Advertisement

State Government; ಬಿಪಿಎಲ್‌ : ಹೆಚ್ಚುವರಿ ಅಕ್ಕಿಗೆ ಸಿದ್ಧತೆ

01:45 AM Jun 15, 2023 | Team Udayavani |

ಉಡುಪಿ: ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ತಿಂಗಳು ಬಿಪಿಎಲ್‌ ಕುಟುಂಬಗಳಿಗೆ 4 ಕೆ.ಜಿ.ಯಂತೆ ಹೆಚ್ಚುವರಿಯಾಗಿ ವಿತರಿಸಲು ಸುಮಾರು 81,758 ಕ್ವಿಂಟಾಲ್‌ ಅಕ್ಕಿ ಅಗತ್ಯವಿದ್ದು, ಜಿಲ್ಲಾಡಳಿತ ವರ್ಷಕ್ಕೆ ಸುಮಾರು 480 ಕೋ. ರೂ. ಹೊಂದಿಸಬೇಕಾಗಿದೆ. ಆದರೆ ರಾಜ್ಯ ಸರಕಾರ ಸದ್ಯದ ಲೆಕ್ಕಾಚಾರದ ಪ್ರಕಾರ ಜು. 1ರಿಂದ ವಿತರಣೆಗೆ ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ.

Advertisement

ಬುಧವಾರ ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ದರದಲ್ಲೇ ಹೆಚ್ಚುವರಿ ಅಕ್ಕಿಯನ್ನು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಅದರಂತೆ ಹೆಚ್ಚುವರಿ ಅಕ್ಕಿ ಖರೀದಿಗೆ ಪ್ರತೀ ತಿಂಗಳೂ 35ರಿಂದ 40 ಕೋ.ರೂ. ತಗಲುವ ಸಾಧ್ಯತೆ ಇದೆ. ಹಾಗಾಗಿ ವಾರ್ಷಿಕ ಸುಮಾರು 480 ಕೋಟಿ ರೂ. ಗಳನ್ನು ಹೊಂದಿಸಬೇಕಾಗಿದೆ.

ಹೆಚ್ಚುವರಿ 4 ಕೆ.ಜಿ. ಸೇರಿಸಿ 10 ಕೆ.ಜಿ. ಅಕ್ಕಿಯನ್ನು ಬಿಪಿಎಲ್‌ ಕುಟುಂಬದ ಎಲ್ಲ ಸದಸ್ಯರಿಗೂ ವಿತರಿಸುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಿತ್ತು.

ಉಭಯ ಜಿಲ್ಲೆಗಳ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯು ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಪಿಡಿಎಸ್‌) ಬಿಪಿಎಲ್‌ ಕಾರ್ಡ್‌ನ ಪ್ರತೀ ಸದಸ್ಯರಿಗೂ 6 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ರಾಜ್ಯ ಸರಕಾರ ಇದಕ್ಕೆ ಹೆಚ್ಚುವರಿಯಾಗಿ 4 ಕೆ.ಜಿ. ಸೇರಿಸಿ 10 ಕೆ.ಜಿ. ನೀಡುವುದಾಗಿ ಹೇಳಿದೆ. ಉಭಯ ಜಿಲ್ಲೆಗಳಲ್ಲಿ ಇದಕ್ಕೆ ಬೇಕಾದಷ್ಟು ಅಕ್ಕಿಯ ದಾಸ್ತಾನಿರಿಸಿಲಾಗುತ್ತಿದೆ ಇದಕ್ಕೀಗ ಮಾರುಕಟ್ಟೆಯ ದರದಂತೆ ಉಭಯ ಜಿಲ್ಲೆಗೆ ಹೆಚ್ಚುವರಿ 4 ಕೆ.ಜಿ. ಅಕ್ಕಿಯನ್ನು ನೀಡಲು ಮಾಸಿಕ 35 ಕೋ.ರೂ.ಗಳಿಂದ 40 ಕೋ.ರೂ. ಮೀಸಲಿಡಬೇಕಾಗಲಿದೆ.

ಬೇಡಿಕೆ ಎಷ್ಟು?
ಉಡುಪಿ ಜಿಲ್ಲೆಯಲ್ಲಿ 1,69,125 ಬಿಪಿಎಲ್‌ ಕಾರ್ಡ್‌ ಹಾಗೂ 28,434 ಅಂತ್ಯೋದಯ ಕಾರ್ಡ್‌ಗಳಿವೆ. ಪ್ರತೀ ತಿಂಗಳು ಜಿಲ್ಲೆಗೆ 50,938 ಕ್ವಿಂಟಾಲ್‌ ಅಕ್ಕಿ ಪಿಡಿಎಸ್‌ನಡಿ ವಿತರಣೆಗೆ ಬೇಕಾಗುತ್ತದೆ. ಹೆಚ್ಚುವರಿಯಾಗಿ 4 ಕೆ.ಜಿ. ನೀಡುವುದಾದಲ್ಲಿ ರಾಜ್ಯ ಸರಕಾರ ಪ್ರತೀ ತಿಂಗಳು 34,884 ಕ್ವಿಂಟಾಲ್‌ ಪೂರೈಸಬೇಕಾಗುತ್ತದೆ. ದ.ಕ.ದಲ್ಲಿ 2,55,839 ಬಿಪಿಎಲ್‌ ಹಾಗೂ 23,095 ಅಂತ್ಯೋದಯ ಕಾರ್ಡ್‌ಗಳಿವೆ. ಮಾಸಿಕ ಪಿಡಿಎಸ್‌ನಡಿ ವಿತರಣೆಗೆ 69,684 ಕ್ವಿಂಟಾಲ್‌ ಅಗತ್ಯವಿದೆ. ಹೆಚ್ಚುವರಿಯಾಗಿ 4 ಕೆ.ಜಿ. ವಿತರಿಸಲು ರಾಜ್ಯ ಸರಕಾರ 46,874 ಕ್ವಿಂಟಾಲ್‌ ಒದಗಿಸ ಬೇಕಾ ಗಿದೆ. ಸದ್ಯ ಉಭಯ ಜಿಲ್ಲೆಗೆ ಮಾಸಿಕ 1,20,622 ಕ್ವಿಂಟಾಲ್‌ ಅಗತ್ಯವಿದೆ. ಇನ್ನು ರಾಜ್ಯ ಸರಕಾರ ಹೆಚ್ಚುವರಿಯಾಗಿ 4 ಕೆ.ಜಿ. ನೀಡಲು ಆರಂಭಿಸಿದ ಬಳಿಕ ಒಟ್ಟಾರೆಯಾಗಿ ಉಡುಪಿಗೆ 85,822 ಕ್ವಿಂಟಾಲ್‌ ಹಾಗೂ ದ.ಕ.ಗೆ 1,16,558 ಕ್ವಿಂಟಾಲ್‌ ಬೇಕಾಗುತ್ತದೆ.

Advertisement

ಕೇಂದ್ರ ಸರಕಾರದ್ದೇ ಸಿಂಹಪಾಲು
ಸದ್ಯ ಬಿಪಿಎಲ್‌ ಕುಟುಂಬಕ್ಕೆ ನೀಡುವ 6 ಕೆ.ಜಿ. ಅಕ್ಕಿಯಲ್ಲಿ 5 ಕೆ.ಜಿ. ಕೇಂದ್ರ ಸರಕಾರದ್ದಾಗಿದ್ದು, ಕೇವಲ 1 ಕೆ.ಜಿ. ಮಾತ್ರ ರಾಜ್ಯದ್ದಾಗಿದೆ. ಹೀಗಾಗಿಯೇ ಕೇಂದ್ರ ಹಾಗೂ ರಾಜ್ಯದ ಪಾಲಿನ ಅಕ್ಕಿ ವಿತರಣೆ ಸಂದರ್ಭದಲ್ಲಿ ಪ್ರತ್ಯೇಕ ಒಟಿಪಿ ಪಡೆಯಲಾಗುತ್ತಿದೆ. ಹಾಗೆಯೇ ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತೀ ತಿಂಗಳು ನೀಡುವ 35 ಕೆ.ಜಿ. ಅಕ್ಕಿಯನ್ನು ಕೇಂದ್ರವೇ ಪೂರ್ಣವಾಗಿ ಪೂರೈಸುತ್ತಿದೆ. ಅಂತ್ಯೋದಯ ಕಾರ್ಡ್‌ದಾರರಿಗೂ ಹೆಚ್ಚುವರಿಯಾಗಿ ರಾಜ್ಯ ಸರಕಾರ ಅಕ್ಕಿ ನೀಡುವ ಸಾಧ್ಯತೆಯಿದೆ ಎನ್ನುತ್ತಾರೆ ಅಧಿಕಾರಿಗಳು.

ಹೆಚ್ಚುವರಿ ಹಂಚಿಕೆ ಸುಲಭವಿಲ್ಲ
ರಾಜ್ಯ ಸರಕಾರ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಆಹಾರ ನಿಗಮದಿಂದ ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ನೀಡಬೇಕಾಗುತ್ತದೆ. ಕೇಂದ್ರ ಸರಕಾರದ ಆಹಾರ ನಿಗಮವು ಹೆಚ್ಚುವರಿ ಅಕ್ಕಿ ಪೂರೈಕೆ ಅಸಾಧ್ಯ ಎಂಬುದನ್ನು ರಾಜ್ಯಕ್ಕೆ ತಿಳಿಸಿದೆ. ಹೀಗಾಗಿ ರಾಜ್ಯ ಸರಕಾರವು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಬೇಕಾಗುತ್ತದೆ. ಆಗ ದರ ವ್ಯತ್ಯಾಸ ಹೆಚ್ಚಾಗುವುದರಿಂದ ರಾಜ್ಯ ಸರಕಾರಕ್ಕೆ ಇನ್ನಷ್ಟು ಆರ್ಥಿಕ ಹೊರೆಯೂ ಆಗಬಹುದು. ಒಟ್ಟಾರೆ ಹೆಚ್ಚುವರಿ ಅಕ್ಕಿ ವಿತರಿಸುವುದು ಅಷ್ಟು ಸುಲಭವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಕಾಳಸಂತೆಗೆ ಕಡಿವಾಣ ಅಗತ್ಯ
ಪಡಿತರ ವ್ಯವಸ್ಥೆಯಡಿ ಕರಾವಳಿಗರಿಗೆ ಕುಚ್ಚಲಕ್ಕಿ ನೀಡಬೇಕು ಎಂಬ ಬೇಡಿಕೆ ವರ್ಷಗಳಿಂದ ಇದೆ. ಕೇಂದ್ರ ಸರಕಾರ ಅನು ಮತಿ ನೀಡಿದ್ದರೂ ಅಕ್ಕಿಯ ಕೊರತೆ ಯಿಂದ ಸ್ಥಳೀಯ ಕುಚ್ಚಲಕ್ಕಿ ಬದಲು ಹೊರ ಜಿಲ್ಲೆಗಳ ಅಕ್ಕಿ ಪೂರೈಸಲಾಗುತ್ತಿದೆ. ಬಹುಪಾಲು ಕುಟುಂಬಗಳು ಸರಕಾರ ನೀಡುವ ಬೆಳ್ತಿಗೆಯನ್ನು ಉಪಾಹಾರಕ್ಕೆ ಬಳಸುತ್ತಾರೆ. ಕುಚ್ಚಲಕ್ಕಿಯನ್ನು ಕಡಿಮೆ ದರಕ್ಕೆ (ಕೆ.ಜಿ.ಗೆ. 9ರಿಂದ 12 ರೂ.ಗಳಿಗೆ) ಕಾಳ ಸಂತೆಯಲ್ಲಿ ಮಾರುತ್ತಾರೆ ಎಂಬ ಆರೋಪವಿದೆ. ಉಭಯ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿ ಕ್ವಿಂಟಾಲುಗಳಷ್ಟು ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸದ್ಯ ಪ್ರತೀ ತಿಂಗಳು ಬಿಪಿಎಲ್‌ ಕುಟುಂಬದವರಿಗೆ ತಲಾ 6 ಕೆ.ಜಿ., ಅಂತ್ಯೋದಯ ಕಾರ್ಡ್‌ದಾರರಿಗೆ 35 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಜು. 1ರಿಂದ ರಾಜ್ಯ ಸರಕಾರ ಹೆಚ್ಚುವರಿಯಾಗಿ ಪ್ರತೀ ಬಿಪಿಎಲ್‌ ಸದಸ್ಯರಿಗೆ
4 ಕೆ.ಜಿ. ಅಕ್ಕಿ ನೀಡಲಿದೆ. ರಾಜ್ಯ ಸರಕಾರ ಅಧಿಕೃತವಾಗಿ ಯೋಜನೆಗೆ ಚಾಲನೆ ನೀಡಿದ ಬಳಿಕ ಜಿಲ್ಲೆಗಳಲ್ಲಿ ಹಂಚಿಕೆ ಆರಂಭವಾಗಲಿದೆ.
– ಮಾಣಿಕ್ಯ ಎನ್‌., ಪಿ.ಕೆ. ಬಿನೋಯ್‌, ಉಪ ನಿರ್ದೇಶಕರು, ಆಹಾರ ಇಲಾಖೆ, ದ.ಕ., ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next