Advertisement

ಒಪ್ಪಂದದಂತೆ ಬಿ.ಆರ್‌. ಶೆಟ್ಟಿ ಸಂಸ್ಥೆಯೇ ಆಸ್ಪತ್ರೆ ನಡೆಸಬೇಕು: ಶಾಸಕ ಭಟ್‌

06:55 PM Jun 11, 2021 | Team Udayavani |

ಉಡುಪಿ : ಬಿ.ಆರ್‌. ಶೆಟ್ಟಿ ಸಂಸ್ಥೆಯವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಡೆಸಲು ಸಾಧ್ಯವಿಲ್ಲ ಎಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಈ ಹಿಂದಿನ ಒಪ್ಪಂದದಂತೆ ಬಿಆರ್‌ಶೆಟ್ಟಿ ಸಂಸ್ಥೆಯವರೇ ಆಸ್ಪತ್ರೆಯನ್ನು ಮುನ್ನಡೆಸಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಆಸ್ಪತ್ರೆಯನ್ನು ಸರಕಾರ ನಡೆಸಲು ಸಾಧ್ಯವಿಲ್ಲ. ಖಾಸಗಿ ಆಸ್ಪತ್ರೆಯ ಕಟ್ಟಡ ವಿನ್ಯಾಸದಲ್ಲಿ ಸರಕಾರಿ ಆಸ್ಪತ್ರೆ ನಡೆಸುವುದು ಕಷ್ಟವಿದೆ. ಕಟ್ಟಡಕ್ಕೆ ಸೆಂಟ್ರಲ್‌ ಹವಾನಿಯಂತ್ರಣ ವ್ಯವಸ್ಥೆ ಹಾಕಲಾಗಿದೆ. ವಿದ್ಯುತ್‌ ಬಿಲ್‌ ಮಾಸಿಕ 15 ಲ.ರೂ. ಹಾಗೂ ಸಿಬಂದಿಗಳ ವೇತನ 25 ಲ.ರೂ. ವೆಚ್ಚವಾಗುತ್ತಿದೆ ಎಂದರು.

ಈ ಹಿಂದಿನ 70 ಬೆಡ್‌ಗಳ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಈಗಾಗಲೇ ಬೇರೆಡೆ ವರ್ಗಾವಣೆ ಮಾಡಲಾಗಿದೆ. ಸರಕಾರವೇ ಆಸ್ಪತ್ರೆಯನ್ನು ನಡೆಸಲು 200 ಬೆಡ್‌ನ‌ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು ಹಾಗೂ ಸಿಬಂದಿಗಳನ್ನು ಮತ್ತೆ ನೇಮಕ ಮಾಡಬೇಕಾಗುತ್ತದೆ. ಇದು ಸರಕಾರಕ್ಕೆ ಕಷ್ಟವಾಗಲಿದೆ. ಮುಂದಿನ ವಾರ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳವತ್ತ ಪ್ರಯತ್ನಿಸಲಾಗುತ್ತದೆ ಎಂದರು.

ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಯಂತೆ 70 ಬೆಡ್‌ನ‌ ಯೂನಿಟ್‌ನ್ನು ಸರಕಾರದ ತೆಕ್ಕೆಗೆ ನೀಡಿ, ಉಳಿದ 140 ಬೆಡ್‌ ಎರಡು ಯೂನಿಟ್‌ನಂತೆ ಬಿ.ಆರ್‌. ಶೆಟ್ಟಿ ಅವರೇ ನಡೆಸಬೇಕು. ಹಿಂದಿನ ಎಂಒಯು ಪ್ರಕಾರ ಆಸ್ಪತ್ರೆಗೆ ಅಗತ್ಯವಿರುವ ಮೆಡಿಸಿನ್‌ ಹಾಗೂ ವೈದ್ಯರನ್ನು ಅವರೇ ಒದಗಿಸಿಕೊಳ್ಳಬೇಕು. ಪ್ರಸ್ತುತ ಸರಕಾರ ರೋಗಿಗಳಿಗೆ ತೊಂದರೆಯಾಗದಂತೆ ಸರಕಾರದಿಂದ ಔಷಧ ಸರಬರಾಜು ಮಾಡಲಾಗುತ್ತಿದೆ. ಎನ್‌ಆರ್‌ಎಚ್‌ಎಂ ಮೂಲಕ 7 ಮಂದಿ ವೈದ್ಯರನ್ನು ಆಸ್ಪತ್ರೆಗೆ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ :ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ

Advertisement

ಶುಕ್ರವಾರ ಜಿಲ್ಲಾಧಿಕಾರಿ, ಶಾಸಕ, ಬಿ.ಆರ್‌. ಶೆಟ್ಟಿ ಸಂಸ್ಥೆ ಹಾಗೂ ಆಸ್ಪತ್ರೆಯ ಸಿಬಂದಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯವರು ರಾಜ್ಯ ಸರಕಾರದಿಂದ ಡಯಾಲಿಸಿಸ್‌ ಚಿಕಿತ್ಸೆಗೆ ಸಂಬಂಧಿಸಿ 30 ಕೋ.ರೂ. ಬಾಕಿ ಇರುವುದಾಗಿ ಹೇಳಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಟೆಂಡರ್‌ನ್ನು ಬಿ.ಆರ್‌. ಶೆಟ್ಟಿ ಅವರಿಗೆ ನೀಡಲಾಗಿತ್ತು. ಅದರಂತೆ ಒಂದು ಡಯಾಲಿಸಿಸ್‌ಗೆ ನಿರ್ದಿಷ್ಟ ದರ ನಿಗದಿಸಿದೆ. ಅದರಲ್ಲಿ ಡಯಾಲಿಸಿಸ್‌ಗೆ ಅಗತ್ಯವಿರುವ ಔಷಧವು ಸೇರಿದೆ. ಆದರೆ ಸಂಸ್ಥೆ ಇದನ್ನು ನೀಡಲು ನಿರಾಕರಿಸಿದ್ದು, ತುರ್ತು ಚಿಕಿತ್ಸೆ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳು ತಮಗೆ ಅಗತ್ಯವಿರುವ ಔಷಧವನ್ನು ತಾವೇ ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಈ ಔಷಧ ಮೊತ್ತವನ್ನು ಕಡಿತಗೊಳಿಸಿ ಸರಕಾರ ಬಾಕಿ ಮೊತ್ತ ನೀಡಿದೆ. ಇದೀಗ ಆಸ್ಪತ್ರೆಯನ್ನು ಮುನ್ನಡೆಸಲು ಸಂಸ್ಥೆಯು ಆ ಕಡಿತಗೊಳಿಸಿದ ಮೊತ್ತವನ್ನು ಪಾವತಿ ಮಾಡುವಂತೆ ಪಟ್ಟು ಹಿಡಿದಿದೆ ಎಂದು ಹೇಳಿದರು.

ಆಯುಷ್ಮಾನ್‌ ಮೊತ್ತ ಪಾವತಿ ಬಾಕಿ
ಸರಕಾರಿ ಆಸ್ಪತ್ರೆಯಲ್ಲಿ ಆಗುವ ಒಂದು ಹೆರಿಗೆಗೆ ಬಿ.ಆರ್‌. ಶೆಟ್ಟಿ ಸಂಸ್ಥೆಗೆ 4,500 ರೂ. ಪಾವತಿಯಾಗುತ್ತದೆ. ಜಿಲ್ಲೆಯಲ್ಲಿ ಆಯುಷ್ಮಾನ್‌ ಯೋಜನೆಯಡಿ 1 ಕೋ.ರೂ. ಬಿಲ್‌ ಆಸ್ಪತ್ರೆಗೆ ಬಾಕಿ ಇರುವುದಾಗಿ ಹೇಳಿದ್ದಾರೆ. ಅದರಲ್ಲಿ 50 ಲ.ರೂ. ಜಿಲ್ಲಾಸ್ಪತ್ರೆಗೆ ಬಂದಿದೆ. ಈ ಮೊತ್ತವನ್ನು ಪಾವತಿ ಮಾಡಿಲ್ಲ. ಯಾಕೆಂದರೆ ಡಯಾಲಿಸಿಸ್‌ ಅಗತ್ಯವಿರುವ ಔಷಧವನ್ನು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯಿಂದ ಸುಮಾರು 25 ಲ.ರೂ. ಪಾವತಿ ಮಾಡಿದೆ. ಆ ಮೊತ್ತವನ್ನು ಜಿಲ್ಲಾಸ್ಪತ್ರೆ ಕಡಿತಗೊಳಿಸಿದೆ ಎಂದು ಹೇಳಿದರು.

ವೇತನ ಪಾವತಿಗೆ ಕ್ರಮ
ಪ್ರಸ್ತುತ ರೋಗಿಗಳಿಗೆ ತೊಂದರೆಯಾಗ ಬಾರದು ಎನ್ನುವ ನಿಟ್ಟಿನಲ್ಲಿ ಆಯುಷ್ಮಾನ್‌ ಯೋಜನೆಯಡಿ ಆಸ್ಪತ್ರೆಗೆ ಬಾಕಿಯಿರುವ ಸುಮಾರು 50 ಲ.ರೂ. ಬಿಡುಗಡೆಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಮೊತ್ತ ಒಮ್ಮೆ ಪಾವತಿ ಮಾಡಿದರೆ ಸಿಬಂದಿಗಳ ವೇತನ ಪಾವತಿಸ ಬಹುದಾಗಿದೆ. ಈ ಬಗ್ಗೆ ನಾಲ್ಕೈದು ದಿನದೊಳಗೆ ಕಾರ್ಯ ರೂಪಕ್ಕೆ ತರಲಾಗುತ್ತದೆ ಎಂದರು.

“ಕಾನೂನುಬಾಹಿರ ಕ್ರಮದಿಂದ ತಡೆ’
ಹಡಿಲು ಭೂಮಿ ಯೋಜನೆಯನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಡಿಲು ಹೋಲಿಸಿಕೊಂಡು ವ್ಯಂಗ್ಯ ಮಾಡುವುದು ಸರಿಯಲ್ಲ. 400 ಬೆಡ್‌ ಆಸ್ಪತ್ರೆ ನಿರ್ಮಾಣ ಕಾಮಗಾರಿ ಬಿ.ಆರ್‌. ಶೆಟ್ಟಿ ಅವರ ಆರ್ಥಿಕ ಸಮಸ್ಯೆಯಿಂದ ನಿಂತಿರುವುದು ಹೊರತು ನಮ್ಮಿಂದ ಅಲ್ಲ. ಆಸ್ಪತ್ರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ಸ್ಥಳೀಯಾಡಳಿತದಿಂದ ಅನುಮತಿ ಪಡೆಯದೇ ಝೆಡ್‌ 3( ಮೂರು ನೆಲ ಮಾಳಿಗೆ) ನಿರ್ಮಿಸಲು ಮುಂದಾಗಿದ್ದಾರೆ. 2 ನೆಲ ಮಾಳಿಗೆ ನಿರ್ಮಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಇದುವರೆಗೆ ಅವರು ಈ ಬಗ್ಗೆ ಮಾತನಾಡಲು ಮುಂದೆ ಬಂದಿಲ್ಲ. ಸಂಸ್ಥೆಯವರು ಕಾನೂನು ವಿರುದ್ಧವಾಗಿ ಮೂರು ಝೆಡ್‌ ನಿರ್ಮಿಸಲು ಮುಂದಾಗಿರುವುದು ಸರಿಯೇ? ಕಾನೂನು ಬದ್ಧವಾಗಿದ್ದರೆ ಅನುಮತಿ ನೀಡಲು ಯಾರೂ ತಡೆ ತರುವುದಿಲ್ಲ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next