗಾರ ಅವರು ಕಡಬದಲ್ಲಿ ಉಪಸ್ಥಿತರಿದ್ದು, ಸ್ವಾಗತಿಸಿದರು. ದಾರಿ ಮಧ್ಯೆ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳು ಸ್ವಾಗತಿಸಿ ಪುಷ್ಪಾರ್ಚನೆ ನಡೆಸಿದರು. ಕೋಟೇಶ್ವರದಿಂದ ರಥವನ್ನು ಹೊತ್ತ ವಾಹನವು ಅಡೆತಡೆಯಿಲ್ಲದೆ ಮಾಣಿ ತನಕ ಸುಲಲಿತವಾಗಿ ಸಂಚರಿಸಿದೆ. ಮಾಣಿಯಿಂದ ಮುಂದಕ್ಕೆ ಸುಬ್ರಹ್ಮಣ್ಯ ತನಕದ ಹಲವೆಡೆ ಟ್ರಾಫಿಕ್‌ ಜಾಮ್‌ ಇತ್ಯಾದಿ ಸಮಸ್ಯೆಗಳು ಎದುರಾದವು. ಈ ಮಾರ್ಗದಲ್ಲಿ ರಥ ವಾಹನವು ನಿಧಾನಗತಿಯಲ್ಲಿ ಸಾಗಿಬಂತು. ಹೀಗಾಗಿ ರಥವು ಕುಲ್ಕುಂದ ತಲುಪುವಾಗ ವಿಳಂಬವಾಯಿತು. ರಥ ಸಂಚರಿಸಿದ ಕೊನೆಯ ದಿನ ಬುಧವಾರ ರಥ ಆಗಮಿಸುವ ಅವಧಿಯಲ್ಲಿ ಕಡಬ- ಸುಬ್ರಹ್ಮಣ್ಯ ಮಾರ್ಗವನ್ನು ಶೂನ್ಯ ವಾಹನ ರಸ್ತೆಯಾಗಿ ಮಾರ್ಪಾಡುಗೊಳಿಸಲಾಯಿತು. ಮಂಗಳ ವಾರ ಉಪ್ಪಿನಂಗಡಿ ಸಮೀಪದ ಪುಳಿತ್ತಡಿ ಎನ್ನುವಲ್ಲಿ ರಥ ಹೊತ್ತ ವಾಹನವು ತಾಂತ್ರಿಕ ತೊಂದರೆಗೆ ಒಳಗಾಯಿತು. ಬಳಿಕ ದುರಸ್ತಿಗೊಂಡು ರಥ ತಂಗಲಿರುವ ಬಲ್ಯ ತಲುಪುವಾಗ ತಡರಾತ್ರಿಯಾಗಿತ್ತು.

ಉದ್ಯಮಿ ಮುತ್ತಪ್ಪ ರೈ ಪತ್ನಿ ಅನುರಾಧಾ, ಉದ್ಯಮಿ ಅಜಿತ್‌ ಶೆಟ್ಟಿ, ಸ್ವಪ್ನಾ ಅಜಿತ್‌ ಶೆಟ್ಟಿ, ಕರುಣಾಕರ ರೈ ಶೆಟ್ಟಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌, ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ರಾಜೀವ್‌ ಆರ್‌. ರೈ, ರವೀಂದ್ರನಾಥ ಶೆಟ್ಟಿ, ಕೃಷ್ಣಮೂರ್ತಿ ಭಟ್‌, ಮಹೇಶ್‌ಕುಮಾರ್‌, ದಮಯಂತಿ ಕೂಜುಗೋಡು, ಮಾಧವ ಡಿ. ಸೀತಾರಾಮ ಎಡಪಡಿತ್ತಾಯ, ಜಯಕರ್ನಾಟಕ ಸಂಘಟನೆಯವರು ಉಪಸ್ಥಿತರಿದ್ದರು.

ಪುಷ್ಪ ಹಾಸಿಗೆಯ ಸ್ವಾಗತ
ಕುಲ್ಕುಂದದಿಂದ ಕುಮಾರಧಾರಾ ತನಕ ರಥವನ್ನು ದೇಗುಲದ ಯಶಸ್ವಿ ಆನೆ ಹಾಗೂ ಬಿರುದಾವಳಿಗಳೊಂದಿಗೆ ಸ್ವಾಗತಿಸಲಾಯಿತು. ಕಾಶಿಕಟ್ಟೆ ಬಳಿ ರಸ್ತೆಗೆ ಹೂವಿನ ಹಾಸು ಹಾಸಿ ರಥವನ್ನು ದೇವಸ್ಥಾನದ ರಥಬೀದಿ ತನಕ ಕೊಂಡೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next