ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಬ್ರ್ಯಾಡ್ ಹಾಗ್ ಪ್ರಸ್ತುತ ಕಾಲದ ಅತ್ಯುತ್ತಮ ಏಕದಿನ ತಂಡವನ್ನು ಪ್ರಕಟಿಸಿದ್ದಾರೆ. ತನ್ನ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋ ಪ್ರಕಟಿಸಿರುವ ಹಾಗ್ ತನ್ನ ತಂಡವನ್ನು ಪ್ರಕಟಿಸಿದ್ದಾರೆ. ಕಳೆದ ಒಂದು ವರ್ಷದ ಆಟವನ್ನು ಗಮನಿಸಿ ತಂಡವನ್ನು ಪ್ರಕಟಿಸಿದ್ದು, ತನ್ನ ತಂಡಕ್ಕೆ ‘ಮನರಂಜಕ ಏಕದಿನ ತಂಡ’ ಎಂದು ಹೆಸರಿಟ್ಟಿದ್ದಾರೆ.
ಆಸೀಸ್ ಮಾಜಿ ಆಟಗಾರನ ತಂಡದಲ್ಲಿ ಐವರು ಭಾರತೀಯರು ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಯುಜುವೇಂದ್ರ ಚೆಹಲ್ ಸ್ಥಾನ ಪಡೆದಿದ್ದಾರೆ. ಆದರೆ ವೇಗಿ ಜಸ್ಪ್ರೀತ್ ಬುಮ್ರಾ ಗೆ ಸ್ಥಾನ ನೀಡಿಲ್ಲ.
ಹಾಗ್ ತಂಡದ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಸ್ಥಾನ ಪಡೆದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಭಾರತೀಯ ನಾಯಕ ವಿರಾಟ್ ಕೊಹ್ಲಿ ಗೆ ಹಾಗ್ ಸ್ಥಾನ ನೀಡಿದ್ದಾರೆ. ಹಾಗ್ ತಂಡದ ನಾಯಕ ಸ್ಥಾನವೂ ವಿರಾಟ್ ಪಾಲಿಗೆ ಲಭಿಸಿದೆ.
ಮಧ್ಯಮ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನ ಪಾಕಿಸ್ಥಾನದ ಬಾಬರ್ ಅಜಂ ಗೆ ನೀಡಿದ್ದಾರೆ. ಐದನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ ಅವರು ಹಾಗ್ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.
ಐವರು ಬೌಲರ್ ಗಳಿಗೆ ಹಾಗ್ ಸ್ಥಾನ ನೀಡಿದ್ದು, ಭಾರತದ ರವೀಂದ್ರ ಜಡೇಜಾ ಮತ್ತು ಯುಜುವೇಂದ್ರ ಚಾಹಲ್ ಸ್ಪಿನ್ನರ್ ಗಳಾಗಿ ಆಯ್ಕೆ ಮಾಡಿದ್ದಾರೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್, ಕಿವೀಸ್ ಬೌಲರ್ ಲಯೂಕಿ ಫರ್ಗುಸನ್ ಮತ್ತು ಭಾರತದ ವೇಗಿ ಮೊಹಮ್ಮದ್ ಶಮಿ ವೇಗದ ಬೌಲರ್ ಗಳಾಗಿರಲಿದ್ದಾರೆ.
ಬ್ರಾಡ್ ಹಾಗ್ ಪ್ರಸ್ತುತ ಏಕದಿನ ಇಲೆವೆನ್: ರೋಹಿತ್ ಶರ್ಮಾ , ಡೇವಿಡ್ ವಾರ್ನರ್ , ವಿರಾಟ್ ಕೊಹ್ಲಿ, ಬಾಬರ್ ಅಜಮ್ , ಬೆನ್ ಸ್ಟೋಕ್ಸ್ , ಜೋಸ್ ಬಟ್ಲರ್ , ರವೀಂದ್ರ ಜಡೇಜಾ , ಮಿಚೆಲ್ ಸ್ಟಾರ್ಕ್ , ಲಾಕಿ ಫರ್ಗುಸನ್ , ಮೊಹಮ್ಮದ್ ಶಮಿ , ಯುಜುವೇಂದ್ರ ಚಾಹಲ್