ಪುರಾಣ, ಪುಣ್ಯ ಕಥೆಗಳಲ್ಲಿ ಬರುವ “ಬ್ರಹ್ಮ ರಾಕ್ಷಸ’ನ ಬಗ್ಗೆ ಬಹುತೇಕರು ಕೇಳಿರುತ್ತೀರಿ. ಈಗ ಇದೇ “ಬ್ರಹ್ಮ ರಾಕ್ಷಸ’ ಎಂಬ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಂದಹಾಗೆ, ಈ ಸಿನಿಮಾದ ಹೆಸರು “ಬ್ರಹ್ಮ ರಾಕ್ಷಸ’ ಅಂತಿದ್ದರೂ, ಇದು ಯಾವುದೇ ಪುರಾಣ, ಪುಣ್ಯ ಕಥೆಗಳನ್ನು ಆಧರಿಸಿದ ಸಿನಿಮಾವಲ್ಲ. ಸಿನಿಮಾದ ಕಥಾಹಂದರಕ್ಕೆ ಸೂಕ್ತವೆಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನಿಮಾಕ್ಕೆ ಇಂಥದ್ದೊಂದು ಹೆಸರನ್ನು ಇಟ್ಟುಕೊಂಡಿದೆ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ “ಬ್ರಹ್ಮ ರಾಕ್ಷಸ’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ.
“ಬ್ರಹ್ಮ ರಾಕ್ಷಸ’ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಸುಮಾರು 15 ವರ್ಷಗಳಿಂದ ಸಕ್ರಿಯವಾಗಿರುವ, ಸಿನಿಮಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಶಂಕರ್ ಮೊದಲ ಬಾರಿಗೆ “ಬ್ರಹ್ಮ ರಾಕ್ಷಸ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. “ಜ್ಯೋತಿ ಆರ್ಟ್ಸ್’ ಬ್ಯಾನರಿನಲ್ಲಿ ಕೆ. ಎಂ. ಪಿ. ಶ್ರೀನಿವಾಸ್ (ರಾಣೇಬೆನ್ನೂರು) ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
“ಬ್ರಹ್ಮ ರಾಕ್ಷಸ’ ನೈಜ ಘಟನೆಗಳನ್ನು ಆಧರಿಸಿ ತೆರೆಗೆ ಬರುತ್ತಿರುವ ಸಿನಿಮಾ. 1980-90ರ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. ನಮ್ಮ ಸುತ್ತಮುತ್ತ ನಡೆದಿರುವ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ, ಅದಕ್ಕೆ ಒಂದಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು, ರೆಟ್ರೋ ಶೈಲಿಯಲ್ಲಿ “ಬ್ರಹ್ಮ ರಾಕ್ಷಸ’ ಸಿನಿಮಾವನ್ನು ತೆರೆಮೇಲೆ ಬರುತ್ತಿದೆ. ಸುಮಾರು 5 ವರ್ಷಗಳ ಕಾಲ ಸಿನಿಮಾದ ಸಬ್ಜೆಕ್ಟ್ ಮೇಲೆ ಕೆಲಸ ಮಾಡಿರುವ ಚಿತ್ರತಂಡ, ಆದಷ್ಟು ನೈಜವಾಗಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಿದೆ. ಸಿನಿಮಾ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಶುರುವಾದ ಸಿನಿಮಾ ಈಗ ದೃಶ್ಯ ರೂಪ ಪಡೆದುಕೊಂಡಿದೆ.
ಈ ಹಿಂದೆ “ಕಲಿವೀರ’ ಎಂಬ ಸಿನಿಮಾದ ಮೂಲಕ ನಾಯಕನಾಗಿ ಪರಿಚಯವಾಗಿದ್ದ ಅಂಕುಶ್ ಏಕಲವ್ಯ “ಬ್ರಹ್ಮ ರಾಕ್ಷಸ’ ಸಿನಿಮಾದಲ್ಲಿ ನಾಯಕನಾಗಿ ಎರಡು ಶೇಡ್‌ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಕಿರುತೆರೆ ಧಾರಾವಾಹಿಗಳು, ಕೆಲ ಸಿನಿಮಾಗಳಲ್ಲಿ ಅಭಿನಯಿಸಿರುವ ಪಲ್ಲವಿ ಗೌಡ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ವೈಜನಾಥ್ ಬಿರಾದಾರ್, ಅರವಿಂದ್ ರಾವ್, ಬಲರಾಜವಾಡಿ, ಭವ್ಯಾ, ವಜ್ರಧೀರ್ ಜೈನ್, ಸ್ವಪ್ನಾ, ಆರುಷ್, ಭುವನ್ ಗೌಡ, ದೇವು ಮತ್ತಿತರರು “ಬ್ರಹ್ಮ ರಾಕ್ಷಸ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಬ್ರಹ್ಮ ರಾಕ್ಷಸ’ ಸಿನಿಮಾದ ಐದು ಹಾಡುಗಳಿಗೆ ಎಂ. ಎಸ್. ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದು, ಸೋನು ನಿಗಂ, ಮಮತಾ ಶರ್ಮ ಮತ್ತಿತರರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಸಿನಿಮಾಕ್ಕೆ ಅನಿರುದ್ಧ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಉಡುಪಿ, ಕುಂದಾಪುರ, ಗಗನಚುಕ್ಕಿ-ಭರಚುಕ್ಕಿ, ರಾಮನಗರ, ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.