ಆಳಂದ: ತಾಲೂಕಿನ ಖಜೂರಿ ಹೊರವಲಯದ ಸುಮಾರು 10 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದ ಆವರಣಗೋಡೆ ಅವೈಜ್ಞಾನಿಕ ಹಾಗೂ ತೀರಾ ಕಳಪೆಮಟ್ಟದಿಂದ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಆರೋಪಿಸಿದರು.
ಕಟ್ಟಡದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವೈಜ್ಞಾನಿಕ ಕಾಮಗಾರಿ ತೋರಿಸಿ ಮಾತನಾಡಿದ ಅವರು, ಯಾವುದೇ
ಕಟ್ಟಡ ಕಟ್ಟಲು ಮೊದಲು ತಳಪಾಯ ತೆಗೆಯುವುದು ಸಾಮಾನ್ಯ. ಆದರೆ, ಈ ಹಿಂದೆ ಅರಣ್ಯ ಇಲಾಖೆಯವರು
ಬದು ನಿರ್ಮಾಣ ಮಾಡಿದ್ದರು.
ಈ ಬದುವನ್ನೇ ತಳಪಾಯ ಮಾಡಿಕೊಂಡು ಆವರಣಗೋಡೆ ನಿರ್ಮಿಸಿದರೆ ಗೋಡೆ ಬಹುದಿನ ಬಾಳಿಕೆಗೆ ಬರುವುದಿಲ್ಲ ಎಂದು ಆಕ್ಷೇಪಿಸಿದರು. ನೆಲದ ಮೇಲೆ ಹಾಕಿದ ಒಡ್ಡಿನ ಬದುವಿನ ಮಣ್ಣು ಸರಿಸಿ ಇದೇ ಸ್ಥಳದಲ್ಲೇ ಆವರಣಗೋಡೆಯನ್ನು ಕಳಪೆ ಮಟ್ಟದಿಂದ ಕಟ್ಟಿ ಹಣ ಎತ್ತಿ ಹಾಕುವ ಹುನ್ನಾರವಾಗಿದೆ.
ಗೋಡೆಗೆ ಗುಣಮಟ್ಟದ ರೇಜಿಗಲ್ಲು ಬಳಕೆ ಮಾಡದೆ, ಪ್ಲಾಸ್ಟಿಂಗ್ ಕಲ್ಲು ಬಳಸುತ್ತಿದ್ದಾರೆ. ಈ ಪ್ಲಾಸ್ಟಿಂಗ್ ಕಲ್ಲು
ಸೀಳಿಹೋಗುತ್ತದೆ. ರೇಜಿಗಲ್ಲು ಬಳಸುವ ಬದಲು ಈ ಪ್ಲಾಸ್ಟಿಂಗ್ ಕಲ್ಲು ಬಳಸುತ್ತಿದ್ದಾರೆ. ನೆಲದ ತಳಪಾಯ
ಅಗೆಯುವ ಬದಲು ಬದುವನ್ನು ತೆರವುಗೊಳಿಸಿ ಗೋಡೆ ನಿರ್ಮಿಸಿ ಕೈತೊಳೆದು ಕೊಳ್ಳುವ ಹುನ್ನಾರವಾಗಿದೆ
ಎಂದು ಆರೋಪಿಸಿದರು.
ಈ ಕಾಮಗಾರಿ ತೀರಾ ಅವೈಜ್ಞಾನಿಕದಿಂದ ಕೂಡಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಗುಣಮಟ್ಟದ ಕಾಮಗಾರಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.