Advertisement

ಗೋಡೆಗಳಲ್ಲಿ ಮತದಾನ ಬಹಿಷ್ಕಾರದ ಪೋಸ್ಟರ್‌

11:09 AM Apr 06, 2019 | Naveen |

ಜಾಲ್ಸೂರು : ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಹಲವು ಕಡೆ ಮೂಲ ಸೌಕರ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ನೋಟಾ ಹಾಗೂ ಮತದಾನ ಬಹಿಷ್ಕಾರದ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಜಾಲ್ಸೂರಿನ ಕಾಳಮನೆ ಭಾಗದ ಜನರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ತಮ್ಮ ಮನೆಗಳ ಗೋಡೆಯ ಮೇಲೆ
‘ಮತದಾನ ಬಹಿಷ್ಕಾರ’ ಎಂಬ ಪೋಸ್ಟರ್‌ ಅಂಟಿಸಿದ್ದಾರೆ.

Advertisement

ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಜಾಲ್ಸೂರು ಗ್ರಾ.ಪಂ.ನ ಒಂದನೇ ವಾರ್ಡ್‌ನ ಕಾಳಮನೆಯ ಐದು ಕುಟುಂಬದವರು ರಸ್ತೆ ನಿರ್ಮಾಣ ಆಗದ ಕಾರಣ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸದೆ ಮತದಾನ ಬಹಿಷ್ಕರಿಸಲು
ತೀರ್ಮಾನಿಸಿದ್ದಾರೆ. ಸುಮಾರು 300ರಿಂದ 400 ಮೀಟರ್‌ ಕಾಲ್ನಡಿಗೆಯಲ್ಲೇ ಓಡಾಡಬೇಕಿದೆ. ಜನಪ್ರತಿನಿಧಿಗಳ
ನಿರ್ಲಕ್ಷ್ಯಕ್ಕೆ ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ದಶಕಗಳ ಗೋಳು
ಜಾಲ್ಸೂರು ಪೇಟೆಯಿಂದ ಕಾಳಮನೆ ಕಡೆಗೆ ಹೋಗಲು ಯಾವುದೇ ರಸ್ತೆ ವ್ಯವಸ್ಥೆಗಳಿಲ್ಲ. ಈ ಭಾಗದಲ್ಲಿ ರಸ್ತೆ ನಿರ್ಮಾಣವಾಗದ
ಕಾರಣ ವಾಹನಗಳು ಕೂಡ ಸಂಚರಿಸುವುದಿಲ್ಲ. ಜನರು
ಕಾಲುದಾರಿಯಲ್ಲೇ ತಮ್ಮ ಮನೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಅಜ್ಜನ ಕಾಲದಿಂದಲೂ ಇಲ್ಲಿ ಮಾರ್ಗವಿರಲಿಲ್ಲ. ಮೂವತ್ತು ವರ್ಷಗಳಿಂದ ಮನವಿ ಕೊಟ್ಟರೂ ಈ ಸಮಸ್ಯೆ ಪರಿಹಾರ ಆಗಿಲ್ಲ. ದಿನನಿತ್ಯದ ಕಾರ್ಯಗಳಿಗೆ ಕಾಲ್ನಡಿಗೆಯಲ್ಲೇ  ಓಡಾಡಬೇಕಿದೆ. ಜೀವನ ನಿರ್ವಹಣೆಗೆ ತುಂಬ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಈ ಭಾಗದ ಅಂಧರು ಹಾಗೂ ಅಂಗವಿಕಲರ ಪಾಡು ಕೇಳುವವರಿಲ್ಲ. ರಸ್ತೆ ಸೌಕರ್ಯ ಇಲ್ಲದೆ ಅನಾರೋಗ್ಯ ಹಾಗೂ ತುರ್ತುಸ್ಥಿತಿಯಲ್ಲಿ ನಗರಕ್ಕೆ ಸಂಚರಿಸಲು ಬದಲಿ ಮಾರ್ಗವೂ ಇಲ್ಲ. ಮುಖ್ಯ ರಸ್ತೆಯವರೆಗೆ ಹೊತ್ತುಕೊಂಡು ಹೋಗಬೇಕು. ಶಾಲಾ ಮಕ್ಕಳು ಹಾಗೂ ವೃದ್ಧರ ಪರಿಸ್ಥಿತಿಯೂ ಇದೇ ರೀತಿ ಇದೆ.
ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಬೇಕು. ಹೊಸದಾಗಿ ಕಟ್ಟಡ ನಿರ್ಮಿಸಲು ಇಲ್ಲಿ ಸಾಧ್ಯವಾಗುತ್ತಿಲ್ಲ. ದುಬಾರಿ ವೆಚ್ಚ ಭರಿಸಲು ಕಷ್ಟವಾಗುತ್ತಿದೆ. ಮೂಲ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ. ಸುಮಾರು 500 ಮೀಟರ್‌ ರಸ್ತೆಯಾದರೂ ನಿರ್ಮಾಣ ಮಾಡಬೇಕೆಂದು ಈ ಭಾಗದ
ಜನರು ಆಗ್ರಹಿಸಿದ್ದಾರೆ.

ಮನವಿಗೆ ಸ್ಪಂದಿಸಿಲ್ಲ
ಕಾಳಮನೆ ಭಾಗದಲ್ಲಿ ರಸ್ತೆ ನಿರ್ಮಾಣವಾಗಬೇಕೆಂದು 30
ವರ್ಷಗಳಿಂದ ಬೇಡಿಕೆಯಿಟ್ಟಿದ್ದರೂ ಪ್ರಯೋಜನವಾಗಲಿಲ್ಲ. ಸುಳ್ಯ ಶಾಸಕರಾದ ಅಂಗಾರ, ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ರಸ್ತೆ ನಿರ್ಮಾಣದ ಕುರಿತು ಆಶ್ವಾಸನೆ
ಕೊಟ್ಟಿದ್ದರೂ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಸಹಿತ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕಾರ ಮಾಡಲು ನಿರ್ಧರಿಸಲಾಗಿದೆ
ಎಂದು ಸ್ಥಳೀಯರು ಹೇಳುತ್ತಾರೆ.

Advertisement

ಜಾಲ್ಸೂರಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಮನವಿ ಸಲ್ಲಿಸಿ, ವಿಷಯ ಪ್ರಸ್ತಾವಿಸಿದರೂ ಸಮಸ್ಯೆ ಬಗೆಹರಿಯದೆ ಮತದಾನ ಮಾಡುವುದಿಲ್ಲ ಎಂದು ಇಲ್ಲಿನ ಜನರು ಹೇಳಿದ್ದಾರೆ.

ಮನವೊಲಿಕೆಗೆ ತಹಶೀಲ್ದಾರ್‌ ಯತ್ನ
ಸುಳ್ಯ ತಹಶೀಲ್ದಾರರು ಎ. 5ರಂದು ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲಿಸಿದ್ದು, ರಸ್ತೆ ನಿರ್ಮಾಣದ ಭರವಸೆ
ನೀಡಿದ್ದಾರೆ. ಅಲ್ಲಿನ ಜನರನ್ನು ಮತದಾನ ಮಾಡಲು ಪ್ರೇರೇಪಿಸಿದ್ದಾರೆ. ರಸ್ತೆ ಮಾಡಬೇಕಾದ ಜಾಗವನ್ನು
ಸರ್ವೆ ಮಾಡಲಾಗುವುದು, ಸರಕಾರದಿಂದ ಎಲ್ಲ ರೀತಿಯ
ಸಹಕಾರ ನೀಡಲಾಗುವುದು, ಮತದಾನ ನಮ್ಮ ಹಕ್ಕು. ತಪ್ಪದೇ
ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.

ಹಲವು ಬಾರಿ ಮನವಿ
ಅಜ್ಜನ ಕಾಲದಿಂದಲೂ ಇಲ್ಲಿ ರಸ್ತೆ ನಿರ್ಮಾಣವಾಗಿಲ್ಲ. ಹಲವು
ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ
ಮತದಾನ ಬಹಿಷ್ಕರಿಸುವ ತೀರ್ಮಾನ ಮಾಡಿದ್ದೆವು.
ತಹಶೀಲ್ದಾರರು ತತ್‌ ಕ್ಷಣ ಸ್ಪಂದಿಸಿ, ಭೇಟಿ ನೀಡಿ, ರಸ್ತೆ ನಿರ್ಮಾಣದ ಭರವಸೆ ನೀಡಿದ್ದಾರೆ. ನಮ್ಮವರೊಂದಿಗೆ ಚರ್ಚಿಸಿ ಮತದಾನದ ಬಗ್ಗೆ ನಿರ್ಧರಿಸಲಾಗುವುದು.
ಸುರೇಶ್‌ ಕಾಳಮನೆ,
    ಸ್ಥಳೀಯರು

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next