ಧಾರವಾಡ: ರಾಜ್ಯ ಸರಕಾರವು ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸದ ಹಿನ್ನೆಲೆಯಲ್ಲಿ 12ನೇ ಸುತ್ತಿನ ಕಾಲು ಮತ್ತು ಬಾಯಿಬೇನೆ ಸಾಮೂಹಿಕ ಲಸಿಕಾ ಕಾರ್ಯಕ್ರಮ ಬಹಿಷ್ಕರಿಸಲು ಕರ್ನಾಟಕ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾ ಘಟಕ ನಿರ್ಧರಿಸಿದೆ.
ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸಲು ಸಂಘವು ಸರಕಾರಕ್ಕೆ ಏ.6ರವರೆಗೆ ಗಡುವು ನೀಡಿತ್ತು. ಆದರೆ ಸರಕಾರದಿಂದ ಯಾವುದೇ ಅಧಿಸೂಚನೆ ಹೊರಡಿಸದೇ ಹೋಗಿದ್ದರಿಂದ ಇದೀಗ ಸಂಘವು ಏ.7ರಿಂದ ಆರಂಭ ಆಗಿರುವ 12ನೇ ಸುತ್ತಿನ ಕಾಲು ಮತ್ತು ಬಾಯಿಬೇನೆ ಸಾಮೂಹಿಕ ಲಸಿಕಾ ಕಾರ್ಯಕ್ರಮ ಬಹಿಷ್ಕರಿಸಿದೆ.
ಈ ಹಿನ್ನೆಲೆಯಲ್ಲಿ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪದಾಧಿಕಾರಿಗಳು ಕೈಗೆ ಕಪ್ಪುಪಟ್ಟಿ ಧರಿಸಿ ಕೆಲ ಹೊತ್ತು ನಗರದ ಪಶು ವೈದ್ಯಕೀಯ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಇಲಾಖೆಯ ಪುನರಚನೆಯ ಆದೇಶದನ್ವಯ ವೃಂದ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು, 2016 ಏಪ್ರಿಲ್‌ನಲ್ಲಿ ಸಚಿವ ಸಂಪುಟದ ಅನುಮೋದನೆ ದೊರೆತಿದೆ.
2016ರ ಜುಲೈನಲ್ಲಿ ಕರಡು ಅಧಿಸೂಚನೆ ಪ್ರಕಟಗೊಂಡು ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡರೂ ಯಾವುದೇ ಕಾರಣವಿಲ್ಲದೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. 12ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಬಹಿಷ್ಕರಿಸಿ ಸಂಘವು ಹೋರಾಟಕ್ಕಿಳಿಯುವುದು ಅನಿವಾರ್ಯ.
ಇದಕ್ಕೂ ಮಣಿಯದಿದ್ದರೆ ಮುಂಬರುವ ರಾಷ್ಟ್ರೀಯ ಕಾರ್ಯಕ್ರಮವಾದ ಜಾನುವಾರು ಗಣತಿಯನ್ನು ಸಹ ಬಹಿಷ್ಕರಿಸುವ ಮೂಲಕ ಸಂಘವು ಹಂತ ಹಂತವಾಗಿ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಹಾಗೂ ರೈತರ ಜಾನುವಾರುಗಳಿಗೆ ನೀಡುವ ದೈನಂದಿನ ಸೇವೆಗಳನ್ನು ಸ್ಥಗಿತಗೊಳಿಸಿ ತೀವ್ರತರವಾದ ಹೋರಾಟಕ್ಕೆ ಇಳಿಯುವುದಾಗಿ ಸಂಘದ ಜಿಲ್ಲಾ ಘಟಕವು ಎಚ್ಚರಿಸಿದೆ. ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಕರ್ಕೋಳ್ಳಿ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಡಾ|ಮಂಜುನಾಥ ಪಾಳೇಗಾರ, ಎಸ್.ಎಂ. ಕರಡಿಗುಡ್ಡ, ಡಾ|ಉಮೇಶ ಕೊಂಡಿ ಇದ್ದರು.