ಡಬ್ಲಿನ್ (ಐರ್ಲೆಂಡ್): ಐರ್ಲೆಂಡಿನ ವೇಗಿ ಬಾಯ್ಡ್ ರ್‍ಯಾಂಕಿನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದರು. 36 ವರ್ಷದ ರ್‍ಯಾಂಕಿನ್ ಇಂಗ್ಲೆಂಡ್ ಪರವಾಗಿಯೂ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು.
ಐರ್ಲೆಂಡ್ ಪರ ಎರಡು ವಿಶ್ವಕಪ್, ಇಂಗ್ಲೆಂಡ್ ಪರ ಆ್ಯಶಸ್ ಸರಣಿಯಲ್ಲಿ ಆಡಿರುವುದು ಬಾಯ್ಡ್ ರ್‍ಯಾಂಕಿನ್ ಪಾಲಿನ ಹೆಗ್ಗಳಿಕೆ. 18 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 3 ಟೆಸ್ಟ್, 75 ಏಕದಿನ ಹಾಗೂ 50 ಟಿ20 ಪಂದ್ಯಗಳಲ್ಲಿ ರ್‍ಯಾಂಕಿನ್ ಪಾಲ್ಗೊಂಡಿದ್ದಾರೆ. ಕ್ರಮವಾಗಿ 8, 106 ಹಾಗೂ 55 ವಿಕೆಟ್ ಕೆಡವಿದ ಸಾಧನೆ ಇವರದ್ದಾಗಿದೆ.
ರ್‍ಯಾಂಕಿನ್ 2003-2020ರ ಅವಧಿಯಲ್ಲಿ ಐರ್ಲೆಂಡ್ ಪರ ಎರಡು ಹಂತಗಳಲ್ಲಿ ಆಡಿದ್ದರು. ನಡುವೆ 3 ವರ್ಷಗಳ ಕಾಲ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವ ಅವಕಾಶ ಎದುರಾಯಿತು. ಆಗ 2014ರ ಆ್ಯಶಸ್ ಸರಣಿಯಲ್ಲಿ ಟೆಸ್ಟ್ ಕ್ಯಾಪ್ ಧರಿಸಿದರು. 2020ರಲ್ಲಿ ಅಫ್ಘಾನಿಸ್ಥಾನ ವಿರುದ್ಧ ಗ್ರೇಟರ್ ನೋಯ್ಡಾದಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ (ಟಿ20) ಆಡಿದರು.
2007ರ ವಿಶ್ವಕಪ್‌ನಲ್ಲಿ ಐರ್ಲೆಂಡ್‌ನ ಅಮೋಘ ಪ್ರದರ್ಶನದಲ್ಲಿ ಬಾಯ್ಡ್ ರ್‍ಯಾಂಕಿನ್ ಪಾಲು ಬಹಳಷ್ಟಿತ್ತು. ಅಂದು ಪಾಕಿಸ್ಥಾನ ಮತ್ತು ಬಾಂಗ್ಲಾದೇಶವನ್ನು ಬಗ್ಗುಬಡಿದ ಹೆಗ್ಗಳಿಕೆ ಐರ್ಲೆಂಡ್‌ನದ್ದಾಗಿತ್ತು. 2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಎದುರಿನ “ಫೇಮಸ್ ವಿನ್’ ವೇಳೆಯೂ ರ್‍ಯಾಂಕಿನ್ ಐರ್ಲೆಂಡ್ ತಂಡದಲ್ಲಿದ್ದರು.
2018ರಲ್ಲಿ ಟೆಸ್ಟ್ ಮಾನ್ಯತೆ ಪಡೆದ ಐರ್ಲೆಂಡ್, ಪಾಕಿಸ್ಥಾನ ವಿರುದ್ಧ ಮೊದಲ ಪಂದ್ಯ ಆಡಿತ್ತು. ಈ ಐತಿಹಾಸಿಕ ಪಂದ್ಯದಲ್ಲೂ ರ್‍ಯಾಂಕಿನ್ ಕಾಣಿಸಿಕೊಂಡಿದ್ದರು.