Advertisement

Cauvery issue; ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳದ ನಟ-ನಟಿಯರ ಚಿತ್ರ ಬಹಿಷ್ಕರಿಸಿ: ಯತ್ನಾಳ

05:57 PM Sep 25, 2023 | |

ವಿಜಯಪುರ: ಕಾವೇರಿ ನೀರಿವಾಗಿ ಕನ್ನಡಿಗರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳದ ಚಲನಚಿತ್ರ ನಟರ ಚಿತ್ರಗಳನ್ನು ಕನ್ನಡಿಗರು ಬಹಿಷ್ಕರಿಸಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದು, ಮಂಡ್ಯ ಭಾಗದ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇಂಥ ಹಂತದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು ಹೋರಾಟದಲ್ಲಿ ಭಾಗಿಯಾಗುತ್ತಿಲ್ಲ. ಕನ್ನಡಿಗರಿಂದ ಹಣ ಮಾಡಿಕೊಳ್ಳುವ ಚಿತ್ರರಂಗದವರು, ಕನ್ನಡಿಗರ ಸಂಕಷ್ಟದ ಸಂದರ್ಭದಲ್ಲಿರುವ ಈಗಲಾದರೂ ಚಿತ್ರ ನಟರು ಹೋರಗೆ ಬರಲಿ ಎಂದು ಆಗ್ರಹಿಸಿದರು.

ಇದು ಕನ್ನಡಿಗರ ನೀರಿನ ಪ್ರಶ್ನೆ, ಇದಕ್ಕಾಗಿ ಚಿತ್ರನಟದ ಮನೆಗೆ ಹೋಗಿ ಆರತಿ ತಟ್ಟೆ ಹಿಡಿದು ಆಹ್ವಾನ ನೀಡಲಾಗದು. ಸ್ವಯಂ ಪ್ರೇರಿತವಾಗಿಯೇ ಚಿತ್ರರಂಗದವರು ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಒಂದೊಮ್ಮೆ ಹೋರಾಟದಲ್ಲಿ ಪಾಲ್ಗೊಳ್ಳದಿದ್ದಲ್ಲಿ ಅಂಥ ನಟ-ನಟಿಯರ ಚಿತ್ರಗಳನ್ನು ಕನ್ನಡಿಗರು ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.

ಕನ್ನಡ ಚಿತ್ರಗಳನ್ನು ವೀಕ್ಷಿಸುವುದೇ ಕನ್ನಡಿಗರು. ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕ ಭಾಗದವರು ನಾಯಕ ನಟ-ನಟಿಯರಾಗಿ ಹೆಸರು ಮಾಡಿದವರು ಯಾರೂ ಇಲ್ಲ. ನಮ್ಮ ಭಾಗದವರದ್ದೇನಿದ್ದೂ ಸಣ್ಣಪುಟ್ಟ ಪಾತ್ರಗಳು, ಇಲ್ಲವೇ ಹಾಸ್ಯ ಪಾತ್ರಕ್ಕೆ ಸೀಮಿತಿ. ಅಲ್ಲದೇ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಇರುವವರೇ ಕಾವೇರಿ ಭಾಗದವರು. ದರ್ಶನ್, ಯಶ್ ಸೇರಿದಂತೆ ಹಲವು ನಟ-ನಟಿಯರು ಅದೇ ಭಾಗದವರು ಎಂದರು.

ಕಾವೇರಿ ಕೊಳ್ಳದ ರಾಜ್ಯದಲ್ಲಿರುವ ಜಲಾಶಯಗಳಲ್ಲಿನ ನೀರಿನ ಕೊರತೆ ಹಾಗೂ ಸಂಕಷ್ಟದ ಪರಿಸ್ಥಿತಿ ಕುರಿತು ಸುಪ್ರೀಂ ಕೋರ್ಟ್ ಮುಂದೆ ಸಮರ್ಥ ವಾದ ಮಂಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರದ ವೈಫಲ್ಯದಿಂದಲೇ ರಾಜ್ಯಕ್ಕೆ ಮಾರಕವಾದ ವ್ಯತಿರಿಕ್ತ ತೀರ್ಪು ಬಂದಿದೆ ಎಂದು ಹರಿಹಾಯ್ದರು.

Advertisement

ಕಾವೇರಿ ನದಿ ನೀರು ವ್ಯಾಜ್ಯದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸಬೆಕು ಎಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ಕರ್ನಾಟಕ ಸರ್ಕಾರದವರು ತಮಿಳುನಾಡಿಗೆ ನೀರು ಹರಿಸುವಾಗ ಕೇಂದ್ರ ಸರ್ಕಾರವನ್ನು ಕೇಳಿದ್ದರೆ. ಕಾಂಗ್ರೆಸ್ ಮೈತ್ರಿಕೂಟ ಸೇರಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಖುಷಿ ಪಡಿಸಲು ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿ, ಈಗ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ರಾಜ್ಯದ ಸಂಸದರ ಸಭೆ ಮಾಡದೆ, ಕಾವೇರಿ ನದಿ ನೀರಿನ ಸಮಸ್ಯೆ ಉಲ್ವಣಗೊಳ್ಳುತ್ತಲೇ ಕಾಟಾಚಾರಕ್ಕೆ ಸಭೆ ಮಾಡಿದ್ದಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದಲ್ಲಿ ಯಾವುದೇ ಸರ್ಕಾರ ಇರಲಿ, ಮುಖ್ಯಮಂತ್ರಿ ಹಾಗೂ ಇತರೆ ಸಚಿವರು ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿಯಾಗುತ್ತಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಸಂಪ್ರದಾಯ ಪಾಲಿಸಿಲ್ಲ ಎಂದರು.

ಇದರ ಹೊರತಾಗಿಯೂ ರಾಜ್ಯದ ಸಂಸದರು ತಾವೇ ಸಭೆ ಮಾಡಿ, ಕರ್ನಾಟಕಕ್ಕೆ ಸಂಬಂಧಿಸಿದ ಯೋಜನೆಗಳು, ಅವುಗಳ ಸ್ಥಿತಿಗತಿ ಬಗ್ಗೆ ಮಾತನಾಡುತ್ತಾರೆ. ರಾಜ್ಯಕ್ಕೆ ಪೂರಕವಾದ ಸಹಾಯ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next